ದೂರು ಕೊಡಲು ಕಚೇರಿಗೆ ಹೋಗಬೇಕೋ, ಫ್ರೀಡಂ ಪಾರ್ಕ್‌ಗೋ?: ಬಿಜೆಪಿಗೆ ಸಚಿವ ಕಾಶಪ್ಪನವರ್ ಪ್ರಶ್ನೆ
ಬಾಗಲಕೋಟೆ: ನಾವು ಪ್ರತಿಭಟನೆ ಮಾಡಿಲ್ಲ, ಚುನಾವಣಾ ಆಯೋಗಕ್ಕೆ (Election Commission) ದೂರು ಹಾಗೂ ಮನವಿ ಸಲ್ಲಿಸಲು ಹೋಗಿದ್ದೆವು. ದೂರು ಕೊಡಲು ಕಚೇರಿಗೆ ಹೋಗಬೇಕೋ ಅಥವಾ ಫ್ರೀಡಂ ಪಾರ್ಕ್‌ಗೆ ಹೋಗಬೇಕೋ ಎಂದು ಪಕ್ಷದ ನಡೆ...

ಬಾಗಲಕೋಟೆ: ನಾವು ಯಾವುದೇ ಪ್ರತಿಭಟನೆಯನ್ನು ನಡೆಸಿಲ್ಲ, ಬದಲಾಗಿ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಲು ಹಾಗೂ ಮನವಿ ಸಲ್ಲಿಸಲು ತೆರಳಿದ್ದೆವು. ದೂರು ಸಲ್ಲಿಸಲು ಕಚೇರಿಗೆ ಹೋಗಬೇಕೇ ಅಥವಾ ಫ್ರೀಡಂ ಪಾರ್ಕ್‌ಗೆ ಹೋಗಬೇಕೇ ಎಂದು ಪ್ರಶ್ನಿಸುವ ಮೂಲಕ ಸಚಿವ ಕಾಶಪ್ಪನವರ್(Vijayanand Kashappanavar) ತಮ್ಮ ಪಕ್ಷದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಚುನಾವಣಾ ಆಯೋಗದ ಕಚೇರಿಯ ಬಳಿ ಕಾಂಗ್ರೆಸ್ (Congress) ನಿಯೋಗ ಭೇಟಿ ನೀಡಿದ್ದನ್ನು ಪ್ರತಿಭಟನೆ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿರುವ ಕುರಿತು ಬೀಳಗಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.
ನಾವು ಎಲ್ಲಿಯೂ ಧರಣಿ ನಡೆಸಿಲ್ಲ ಅಥವಾ ಪ್ರತಿಭಟನೆಯನ್ನೂ ಮಾಡಿಲ್ಲ. ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರು ಚುನಾವಣಾ ಆಯೋಗದ ಕಚೇರಿಗೆ ನಿಯಮದಂತೆ ಮನವಿ ಸಲ್ಲಿಸಲು ಹೋಗಿದ್ದೆವು. ಅಕ್ರಮದ ವಿಷಯವಾಗಿ ಕಚೇರಿಗೆ ಹೋಗಿ ದೂರು ನೀಡುವುದನ್ನು ಬಿಟ್ಟು ಫ್ರೀಡಂ ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಸಾಧ್ಯವೇ? ಕಾನೂನನ್ನು ಉಲ್ಲಂಘಿಸಿರುವುದು ನಾವಲ್ಲ, ಬಿಜೆಪಿಯವರು ಎಂದು ಅವರು ಆರೋಪಿಸಿದರು.
ಸುಮಾರು 24,000 ಎಸ್ ಐ ಆರ್ ಫಾರ್ಮ್ ನಂಬರ್ 7 ಪ್ರಿಂಟ್ ಆಗಿದೆ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಈ ನಿಖರ ಮಾಹಿತಿ ಅವರಿಗೆ ಹೇಗೆ ಸಿಕ್ಕಿತು? ಚುನಾವಣಾ ಆಯೋಗದವರು ಇವರಿಗೆ ಮೊದಲೇ ಮಾಹಿತಿ ನೀಡಿದ್ದಾರೆಯೇ? ವಾಸ್ತವವಾಗಿ ಇವರೇ ನಕಲಿ ಫಾರ್ಮ್‌ಗಳನ್ನು ಮುದ್ರಿಸಿಕೊಂಡಿದ್ದಾರೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ ಎಂದು ಅವರು ತಿರುಗೇಟು ನೀಡಿದರು.
ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರೇ ಸ್ವತಃ ನಕಲಿ ಫಾರ್ಮ್‌ಗಳನ್ನು ಭರ್ತಿ ಮಾಡಿ ಪ್ರತಿ ಮತಕ್ಷೇತ್ರಕ್ಕೂ ಹಂಚಿಕೆ ಮಾಡುತ್ತಿದ್ದಾರೆ. ಇದು ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ನಾಚಿಕೆಗೇಡಿನ ಕೆಲಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಕೈಬಿಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಕಾಶಪ್ಪನವರ ಎಚ್ಚರಿಕೆ ನೀಡಿದರು.




