ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

KSTDC: ಮೈಸೂರು ದಸರಾ ವೀಕ್ಷಣೆಗೆ ಅಂಬಾರಿ ಬಸ್ ಸೇವೆ ಹಾಗೂ 7 ವಿಶೇಷ ಪ್ರವಾಸ ಪ್ಯಾಕೇಜ್‌ಗಳು!

– ದಸರಾ ವೈಭವ, ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ `ಅಂಬಾರಿ’ ವಿಶೇಷ ಸವಾರಿ – ಊಟಿ, ಮೈಸೂರು, ಬೇಲೂರು-ಹಳೇಬೀಡು, ಕೊಡಗು ಸೇರಿದಂತೆ ಏಳು ವಿಶೇಷ ಪ್ರವಾಸ ಯೋಜನೆಗಳು – ದಸರಾ ಜೊತೆಗೆ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾ...

· ಮೈಸೂರು
ಮೈಸೂರು ದಸರಾ ವೀಕ್ಷಣೆಗೆ KSTDC ವಿಶೇಷ ವ್ಯವಸ್ಥೆ – ಅಂಬಾರಿ ಡಬಲ್ ಡೆಕ್ಕರ್ ಬಸ್, 7 ವಿಶೇಷ ಪ್ಯಾಕೇಜ್‌ಗಳು
ಹಂಚಿಕೊಳ್ಳಿ:

– ದಸರಾ ಸಂಭ್ರಮದ ದೀಪಾಲಂಕಾರವನ್ನು ಸವಿಯಲು `ಅಂಬಾರಿ’ಯಲ್ಲಿ ವಿಶೇಷ ಪ್ರಯಾಣದ ವ್ಯವಸ್ಥೆ

– ಊಟಿ, ಮೈಸೂರು, ಬೇಲೂರು-ಹಳೇಬೀಡು, ಕೊಡಗು ಸೇರಿದಂತೆ ಏಳು ಬಗೆಯ ಪ್ರತ್ಯೇಕ ಪ್ರವಾಸ ಪ್ಯಾಕೇಜ್‌ಗಳು

– ದಸರಾ ಹಬ್ಬದ ಜೊತೆಗೆ ಅಕ್ಕಪಕ್ಕದ ಪ್ರವಾಸಿ ತಾಣಗಳ ಪರಿಚಯಕ್ಕೂ ಆದ್ಯತೆ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಮೈಸೂರು ದಸರಾ (Mysuru Dasara) ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸುಲಭ ಮತ್ತು ವೈವಿಧ್ಯಮಯ ಅನುಭವ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವಿಶೇಷ ಪ್ರವಾಸದ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (KJ George) ಹೇಳಿದ್ದಾರೆ.

ದಸರಾ ಹಬ್ಬದ ಸಮಯದಲ್ಲಿ ಮೈಸೂರಿನ ಮುಖ್ಯ ಸ್ಥಳಗಳು ಮತ್ತು ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಕೆಎಸ್‌ಟಿಡಿಸಿಯ ಜನಪ್ರಿಯ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ವಿಶೇಷವಾಗಿ ಕಲ್ಪಿಸಲಾಗಿದೆ. ಇದರೊಂದಿಗೆ ಮೈಸೂರು ಮತ್ತು ಅದರ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನು ತೋರಿಸುವ ವಿಶೇಷ ಪ್ರವಾಸದ ಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗಿದೆ.

ಅಂಬಾರಿಯಲ್ಲಿ ದಸರಾ ದೀಪಾಲಂಕಾರ ವೀಕ್ಷಣೆ

ಅಂಬಾರಿ ಡಬಲ್ ಡೆಕ್ಕರ್ ಬಸ್ ಹಗಲಿನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿದೆ. ಹಗಲಿನ ಸವಾರಿಗೆ ಒಬ್ಬರಿಗೆ 250 ರೂ. ದರ ನಿಗದಿ ಮಾಡಲಾಗಿದೆ. ಮೈಸೂರಿನ ದಸರಾ ವಿದ್ಯುತ್ ದೀಪಾಲಂಕಾರವನ್ನು ನೋಡಲು ಸಂಜೆ 6:30, ರಾತ್ರಿ 8 ಹಾಗೂ 9:30ಕ್ಕೆ ವಿಶೇಷ ಸವಾರಿಗಳು ಲಭ್ಯವಿವೆ. ರಾತ್ರಿಯ ಪ್ರಯಾಣಕ್ಕೆ ಕೆಳಗಿನ ಡೆಕ್‌ಗೆ 250 ರೂ. ಹಾಗೂ ಮೇಲಿನ ಡೆಕ್‌ಗೆ 500 ರೂ. ದರವನ್ನು ನಿಗದಿಪಡಿಸಲಾಗಿದೆ.

