ಹಾಸನ ದೇವಿಗೆರೆಯಲ್ಲಿ ಪೆಂಡಾಲ್ ಗಣಪತಿ ವಿಸರ್ಜನೆ: ಹಾಸನ ಎಸ್‌ಪಿಗೆ ಡಿಸಿ ನೋಟಿಸ್!
– ಜಿಲ್ಲಾಧಿಕಾರಿ ವಿರುದ್ಧ ಸ್ವರೂಪ್ ಪ್ರಕಾಶ್ ಆಕ್ರೋಶ – ನನಗೆ ಗೊತ್ತಿಲ್ಲ ಎಂದ ಶಿವಲಿಂಗೇಗೌಡ ಹಾಸನ: ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗಣಪತಿ ವಿಸರ್ಜನೆಗೆ(Ganesha Immersion) ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಜಿಲ್ಲ...

– ಜಿಲ್ಲಾಧಿಕಾರಿ ವಿರುದ್ಧ ಸ್ವರೂಪ್ ಪ್ರಕಾಶ್ ಆಕ್ರೋಶ
– ನನಗೆ ಗೊತ್ತಿಲ್ಲ ಎಂದ ಶಿವಲಿಂಗೇಗೌಡ
ಹಾಸನ: ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗಣಪತಿ ವಿಸರ್ಜನೆಗೆ(Ganesha Immersion) ಅವಕಾಶ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ(SP Shubhanwita) ಅವರಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ(DC Lathakumari) ಅವರು ಕಠಿಣ ಪದಗಳನ್ನು ಬಳಸಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಘಟನೆಯು ಹಾಸನದ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಡಿಸಿ ನೋಟಿಸ್‌ನಲ್ಲೇನಿದೆ?
ಅಕ್ಟೋಬರ್ 3ರಂದು ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ನಿಯಮಗಳನ್ನು ಉಲ್ಲಂಘಿಸಿ ಪೆಂಡಾಲ್ ಗೌರಿ-ಗಣಪತಿ ಮೂರ್ತಿಗಳನ್ನು ದೇವಿಗೆರೆ ಆವರಣದಲ್ಲಿ ವಿಸರ್ಜಿಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿ ಮೂರ್ತಿ ವಿಸರ್ಜನೆ ಮಾಡಿದ ಆಯೋಜಕರ ಮೇಲೆ ಪೊಲೀಸರು ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ನಿಮ್ಮ ಈ ವರ್ತನೆಯು ಸರ್ಕಾರಿ ನೌಕರರಿಗೆ ತರವಲ್ಲದ ಬೇಜವಾಬ್ದಾರಿತನವಾಗಿದ್ದು, ವಹಿಸಲಾದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಉದ್ಧಟತನ ತೋರಲಾಗಿದೆ ಎಂದು ದೂರಲಾಗಿದೆ. ಕರ್ತವ್ಯ ಲೋಪ ಮತ್ತು ಉದ್ಧಟತನಕ್ಕಾಗಿ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಏಕೆ ಶಿಫಾರಸು ಮಾಡಬಾರದು ಎಂದು ಪ್ರಶ್ನಿಸಿರುವ ಡಿಸಿ, ನೋಟಿಸ್ ತಲುಪಿದ ತಕ್ಷಣ ಖುದ್ದು ಹಾಜರಾಗಿ ಲಿಖಿತ ಉತ್ತರ ನೀಡುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಸರ್ಕಾರಕ್ಕೆ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
70 ವರ್ಷಗಳ ಇತಿಹಾಸ
ಹಾಸನ(Hassana) ನಗರದ ಪೆಂಡಾಲ್ ಗಣಪತಿಗೆ 70 ವರ್ಷಗಳ ಇತಿಹಾಸವಿದೆ. ಈ ಸಮಿತಿಯಲ್ಲಿ ಎಲ್ಲ ಧರ್ಮದವರು ಪದಾಧಿಕಾರಿಗಳಾಗಿದ್ದು, ಮೆರವಣಿಗೆಯ ವೇಳೆ ಅನ್ಯಧರ್ಮೀಯರು ಹಣ್ಣು-ಹಂಪಲು ಹಂಚುವ ಮೂಲಕ ಭಾವೈಕ್ಯತೆ ಮೆರೆಯುತ್ತಾರೆ. ಅಕ್ಟೋಬರ್ 3 ರಂದು ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಡೋಲು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದರು.
