ಚಾಂಪಿಯನ್ ಆಟಗಾರನಿಗೆ ಇದೆಂಥಾ ಅವಮಾನ? ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟವನಿಗೆ ಮುಂಬೈ ರಣಜಿ ತಂಡದಲ್ಲಿಲ್ಲ ಸ್ಥಾನ..!
ಮುಂಬೈ ರಣಜಿ ಟ್ರೋಫಿ ತಂಡವನ್ನು ಪ್ರಕಟಿಸಲಾಗಿದ್ದು, ಲಭ್ಯವಿದ್ದರೂ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಕಡೆಗಣಿಸಲಾಗಿದೆ. ಸಿದ್ದೇಶ್ ಲಾಡ್ ನಾಯಕರಾಗಿದ್ದು, 19 ವರ್ಷದ ಆಯುಷ್ ಮ್ಹಾತ್ರೆಗೆ ಉಪನಾಯಕನ ಪಟ್ಟ ಕಟ್...

ಮುಂಬೈ: ಮುಂಬೈ ರಣಜಿ ಟ್ರೋಫಿ ತಂಡದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ ಸಿಕ್ಕಿಲ್ಲ. ರಣಜಿ ಆಡುವ ಆಸಕ್ತಿಯನ್ನು ಅವರು ವ್ಯಕ್ತಪಡಿಸಿದ್ದರು. ಆದರೆ ಮುಂಬೈ ಟೀಮ್ ಮ್ಯಾನೇಜ್‌ಮೆಂಟ್ ಅವರನ್ನು ಆಯ್ಕೆ ಮಾಡಿಲ್ಲ. ಭಾರತ ಕ್ರಿಕೆಟ್ ತಂಡಕ್ಕೆ ಆಟಗಾರನಾಗಿ ಹಾಗೆ ನಾಯಕನಾಗಿ ಎರಡು ಟಿ20 ವಿಶ್ವಕಪ್ ಗೆದ್ದುಕೊಟ್ಟ ಚಾಂಪಿಯನ್ ಆಟಗಾರನಿಗೆ ಇದೀಗ ದೊಡ್ಡ ನಿರಾಸೆ ಎದುರಾಗಿದೆ. ತಾವು ರಣಜಿ ಟ್ರೋಫಿ ಟೂರ್ನಿಗೆ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದರೂ ಸೂರ್ಯರನ್ನು ಮುಂಬೈ ಕ್ರಿಕೆಟ್ ಆಯ್ಕೆ ಸಮಿತಿ ಕಡೆಗಣಿಸಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಮೊದಲ ಪಂದ್ಯಕ್ಕೆ ಮುಂಬೈ ರಣಜಿ ತಂಡ ಪ್ರಕಟ:
ಚಂಡೀಗಢ ವಿರುದ್ಧದ ಮೊದಲ ಪಂದ್ಯಕ್ಕೆ ಇದೀಗ ತಂಡವನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 11ರಂದು ಈ ಪಂದ್ಯ ಶುರುವಾಗಲಿದೆ. ಆಯ್ಕೆ ಸಮಿತಿಯು ಯುವ ಆಟಗಾರ ಆಯುಷ್ ಮ್ಹಾತ್ರೆ ಅವರನ್ನು ತಂಡದ ಉಪನಾಯಕನಾಗಿ ಆಯ್ಕೆ ಮಾಡಿದೆ. ಗಾಯಗೊಂಡಿರುವ ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಮೊದಲ ಎರಡು ಪಂದ್ಯಗಳಿಗೆ ಮುಂಬೈ ತಂಡದಲ್ಲಿ ಇರುವುದಿಲ್ಲ.
