ಮಣಿಪಾಲ ಹಾಸ್ಪಿಸ್‌ನಲ್ಲಿ 700ಕ್ಕೂ ಅಧಿಕ ರೋಗಿಗಳಿಗೆ ಸಿಗುತ್ತಿದೆ ಉಚಿತ ಆರೈಕೆ!
ಮಾರಣಾಂತಿಕ ಕಾಯಿಲೆಯ ಅಂತಿಮ ಹಂತದಲ್ಲಿರುವವರಿಗೆ ನೋವುರಹಿತ, ಗೌರವಯುತ ಬದುಕಿಗೆ ಸೇವೆ: ಡಾ.ಎಚ್.ಎಸ್ ಬಲ್ಲಾಳ್ ಉಡುಪಿ: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಯಿಂದ... The post ಮಣಿಪಾಲ ಹಾಸ್ಪಿಸ್‌ನಲ್ಲಿ 700ಕ್ಕೂ ಅಧಿಕ ರೋ...

ಮಾರಣಾಂತಿಕ ರೋಗಗಳ ಅಂತಿಮ ಹಂತದಲ್ಲಿರುವವರಿಗೆ ನೋವುರಹಿತ ಹಾಗೂ ಘನತೆಯ ಜೀವನ ನಡೆಸಲು ನೆರವು: ಡಾ. ಎಚ್.ಎಸ್. ಬಲ್ಲಾಳ್
ಉಡುಪಿ: ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳ ಕಾರಣದಿಂದ ಜೀವನದ ಅಂತಿಮ ಹಂತದಲ್ಲಿರುವವರು ನೋವುಮುಕ್ತವಾಗಿ ಮತ್ತು ಗೌರವಯುತವಾಗಿ ತಮ್ಮ ದಿನಗಳನ್ನು ಕಳೆಯಲು ಮಾಹೆ ವಿಶ್ವವಿದ್ಯಾಲಯದ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಟೆಟ್ ಸೆಂಟರ್ (ಎಂಎಚ್‌ಆರ್‌ಸಿ) ಅತ್ಯುತ್ತಮ ಉಪಶಾಮಕ ಆರೈಕೆ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 700ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗಿದ್ದು, 1,300ಕ್ಕೂ ಹೆಚ್ಚಿನ ರೋಗಿಗಳ ಕುಟುಂಬದ ಆರೈಕೆದಾರರಿಗೆ ಅಗತ್ಯ ಬೆಂಬಲ ನೀಡಲಾಗಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಣಿಪಾಲ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಅಧ್ಯಕ್ಷ ಮತ್ತು ಮಾಹೆ ಟ್ರಸ್ಟ್ ಅಧ್ಯಕ್ಷ ಡಾ. ರಂಜನ್ ಆರ್. ಪೈ ಅವರ ದೂರದೃಷ್ಟಿಯ ಫಲವಾಗಿ ಎಂಎಚ್‌ಆರ್‌ಸಿ ಸ್ಥಾಪನೆಯಾಗಿದೆ. ಹಾವಂಜೆ ಸಮೀಪ 12 ಎಕರೆ ಜಾಗದಲ್ಲಿ ಆರಂಭವಾದ ಈ ಕೇಂದ್ರವು ಆರಂಭದಲ್ಲಿ 35 ಹಾಸಿಗೆಗಳನ್ನು ಹೊಂದಿತ್ತು, ಇದೀಗ ಅದನ್ನು 105 ಹಾಸಿಗೆಗಳಿಗೆ ಏರಿಸಲಾಗಿದೆ. ಈ ಕೇಂದ್ರದ ನಿರ್ವಹಣೆಗೆ ಪ್ರತಿ ವರ್ಷ ₹6 ಕೋಟಿಗೂ ಹೆಚ್ಚು ಹಣ ವ್ಯಯವಾಗುತ್ತಿದ್ದು, ದಾನಿಗಳ ನೆರವಿನೊಂದಿಗೆ ಈ ಸೇವಾ ಕಾರ್ಯ ಮುಂದುವರಿಯುತ್ತಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಶಿಫಾರಸಿನ ಆಧಾರದ ಮೇಲೆ ರೋಗಿಗಳಿಗೆ ಇಲ್ಲಿ ಆರೈಕೆ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ದೇಶದ ಅತಿದೊಡ್ಡ ಹಾಸ್ಪಿಸ್ ಮತ್ತು ರೆಸ್ಟೈಟ್ ಸೆಂಟರ್‌ಗಳಲ್ಲಿ ಇದು ಪ್ರಮುಖ ಸ್ಥಾನ ಪಡೆದಿದೆ. ಇಲ್ಲಿ ರೋಗಿಗಳಿಗೆ ಚಿಕಿತ್ಸೆಗಿಂತಲೂ ಆರೈಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ರೋಗಿಗಳ ಕುಟುಂಬದವರಿಗೆ ಕೌನ್ಸೆಲಿಂಗ್ ಹಾಗೂ ಅಗತ್ಯವಿರುವ ಮಾನಸಿಕ ಬೆಂಬಲವನ್ನೂ ಇಲ್ಲಿ ನೀಡಲಾಗುತ್ತದೆ ಎಂದು ವಿವರಿಸಿದರು.
ಅ. 10ರಂದು ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’
ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಪ್ರಯುಕ್ತ ಎಂಎಚ್‌ಆರ್‌ಸಿ ವತಿಯಿಂದ ಅ. 10ರಂದು ‘ನೋವು ನಿರ್ವಹಣೆ: ಉಪಶಾಮಕ ಆರೈಕೆಯ ಅತ್ಯಗತ್ಯ ಭಾಗ’ ಎಂಬ ಘೋಷವಾಕ್ಯದೊಂದಿಗೆ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಎಂಬ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ವಿವಿಧ ಕ್ಲಬ್‌ಗಳ ಓಟಗಾರರು ಮತ್ತು ಸೈಕ್ಲಿಸ್ಟ್‌ಗಳು ಅಂದು ಮುಂಜಾನೆ 5.15ಕ್ಕೆ ಮಂಗಳೂರಿನ ಲಾಲ್‌ಬಾಗ್ ಬಳಿಯ ಕಾರ್ಪೊರೇಷನ್ ವೃತ್ತದಿಂದ ಸೈಕಲ್‌ನಲ್ಲಿ ಹೊರಟು ಸುಮಾರು 68 ಕಿ.ಮೀ. ದೂರವನ್ನು ಕ್ರಮಿಸಿ ಮಣಿಪಾಲದ ಎಂಎಚ್‌ಆರ್‌ಸಿ ಕೇಂದ್ರವನ್ನು ತಲುಪಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂಎಚ್‌ಆರ್‌ಸಿ ನಿರ್ದೇಶಕಿ ಜೇಕಬ್, ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ಆರ್. ರಾವ್, ಮಾಹೆ ಸಹ ಕುಲಪತಿ ಮೇಜರ್ ಜನರಲ್ (ನಿವೃತ್ತ) ಡಾ. ಮ್ಯಾಥ್ಯೂಸ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಎಂಎಚ್‌ಆರ್‌ಸಿ ಸಂಶೋಧನಾ ನಿರ್ದೇಶಕ ಹಾಗೂ ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಪ್ರಾಧ್ಯಾಪಕ ಡಾ. ನವೀನ್ ಸಾಲಿನ್ಸ್ ಉಪಸ್ಥಿತರಿದ್ದರು.




