ಸೋಶಿಯಲ್ ಮೀಡಿಯಾ ಫೇಮ್ ‘ಅಗ್ಗಿಪೆಟ್ಟೆ ಮಚ್ಚ’ ಕಿರಣ್ ಕುಮಾರ್ ಇನ್ನಿಲ್ಲ: ಫ್ಯಾನ್ಸ್‌ಗೆ ಶಾಕ್, ಏನಾಯ್ತು?
‘ಅಗ್ಗಿಪೆಟ್ಟೆ ಮಚ್ಚ’ ಖ್ಯಾತಿಯ ಸೋಶಿಯಲ್ ಮೀಡಿಯಾ ಕಾಮಿಡಿಯನ್ ಕಿರಣ್ ಕುಮಾರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ತಿರುಪತಿಯ ಸ್ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯು...

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಖ್ಯಾತಿ ಪಡೆದಿದ್ದ ‘ಅಗ್ಗಿಪೆಟ್ಟೆ ಮಚ್ಚ’ ಎಂದೇ ಕರೆಯಲ್ಪಡುವ ಕಿರಣ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣದಿಂದ ತಿರುಪತಿಯ ಸ್ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಕಿರಣ್ ಕುಮಾರ್ ಅವರ ಅಗಲಿಕೆಯ ಸುದ್ದಿಯಿಂದ ಅವರ ಕುಟುಂಬದವರು, ಆಪ್ತ ಸ್ನೇಹಿತರು ಹಾಗೂ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿನ ತಮ್ಮ ವಿಭಿನ್ನ ಸಂಭಾಷಣೆ, ಹಾವಭಾವ ಹಾಗೂ ಹಾಸ್ಯ ಪ್ರಜ್ಞೆಯಿಂದ ಅವರು ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು
ತಿರುಪತಿಯವರಾದ ಕಿರಣ್ ಕುಮಾರ್ ಕಳೆದ ಕೆಲವು ದಿನಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರು. ಅಕ್ಟೋಬರ್ 5ರಂದು ಅವರನ್ನು ತಿರುಪತಿಯ ಸ್ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಿದರೂ, ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
‘ಅಗ್ಗಿಪೆಟ್ಟೆ ಮಚ್ಚ’ ಹೆಸರಿನಿಂದಲೇ ಫೇಮಸ್
ಕಿರಣ್ ಕುಮಾರ್ ಅವರಿಗೆ ‘ಅಗ್ಗಿಪೆಟ್ಟೆ ಮಚ್ಚ’ ಎಂಬ ಬಿರುದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಗುರುತನ್ನು ನೀಡಿತು. ತಮ್ಮದೇ ಆದ ವಿಶಿಷ್ಟ ಡೈಲಾಗ್‌ಗಳು, ಎಕ್ಸ್‌ಪ್ರೆಶನ್‌ಗಳು ಹಾಗೂ ಕಾಮಿಡಿ ಶೈಲಿಯ ಮೂಲಕ ಅವರು ನೆಟ್ಟಿಗರನ್ನು ರಂಜಿಸುತ್ತಿದ್ದರು. ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದವು. ಅಲ್ಪಾವಧಿಯಲ್ಲೇ ಅವರ ಡೈಲಾಗ್‌ಗಳು ಮತ್ತು ಎಕ್ಸ್‌ಪ್ರೆಶನ್‌ಗಳು ಮೀಮ್ಸ್‌ಗಳ ರೂಪದಲ್ಲಿಯೂ ಜನಪ್ರಿಯಗೊಂಡಿದ್ದವು.
ಸೆಲೆಬ್ರಿಟಿಗಳಿಗೂ ಕಡಿಮೆಯಿರಲಿಲ್ಲ ಕ್ರೇಜ್!
‘ಅಗ್ಗಿಪೆಟ್ಟೆ ಮಚ್ಚ’ ಕಿರಣ್ ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ಯೂಟ್ಯೂಬ್ ಚಾನೆಲ್‌ಗಳು ಅವರ ಸಂದರ್ಶನ ಪಡೆಯಲು ಕಾದು ಕುಳಿತುಕೊಳ್ಳುವಷ್ಟರ ಮಟ್ಟಿಗೆ ಅವರು ಫೇಮಸ್ ಆಗಿದ್ದರು. ಸಿನಿಮಾ ಸೆಲೆಬ್ರಿಟಿಗಳಿಗೆ ಇರುವಂತೆ ಅವರಿಗೂ ದೊಡ್ಡ ಫ್ಯಾನ್ ಫಾಲೋಯಿಂಗ್ ಇತ್ತು. ಕಳೆದ ಕೆಲವು ದಿನಗಳಿಂದ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರಲಿಲ್ಲ. ಇದೀಗ ಅವರ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಹಾಗೂ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ.
ಅಭಿಮಾನಿಗಳಿಂದ ಸಂತಾಪ
ಕಿರಣ್ ಕುಮಾರ್ ಅವರ ನಿಧನಕ್ಕೆ ಹಲವು ಯೂಟ್ಯೂಬರ್‌ಗಳು, ಕಲಾವಿದರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ತಮ್ಮ ಹಾಸ್ಯದ ಮೂಲಕ ಜನರನ್ನು ನಗಿಸುತ್ತಿದ್ದ ವ್ಯಕ್ತಿ ಹೀಗೆ ಅಕಾಲಿಕವಾಗಿ ಮೃತಪಟ್ಟಿರುವುದು ನೋವು ತಂದಿದೆ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಅಭಿಮಾನಿಗಳು ಹಾಗೂ ಆಪ್ತರು ಪ್ರಾರ್ಥಿಸಿದ್ದಾರೆ.




