ಉಡುಪಿ: ಜಾಮಿಯಾ ಮಸೀದಿಯಲ್ಲಿ ಕಾರ್ಯದರ್ಶಿ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆ
ಉಡುಪಿಯ ಜಾಮಿಯಾ ಮಸೀದಿಯ ಕಾರ್ಯದರ್ಶಿ ಖಾಲೀದ್ ಅಬ್ದುಲ್ ಅಜೀಜ್ ಅವರ ಮೇಲೆ ಮಸೀದಿಯ ಒಳಗಡೆ ಐವರು ವ್ಯಕ್ತಿಗಳು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿ...

ಉಡುಪಿಯ ಜಾಮಿಯಾ ಮಸೀದಿಯ ಕಾರ್ಯದರ್ಶಿ ಖಾಲೀದ್ ಅಬ್ದುಲ್ ಅಜೀಜ್ ಅವರ ಮೇಲೆ ಮಸೀದಿಯ ಒಳಗಡೆ ಐವರು ವ್ಯಕ್ತಿಗಳು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, ಅಕ್ಟೋಬರ್ 9, 2026ರ ಶುಕ್ರವಾರ ಮಧ್ಯಾಹ್ನ ಜುಮಾ ನಮಾಝ್ ನಂತರ ಸುಮಾರು 1:45 ಗಂಟೆಗೆ ಈ ಘಟನೆ ನಡೆದಿದೆ. ನಝೀರ್ ಅಹ್ಮದ್, ಶಂಶುದ್ದೀನ್, ಹನೀಫ್, ಬಶೀರ್ ಅಬ್ದುಲ್ ರಹಮಾನ್ ಮತ್ತು ಅಝರ್ ಎಂಬುವರು ಸೇರಿ ಕಾರ್ಯದರ್ಶಿಯನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರಿದಿದ್ದಾರೆ.
ಆರೋಪಿತರು ಖಾಲೀದ್ ಅಬ್ದುಲ್ ಅಜೀಜ್ ಅವರ ಮುಖ, ತಲೆ ಮತ್ತು ಮೂಗಿನ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮಸೀದಿಯ ಒಳಾಂಗಣದ ಕಡೆಗೆ ಓಡಿದಾಗಲೂ ಆರೋಪಿತರು ಬೆನ್ನಟ್ಟಿ ಬಂದು ಮತ್ತೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಅಲ್ಲದೆ, ಆರೋಪಿತರು ಪಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಮಾಂಕ 145/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 352, 351(2), 118(1) ಹಾಗೂ 190ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಉಡುಪಿ ನಗರ ಪೊಲೀಸ್ ಠಾಣೆ — ಅಪರಾಧ ಕ್ರಮಾಂಕ 145/2026