ನಗರದ ಮುಖ್ಯ ವೃತ್ತಗಳು, ಅರಮನೆ ಸುತ್ತಲಿನ ಪ್ರದೇಶಗಳು, ಸಯ್ಯಾಜಿರಾವ್ ರಸ್ತೆ ಸೇರಿದಂತೆ ದಸರಾ ದೀಪಾಲಂಕಾರದಿಂದ ಅಲಂಕೃತವಾದ ಪ್ರಮುಖ ಮಾರ್ಗಗಳಲ್ಲಿ ಅಂಬಾರಿ ಸಂಚರಿಸಲಿದೆ.

ಏಳು ದಸರಾ ವಿಶೇಷ ಪ್ರವಾಸ ಪ್ಯಾಕೇಜ್‌ಗಳು

ದಸರಾಕ್ಕೆ ಬರುವ ಪ್ರವಾಸಿಗರು ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗದೆ ಕರ್ನಾಟಕದ ಇತರ ಪ್ರಮುಖ ಪ್ರವಾಸಿ ತಾಣಗಳಿಗೂ ಭೇಟಿ ನೀಡಲು ಅನುಕೂಲವಾಗುವಂತೆ KSTDC ಏಳು ವಿಶೇಷ ಪ್ರವಾಸ ಯೋಜನೆಗಳನ್ನು ರೂಪಿಸಿದೆ.

ಊಟಿಯ ಎರಡು ದಿನಗಳ ಪ್ರವಾಸ, ಮೈಸೂರು ಸ್ಥಳೀಯ ಪ್ರವಾಸ, ಬೇಲೂರು-ಹಳೇಬೀಡು-ಶ್ರವಣಬೆಳಗೊಳ, ಕೊಡಗಿನ ಮುಖ್ಯ ಸ್ಥಳಗಳು, ಶಿವನಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ನಂಜನಗೂಡು ಸೇರಿದಂತೆ ವಿವಿಧ ಧಾರ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳನ್ನು ಒಳಗೊಂಡ ಒಂದು ಮತ್ತು ಎರಡು ದಿನಗಳ ಪ್ಯಾಕೇಜ್‌ಗಳು ಲಭ್ಯವಿವೆ.

ಮೈಸೂರು ದಸರಾವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಕೇವಲ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗದೆ, ಮೈಸೂರಿನ ವೈಭವದ ಜೊತೆಗೆ ಅಕ್ಕಪಕ್ಕದ ಪ್ರವಾಸಿ ತಾಣಗಳನ್ನೂ ಅನುಭವಿಸಬೇಕು. ಅದಕ್ಕಾಗಿ ಸುಗಮ ಪ್ರಯಾಣ, ನಂಬಿಕಾರ್ಹ ಸೇವೆ ಮತ್ತು ವೈವಿಧ್ಯಮಯ ಪ್ರವಾಸ ಪ್ಯಾಕೇಜ್‌ಗಳನ್ನು ಕೆಎಸ್‌ಟಿಡಿಸಿ ಮೂಲಕ ನೀಡಲಾಗುತ್ತಿದೆ. ಪ್ರವಾಸಿಗರಿಗೆ ದಸರಾ ಅನುಭವವನ್ನು ಮರೆಯಲಾಗದಂತೆ ಮಾಡುವುದು ನಮ್ಮ ಗುರಿ ಎಂದು ಸಚಿವರು ತಿಳಿಸಿದ್ದಾರೆ.

ಪ್ರವಾಸ ಪ್ಯಾಕೇಜ್‌ಗಳು, ಅಂಬಾರಿ ಬಸ್ ಸೇವೆ ಹಾಗೂ ಬುಕ್ಕಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರವಾಸಿಗರು ಕೆಎಸ್‌ಟಿಡಿಸಿ ಸಹಾಯವಾಣಿ ಸಂಖ್ಯೆ 080-4334 4334/35/36/ 42, 0821-2423652 ಅಥವಾ 8970656400 ಗೆ ಕರೆ ಮಾಡಬಹುದು. ಹೆಚ್ಚಿನ ಮಾಹಿತಿಗೆ www.kstdc.co ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ info@kstdc.co ಗೆ ಇ-ಮೇಲ್ ಮಾಡಬಹುದು.

ಹಂಚಿಕೊಳ್ಳಿ: