ರೈಲ್ವೆ ಇಲಾಖೆ: ಬೆಂಗಳೂರು-ಮಂಗಳೂರು-ಕಾರವಾರ ಮಾರ್ಗದ 7 ರೈಲುಗಳಿಗೆ ಇನ್ಮುಂದೆ ಎಲೆಕ್ಟ್ರಿಕ್ ಎಂಜಿನ್!
ಬೆಂಗಳೂರು-ಮಂಗಳೂರು-ಕಾರವಾರ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್‌ಗಳ ಮೂಲಕ ಓಡಿಸಲು ನೈಋತ್ಯ ರೈಲ್ವೆ ಮುಂದಾಗಿದೆ. ಘಟ್ಟ ಪ್ರದೇಶಗಳಲ್ಲಿಯೂ ಎಲೆಕ್ಟ್ರಿಕ್ ಗೂಡ್ಸ್ ಎಂಜಿನ್‌ಗಳನ್ನು ಬಳಸಲಾಗುವುದ...

ಮಂಗಳೂರು (ಅ.11): ಮಂಗಳೂರು ಮಾರ್ಗದ ಮೂಲಕ ಬೆಂಗಳೂರು-ಮಡಗಾವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆಯು ಸಿದ್ಧತೆಗಳನ್ನು ಮಾಡುತ್ತಿರುವ ಬೆನ್ನಲ್ಲೇ, ಬೆಂಗಳೂರು-ಮಂಗಳೂರು-ಕಾರವಾರ ಮಾರ್ಗದಲ್ಲಿ ಪ್ರಸ್ತುತ ಡೀಸೆಲ್ ಎಂಜಿನ್ ಬಳಸಿ ಸಂಚರಿಸುತ್ತಿರುವ ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್‌ಗಳ ಮೂಲಕ ಓಡಿಸುವ ಕುರಿತು ನೈಋತ್ಯ ರೈಲ್ವೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.
ರೈಲುಗಳ ಸಂಚಾರಕ್ಕೆ ಹೆಚ್ಚುವರಿ ಶಕ್ತಿ
ಇದರ ಪರಿಣಾಮವಾಗಿ ಈ ಮಾರ್ಗದ 7 ರೈಲುಗಳು ಆರಂಭದಿಂದ ಅಂತ್ಯದವರೆಗೆ ಎಲೆಕ್ಟ್ರಿಕ್ ಎಂಜಿನ್‌ಗಳನ್ನೇ ಬಳಸಲಿವೆ. ಇದರಿಂದ ರೈಲ್ವೆ ಇಲಾಖೆಗೆ ಡೀಸೆಲ್ ವೆಚ್ಚದಲ್ಲಿ ದೊಡ್ಡ ಮಟ್ಟದ ಉಳಿತಾಯವಾಗಲಿದೆ. ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಮಧ್ಯೆ ಸದ್ಯ 2 ಡೀಸೆಲ್ ಎಂಜಿನ್‌ಗಳನ್ನು ಬ್ಯಾಂಕರ್‌ಗಳಾಗಿ ಅಳವಡಿಸಿ ರೈಲುಗಳನ್ನು ಓಡಿಸಲಾಗುತ್ತಿದ್ದು, ಇವುಗಳ ಬದಲಿಗೆ 2 ಎಲೆಕ್ಟ್ರಿಕ್ ಗೂಡ್ಸ್ ಎಂಜಿನ್‌ಗಳನ್ನು (ಡಬ್ಲ್ಯುಎಜಿ 9ಎಚ್‌ಸಿ) ಜೋಡಿಸಲಾಗುತ್ತದೆ. ಘಟ್ಟದ ಪ್ರದೇಶಗಳಲ್ಲಿ ರೈಲುಗಳ ಸುಗಮ ಸಂಚಾರಕ್ಕೆ ಅಗತ್ಯವಿರುವ ಹೆಚ್ಚುವರಿ ಶಕ್ತಿಯನ್ನು ಒದಗಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.