ಕಳೆದ 18 ತಿಂಗಳುಗಳಿಂದ ಸೂರ್ಯಕುಮಾರ್ ಯಾದವ್ ರೆಡ್ ಬಾಲ್ ಕ್ರಿಕೆಟ್ ಆಡಿಲ್ಲ. ಹೀಗಾಗಿ ರಣಜಿ ಟ್ರೋಫಿಯಂತಹ ದೊಡ್ಡ ಟೂರ್ನಿಗೂ ಮುನ್ನ ಅವರು ಲಯ ಕಂಡುಕೊಳ್ಳಲು ತಾಲೀಮು ನಡೆಸುವ ಅಗತ್ಯವಿದೆ ಎಂದು ಮುಂಬೈ ಮುಖ್ಯ ಆಯ್ಕೆಗಾರ ರಾಜೇಶ್ ಪವಾರ್ ಸ್ಪಷ್ಟಪಡಿಸಿದ್ದಾರೆ. ಕ್ರಿಕೆಟ್ ವೃತ್ತಿಜೀವನದಲ್ಲಿ ಸೂರ್ಯಕುಮಾರ್ ಯಾದವ್ ಅವರ ಗ್ರಾಫ್ ಕುಸಿಯುತ್ತಿದೆ. ಟಿ20 ವಿಶ್ವಕಪ್ ಗೆದ್ದುಕೊಟ್ಟರೂ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಶ್ರೇಯಸ್ ಅಯ್ಯರ್ ಈಗ ಟಿ20 ನಾಯಕರಾಗಿದ್ದಾರೆ.
ಆಯುಷ್‌ಗೆ ಉಪನಾಯಕ ಪಟ್ಟ
19 ವರ್ಷದ ಆಯುಷ್, ಅಂಡರ್-19 ವಿಶ್ವಕಪ್ ಗೆಲುವಿನತ್ತ ಭಾರತವನ್ನು ಮುನ್ನಡೆಸಿದ್ದಕ್ಕಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಕೇವಲ 13 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಆಯುಷ್ ಅವರನ್ನು ಭವಿಷ್ಯದ ನಾಯಕನಾಗಿ ಬೆಳೆಸುವ ಯೋಜನೆಯನ್ನು ಮುಂಬೈ ಹೊಂದಿದೆ. 16 ಸದಸ್ಯರ ಈ ತಂಡದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಕೂಡ ಸ್ಥಾನ ಪಡೆದಿದ್ದಾರೆ. ಸಿದ್ದೇಶ್ ಲಾಡ್ ತಂಡದ ನಾಯಕರಾಗಿದ್ದಾರೆ. ಆಯ್ಕೆಗಾರರು ತಂಡದ ಹಿರಿಯ ಸದಸ್ಯ ಸರ್ಫರಾಜ್ ಖಾನ್ ಅವರನ್ನು ನಾಯಕತ್ವದ ಜವಾಬ್ದಾರಿಗೆ ಪರಿಗಣಿಸಿಲ್ಲ, ಇದು ಚರ್ಚೆಗೆ ಗ್ರಾಸವಾಗಿದೆ. ಪ್ರೀ-ಸೀಸನ್ ಪ್ರದರ್ಶನದ ಆಧಾರದ ಮೇಲೆ 2020ರ ಅಂಡರ್-19 ವಿಶ್ವಕಪ್ ಆಡಿದ್ದ ದಿವ್ಯಾನ್ಶ್ ಸಕ್ಸೇನಾ ಅವರನ್ನು ಆಯ್ಕೆಗಾರರು ತಂಡಕ್ಕೆ ವಾಪಸ್ ಕರೆದಿದ್ದಾರೆ.
ಮುಂಬೈ ತಂಡ:
ಸಿದ್ದೇಶ್ ಲಾಡ್ (ನಾಯಕ), ಯಶಸ್ವಿ ಜೈಸ್ವಾಲ್, ಆಯುಷ್ ಮ್ಹಾತ್ರೆ (ಉಪನಾಯಕ), ದಿವ್ಯಾನ್ಶ್ ಸಕ್ಸೇನಾ, ಮುಶೀರ್ ಖಾನ್, ಸರ್ಫರಾಜ್ ಖಾನ್, ಸುವೇದ್ ಪಾರ್ಕರ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರೆ (ವಿಕೆಟ್ ಕೀಪರ್), ಶಾಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅಥರ್ವ ಅಂಕೋಲೇಕರ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಸಿಲ್ವೆಸ್ಟರ್ ಡಿಸೋಜಾ, ಓಂಕಾರ್ ತರ್ಮಾಲೆ.




