ಮಂಡ್ಯ | ಕೆಆರ್‌ಎಸ್ ಹಾಗೂ ಬರಪೀಡಿತ ಹಳ್ಳಿಗಳಲ್ಲಿ ಕೇಂದ್ರದ ಬರ ಅಧ್ಯಯನ ತಂಡದಿಂದ ಪರಿಶೀಲನೆ!
ಮಂಡ್ಯ: ಜಿಲ್ಲೆಯಲ್ಲಿ (Mandya) ತಲೆದೋರಿರುವ ಬರ ಪರಿಸ್ಥಿತಿಯ ವಸ್ತುಸ್ಥಿತಿ ಅರಿಯಲು ಕೇಂದ್ರದ ಬರ ಅಧ್ಯಯನ ತಂಡ (Central Drought Study Team) ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯ...


ಮಂಡ್ಯ: ಜಿಲ್ಲೆಯಲ್ಲಿ (Mandya) ತಲೆದೋರಿರುವ ಬರ ಪರಿಸ್ಥಿತಿಯ ವಸ್ತುಸ್ಥಿತಿ ಅರಿಯಲು ಕೇಂದ್ರದ ಬರ ಅಧ್ಯಯನ ತಂಡ (Central Drought Study Team) ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯ ಡಾ.ನವೀನ್ ಕುಮಾರ್ ಜೈನ್ ನೇತೃತ್ವದ ಅಧಿಕಾರಿಗಳ ತಂಡ, ಪ್ರಮುಖ ಜಲಾಶಯವಾದ ಕೆಆರ್‌ಎಸ್ ಡ್ಯಾಂ (KRS Dam) ಸೇರಿದಂತೆ ಜಿಲ್ಲೆಯ ಹಲವೆಡೆ ಭೇಟಿ ನೀಡಿ ಬರಪೀಡಿತ ಪ್ರದೇಶಗಳ ನೈಜ ಸ್ಥಿತಿಯ ಮಾಹಿತಿ ಕಲೆಹಾಕಿತು. ಮೊದಲಿಗೆ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಭೇಟಿ ನೀಡಿದ ಕೇಂದ್ರ ತಂಡ, ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಬಗ್ಗೆ ಪರಿಶೀಲನೆ ನಡೆಸಿತು. ಡ್ಯಾಂನಲ್ಲಿ ಸದ್ಯ ಲಭ್ಯವಿರುವ ನೀರೆಷ್ಟು? ಅದರಲ್ಲಿ ಕುಡಿಯುವ ನೀರಿಗೆ ಎಷ್ಟು ಮೀಸಲಿಡಲಾಗಿದೆ ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಸಮಗ್ರವಾಗಿ ಅವಲೋಕಿಸಿತು.
ಕೆಆರ್‌ಎಸ್ ಪರಿಶೀಲನೆಯ ನಂತರ ಜಿಲ್ಲೆಯ ವಿವಿಧ ತಾಲೂಕುಗಳ ಬರಪೀಡಿತ ಹಳ್ಳಿಗಳಿಗೆ ತೆರಳಿದ ತಂಡ ಮಳೆಯ ಕೊರತೆಯಿಂದ ಕಂಗಾಲಾಗಿರುವ ರೈತರ ಸಮಸ್ಯೆಗಳನ್ನು ಆಲಿಸಿತು. ಒಣಗುತ್ತಿರುವ ಬೆಳೆಗಳು, ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆಯಿತು.
ಇದೇ ವೇಳೆ ಜಿಲ್ಲೆಯ ನೀರಾವರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಕೇಂದ್ರ ತಂಡಕ್ಕೆ ಜಿಲ್ಲೆಯ ಒಟ್ಟಾರೆ ಬೆಳೆ ಹಾನಿ ನೀರಿನ ಕೊರತೆ ಮತ್ತು ರೈತರು ಎದುರಿಸುತ್ತಿರುವ ವಾಸ್ತವ ಸಂಕಷ್ಟಗಳ ಕುರಿತು ವಿಸ್ತೃತ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿದರು. ಪರಿಶೀಲನೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತಂಡ ತಿಳಿಸಿದೆ.




