ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಅಕ್ರಮ ಗರ್ಭಪಾತ ದಂಧೆಯಲ್ಲಿ ಭಾಗಿ?
– ಮಹಾಲಿಂಗಪುರದ ನಕಲಿ ವೈದ್ಯೆಯ ಮನೆಗೆ ಆರೋಗ್ಯಾಧಿಕಾರಿಗಳ ದಾಳಿ ಬಾಗಲಕೋಟೆ: ಅಕ್ರಮ ಗರ್ಭಪಾತ(Abortion Racket) ಹಾಗೂ ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ(Bail) ಮೇಲೆ ಹೊರಬಂದಿದ...

ಮಹಾಲಿಂಗಪುರದ ನಕಲಿ ವೈದ್ಯೆಯ ನಿವಾಸದ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ
ಬಾಗಲಕೋಟೆ: ಅಕ್ರಮ ಗರ್ಭಪಾತ(Abortion Racket) ಮತ್ತು ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ, ಇತ್ತೀಚೆಗಷ್ಟೇ ಜಾಮೀನಿನ(Bail) ಮೇಲೆ ಬಿಡುಗಡೆ ಹೊಂದಿದ್ದ ನಕಲಿ ವೈದ್ಯೆಯೊಬ್ಬಳು, ಪುನಃ ಅದೇ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಗಂಭೀರ ಅನುಮಾನ ವ್ಯಕ್ತವಾಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಈ ಪ್ರಕರಣ ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಆಕೆಯ ಮನೆಗೆ ತೆರಳಿ ಕಠಿಣ ಎಚ್ಚರಿಕೆಯ ನೋಟಿಸ್ ಜಾರಿಗೊಳಿಸಿದ್ದಾರೆ.
ಮಹಾಲಿಂಗಪುರ ಪಟ್ಟಣದ ನಿವಾಸಿಯಾದ ಕವಿತಾ ಬಾಡನವರ ಈ ಹಿಂದೆ ಲಿಂಗಪತ್ತೆ ಹಾಗೂ ಅಕ್ರಮ ಗರ್ಭಪಾತ ನಡೆಸುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿದ್ದಳು. ಸುಮಾರು ಎರಡು ವರ್ಷಗಳ ಹಿಂದೆ ಈಕೆ ಮಾಡಿದ್ದ ಅಕ್ರಮ ಗರ್ಭಪಾತದ ಅಡ್ಡಪರಿಣಾಮದಿಂದ (Side Effects) ಮಹಾರಾಷ್ಟ್ರದ ಮಹಿಳೆಯೊಬ್ಬಳು ಮೃತಪಟ್ಟಿದ್ದಳು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಒಂದು ವರ್ಷಕ್ಕೂ ಅಧಿಕ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಕವಿತಾ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದಾಳೆ.
ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕವಿತಾ ಮತ್ತೆ ಹಳೆಯ ಕೃತ್ಯದಲ್ಲಿ ನಿರತಳಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಮಹಾರಾಷ್ಟ್ರದ ಯುವತಿಯೊಬ್ಬಳು ತನ್ನ ಸಹಚರರೊಂದಿಗೆ ಕಾರಿನಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಉದ್ದೇಶದಿಂದ ಕವಿತಾ ಮನೆಗೆ ಬಂದಿದ್ದಾಳೆ. ಈ ವಿಷಯವನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಕೂಡಲೇ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಲಾರಿ, ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ – ಏಳು ಮಂದಿ ದುರ್ಮರಣ, 21 ಜನರಿಗೆ ಗಾಯ
ಸಾರ್ವಜನಿಕರ ದೂರಿನನ್ವಯ ಬಾಗಲಕೋಟೆ ಡಿಎಚ್‌ಒ (DHO) ಡಾ. ಸುವರ್ಣಾ ಕುಲಕರ್ಣಿ ಹಾಗೂ ಮುಧೋಳ ಟಿಎಚ್‌ಒ (THO) ಡಾ. ವೆಂಕಟೇಶ್ ಮಲಘಾಣ ನೇತೃತ್ವದ ತಂಡ ಮಹಾಲಿಂಗಪುರದಲ್ಲಿರುವ ಕವಿತಾ ಬಾಡನವರ ಮನೆಗೆ ಅನಿರೀಕ್ಷಿತ ಭೇಟಿ ನೀಡಿತು. ಆದರೆ ಅಧಿಕಾರಿಗಳು ಸ್ಥಳಕ್ಕೆ ತಲುಪುತ್ತಿದ್ದಂತೆ ಕವಿತಾ ಮನೆಯಿಂದ ಪರಾರಿಯಾಗಿದ್ದು, ಮನೆಗೆ ಬೀಗ ಹಾಕಲಾಗಿತ್ತು.
ಈ ಕಾರಣದಿಂದ ಅಧಿಕಾರಿಗಳು ಮನೆಯ ಬಾಗಿಲಿಗೆ ಕಾನೂನು ನೋಟಿಸ್ ಅಂಟಿಸಿದ್ದಾರೆ. “ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ಮುಂದಿನ ಭೇಟಿಯ ಸಂದರ್ಭದಲ್ಲೂ ಮನೆಯಲ್ಲಿ ಹಾಜರಿರದಿದ್ದರೆ, ಕಾನೂನುಬದ್ಧವಾಗಿ ಬೀಗ ಮುರಿದು ಒಳಪ್ರವೇಶಿಸಿ ತಪಾಸಣೆ ನಡೆಸಲಾಗುವುದು” ಎಂದು ನೋಟಿಸ್‌ನಲ್ಲಿ ಕಟ್ಟುನಿಟ್ಟಾದ ಎಚ್ಚರಿಕೆ ನೀಡಲಾಗಿದೆ.