ಆಯೋಜಕರು ಮೂರು ತಿಂಗಳ ಹಿಂದೆಯೇ ಮಾರ್ಗ ಹಾಗೂ ದೇವಿಗೆರೆಯಲ್ಲಿ ವಿಸರ್ಜನೆಗೆ ಅನುಮತಿ ಪಡೆದಿದ್ದರು. ಆದರೆ ಮೆರವಣಿಗೆ ಆರಂಭವಾದ ಒಂದು ಗಂಟೆಯ ಬಳಿಕ, ದೇವಿಗೆರೆ ಸ್ವಚ್ಛತೆಯ ಕಾರಣ ನೀಡಿ ವಿಸರ್ಜನೆಗೆ ಅವಕಾಶವಿಲ್ಲ ಎಂದು ಡಿಸಿ ಇದ್ದಕ್ಕಿದ್ದಂತೆ ನಿರ್ಬಂಧ ಹೇರಿದರು. ಈಗಾಗಲೇ ನಾಲ್ಕು ಗಣೇಶ ಮೂರ್ತಿಗಳನ್ನು ಇದೇ ಕೆರೆಯಲ್ಲಿ ವಿಸರ್ಜಿಸಲು ಅನುಮತಿ ನೀಡಲಾಗಿದ್ದು, ಪೆಂಡಾಲ್ ಗಣಪತಿಗೆ ಮಾತ್ರ ಏಕೆ ನಿರ್ಬಂಧ ವಿಧಿಸಲಾಯಿತು ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೈಸೂರು ದಸರೆಯಲ್ಲಿ ʻಸೂರ್ಯ ಕಿರಣ್ ಏರೋಬ್ಯಾಟಿಕ್ ಶೋʼಗೆ ಕೇಂದ್ರ ಗ್ರೀನ್ ಸಿಗ್ನಲ್
ಸ್ವರೂಪ್ ಪ್ರಕಾಶ್ ಆಕ್ರೋಶ
ಜಿಲ್ಲಾಧಿಕಾರಿ ಅವರ ಈ ಏಕಪಕ್ಷೀಯ ನಿರ್ಧಾರವನ್ನು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ತೀವ್ರವಾಗಿ ಖಂಡಿಸಿದ್ದಾರೆ. ದೇವಿಗೆರೆ ಸ್ವಚ್ಛತೆಯ ಬಗ್ಗೆ ನಮಗೂ ಕಾಳಜಿ ಇದೆ. ಆದರೆ ನಗರದ ಬಹುತೇಕ ಗಣಪತಿಗಳನ್ನು ದೇವಿಗೆರೆಯಲ್ಲೇ ವಿಸರ್ಜಿಸಲಾಗಿದೆ. 70 ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಗಣಪತಿಗೆ ಮೆರವಣಿಗೆ ಹೊರಟ ಮೇಲೆ ಏಕಾಏಕಿ ನಿರ್ಬಂಧ ಹೇರಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಡಿಸಿ ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ನಾನು ಎರಡು-ಮೂರು ಬಾರಿ ಕರೆ ಮಾಡಿ ಪರಿಸ್ಥಿತಿ ವಿವರಿಸಿದರೂ ಹಠ ಬಿಡಲಿಲ್ಲ. ಎಸ್ಪಿಗೆ ನೋಟಿಸ್ ನೀಡಿರುವುದು ಅಧಿಕಾರಿಗಳ ನಡುವೆ ಗೊಂದಲ ಉಂಟುಮಾಡುತ್ತದೆ. ಹಾಸನಾಂಬೆ ಜಾತ್ರಾ ಮಹೋತ್ಸವ ಸಮೀಪಿಸುತ್ತಿರುವಾಗ ಅಧಿಕಾರಿಗಳ ನಡುವೆಯೇ ಹೊಂದಾಣಿಕೆ ಇಲ್ಲದಿದ್ದರೆ ಜಾತ್ರೆ ಹೇಗೆ ನಡೆಸುತ್ತಾರೆ ಎಂದು ಅವರು ಕೇಳಿದ್ದಾರೆ.
ಆಯೋಜಕರ ಮೇಲೆ ಕ್ರಮ ಕೈಗೊಳ್ಳಿ ಎಂದು ಡಿಸಿ ಹೇಳಿದ್ದಾರೆ. ಒಂದು ವೇಳೆ ಆಯೋಜಕರ ಮೇಲೆ ಪ್ರಕರಣ ದಾಖಲಿಸಿದರೆ, ಹಾಸನದ ಸಮಸ್ತ ಜನತೆಯನ್ನು ಒಗ್ಗೂಡಿಸಿ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ನನಗೆ ಗೊತ್ತಿಲ್ಲ
ಈ ವಿದ್ಯಮಾನದ ಕುರಿತು ಪ್ರತಿಕ್ರಿಯಿಸಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ತಮಗೆ ನೋಟಿಸ್ ಜಾರಿಯಾದ ವಿಷಯವೇ ತಿಳಿದಿಲ್ಲ ಎಂದಿದ್ದಾರೆ. ಬಹಳ ವರ್ಷಗಳಿಂದಲೂ ದೇವಿಗೆರೆಯಲ್ಲೇ ಗಣಪತಿ ವಿಸರ್ಜನೆ ಮಾಡಲಾಗುತ್ತಿದೆ, ಅದನ್ನು ತಡೆಯಲು ಸಾಧ್ಯವಿಲ್ಲ. ಗಣಪತಿ ಸಮಿತಿಯ ಅಧ್ಯಕ್ಷರು ನನಗೆ ಕರೆ ಮಾಡಿದ್ದರು, ಎಲ್ಲಾದರೂ ಒಂದು ಕಡೆ ಗಣಪತಿ ಬಿಡಲೇಬೇಕಲ್ಲವೇ? ಇದರ ನಡುವೆ ಡಿಸಿಯವರು ಎಸ್ಪಿಗೆ ಏಕೆ ನೋಟಿಸ್ ಕೊಟ್ಟರೋ ನನಗಂತೂ ಗೊತ್ತಿಲ್ಲ. ಅವರ ನಡುವೆ ಏನಾದರೂ ವೈಯಕ್ತಿಕ ದ್ವೇಷವಿದೆಯೋ ತಿಳಿಯದು. ನಾನು ಈ ಬೆಳವಣಿಗೆಯನ್ನು ಒಪ್ಪುವುದಿಲ್ಲ. ಈ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಹಾಸನಾಂಬೆ ಮಹೋತ್ಸವ ಸಮೀಪಿಸುತ್ತಿರುವ ಹೊತ್ತಲ್ಲೇ, ಜಿಲ್ಲೆಯ ಇಬ್ಬರು ಉನ್ನತ ಐಎಎಸ್-ಐಪಿಎಸ್ ಅಧಿಕಾರಿಗಳ ನಡುವಿನ ಈ ಸಂಘರ್ಷ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.




