ಧಮ್ ಇದ್ರೆ ಅಜ್ಜಯ್ಯನ ಮುಂದೆ ಪ್ರಮಾಣ ಮಾಡಿ – ಚಲುವರಾಯಸ್ವಾಮಿಗೆ ಸುರೇಶ್ ಗೌಡ ಸವಾಲ್!
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಆಣೆ-ಪ್ರಮಾಣ ರಾಜಕೀಯ ಶುರುವಾಗಿದೆ. ನಾಗಮಂಗಲದ (Nagamangala) ಬಗರ್‌ಹುಕುಂ ಭೂಮಿ (Bagar-Hukum Land) ಮಂಜೂರಾತಿ ರದ್ದು ಪ್ರಕರಣ ಈಗ ಕೈ-ದಳ ನಾಯಕರ ನಡುವಿನ ಸಮರಕ್ಕೆ ನ...

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಆಣೆ-ಪ್ರಮಾಣದ ರಾಜಕೀಯ ಆರಂಭವಾಗಿದೆ. ನಾಗಮಂಗಲದ (Nagamangala) ಬಗರ್‌ಹುಕುಂ ಭೂಮಿ (Bagar-Hukum Land) ಮಂಜೂರಾತಿ ರದ್ದಾದ ವಿಷಯ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಸಚಿವ ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಸುರೇಶ್ ಗೌಡ, ದಮ್ಮಿದ್ದರೆ ಅಜ್ಜಯ್ಯನ ಮುಂದೆ ಆಣೆ ಮಾಡುವಂತೆ ಬಹಿರಂಗ ಸವಾಲು ಹಾಕಿದ್ದಾರೆ. ಅಲ್ಲದೆ, ರೈತರಿಂದ ಒಂದು ರೂಪಾಯಿ ಲಂಚ ಪಡೆದಿದ್ದು ಸಾಬೀತಾದರೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸವಾಲು ಹಾಕಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿ ಹೊಸ ತಿರುವು ಪಡೆದುಕೊಂಡಿದೆ. ಜೆಡಿಎಸ್‌ನ ಸುರೇಶ್ ಗೌಡ (Suresh Gowda) ಅವರು ಶಾಸಕರಾಗಿದ್ದ ಕಾಲದಲ್ಲಿ ಬಗರ್‌ಹುಕುಂ ಯೋಜನೆಯಡಿ ರೈತರಿಗೆ ನೀಡಿದ್ದ ಸಾಗುವಳಿ ಪತ್ರಗಳನ್ನು ಜಿಲ್ಲಾಡಳಿತ ಹಠಾತ್ತಾಗಿ ರದ್ದುಗೊಳಿಸಿರುವುದಕ್ಕೆ ಸಚಿವ ಚಲುವರಾಯಸ್ವಾಮಿ (N Chaluvaraya Swamy) ಅವರೇ ಕಾರಣ ಎಂದು ಜೆಡಿಎಸ್ ಆರೋಪಿಸುತ್ತಿದೆ. ಸಚಿವರ ದ್ವೇಷದ ರಾಜಕೀಯದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಾಗಮಂಗಲದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ ಸಚಿವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸುರೇಶ್ ಗೌಡ ಆಣೆ ಪ್ರಮಾಣಕ್ಕೂ ಬಹಿರಂಗ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಪ್ರೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ದುರ್ಮರಣ
ಅರ್ಜಿ ಸಲ್ಲಿಸಿದ್ದ ರೈತರ ಅರ್ಹತೆ ಮತ್ತು ಅನುಭವವನ್ನು ಪರಿಶೀಲಿಸಿ, ಪಕ್ಷಾತೀತವಾಗಿ ಸಾಗುವಳಿ ಪತ್ರ ನೀಡಲಾಗಿತ್ತು. ಆದರೆ, ಸಚಿವ ಚಲುವರಾಯಸ್ವಾಮಿ ಅವರು ದುರುದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಾಗುವಳಿ ಪತ್ರವನ್ನು ವಜಾಗೊಳಿಸಿದ್ದಾರೆ ಎಂಬುದು ಸುರೇಶ್ ಗೌಡ ಅವರ ಗಂಭೀರ ಆರೋಪವಾಗಿದೆ. ರೈತರಿಂದ ನಾನು ಒಂದು ರೂಪಾಯಿ ಲಂಚ ಪಡೆದಿರುವುದನ್ನು ಸಾಬೀತುಪಡಿಸಿದರೆ ಅಥವಾ ಜಮೀನು ಮಂಜೂರಾತಿ ವಿಷಯದಲ್ಲಿ ನಾನು ತಪ್ಪು ಮಾಡಿದ್ದರೆ ಸಾರ್ವಜನಿಕವಾಗಿ ಕತ್ತು ಕೊಯ್ದುಕೊಂಡು ಸೂಸೈಡ್ ಮಾಡಿಕೊಳ್ಳುತ್ತೇನೆ. ಚಲುವರಾಯಸ್ವಾಮಿಗೆ ತಾಕತ್ತಿದ್ದರೆ, ತಾನು ತಪ್ಪು ಮಾಡಿಲ್ಲ ಎಂದಾದರೆ ಅಜ್ಜಯ್ಯನ ಮುಂದೆ ಪ್ರಮಾಣ ಮಾಡಲಿ. ಅವರು ಹೇಳಿದ ಸ್ಥಳಕ್ಕೆ ಬಂದು ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಇಂದು ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
ಇನ್ನು ಮಂಜೂರಾತಿ ರದ್ದುಗೊಳಿಸಿದ ಆದೇಶವನ್ನು ಹಿಂಪಡೆಯಲು 10 ದಿನಗಳ ಗಡುವು ನೀಡಿದ್ದಾರೆ. 10 ದಿನದ ಒಳಗಾಗಿ ಆದೇಶ ವಾಪಸ್ ಪಡೆಯಬೇಕು. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ವಾದ ಮಂಡಿಸಲು ರೈತರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಅಮರಣಾಂತ ಉಪವಾಸ ಕೂರುವುದಾಗಿ ಹೇಳಿದ ಸುರೇಶ್ ಗೌಡ, ರೈತರಿಗಾಗಿ ಯಾವುದೇ ಹಂತದ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್, ಬರಪೀಡಿತ ಹಳ್ಳಿಗಳ ಪರಿಶೀಲನೆ
ಒಟ್ಟಾರೆಯಾಗಿ ಬಗರ್ ಹುಕುಂ ಜಮೀನು ವಿಚಾರ ಸಕ್ಕರೆ ನಾಡಿನಲ್ಲಿ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸುರೇಶ್ ಗೌಡ ಅವರ 10 ದಿನಗಳ ಡೆಡ್ ಲೈನ್‌ಗೆ ಸಚಿವ ಚಲುವರಾಯಸ್ವಾಮಿ ಹಾಗೂ ಜಿಲ್ಲಾಡಳಿತ ಹೇಗೆ ಸ್ಪಂದಿಸುತ್ತದೆ? ಅಜ್ಜಯ್ಯನ ಪ್ರಮಾಣದ ಸವಾಲನ್ನು ಸಚಿವರು ಸ್ವೀಕರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: Asian Games 2026: ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಮೈಸೂರಿನ ಪ್ರಣವಿ ಅರಸ್




