ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಮಾನಸಿಕ ಆರೋಗ್ಯ: ಮನದ ಮಾತುಗಳಿಗೆ ಕಿವಿಗೊಡುವುದು ಅನಿವಾರ್ಯ!

ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಅ.10ರಂದು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು... The post ಮಾನಸಿಕ ಆರೋಗ್ಯ: ಆಂತರಿಕ ಧ್ವನಿಗಳಿಗೆ ಆದ್ಯತೆ ಅ...

· ಉಡುಪಿ
ಮಾನಸಿಕ ಆರೋಗ್ಯ: ಆಂತರಿಕ ಧ್ವನಿಗಳಿಗೆ ಆದ್ಯತೆ ಅಗತ್ಯ
ಹಂಚಿಕೊಳ್ಳಿ:

ಉಡುಪಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಅ.10ರಂದು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ತಿಳಿಸಿದರು.

ಈ ವಿಷಯವಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ದಿನಾಚರಣೆಯು ‘ಅಲಿಸಲ್ಪಟ್ಟ ಜೀವನದ ಅನುಭವಗಳು: ನೈಜ ಧ್ವನಿಗಳು, ನೈಜ ಬದಲಾವಣೆ’ ಎಂಬ ಘೋಷವಾಕ್ಯದೊಂದಿಗೆ ನಡೆಯಲಿದೆ ಎಂದರು. ಇಂದಿನ ಒತ್ತಡಭರಿತ ಬದುಕಿನ ಶೈಲಿಯಿಂದ ಮಾನಸಿಕ ಆರೋಗ್ಯದ ಸಮಸ್ಯೆಗಳು ಏರಿಕೆಯಾಗುತ್ತಿವೆ. 10ರಿಂದ 19 ವರ್ಷ ವಯಸ್ಸಿನ ಪ್ರತಿ ಏಳು ಮಂದಿಯಲ್ಲಿ ಒಬ್ಬರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, 60 ವರ್ಷ ದಾಟಿದವರಲ್ಲಿಯೂ ಇಂತಹ ಸಮಸ್ಯೆಗಳು ಕಂಡುಬರುತ್ತಿವೆ. ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕತೆಗಳು ಪ್ರಮುಖ ಅಪಾಯಕಾರಿ ಕಾರಣಗಳಾಗಿವೆ ಎಂದು ಅವರು ವಿವರಿಸಿದರು.

ಸಿನಿಮಾ ತಾರೆಯರು ಮತ್ತು ಕ್ರೀಡಾಪಟುಗಳು ತಮ್ಮ ಮಾನಸಿಕ ಆರೋಗ್ಯದ ಕುರಿತಾದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುವುದು ಈ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ. ಇಂತಹ ಮುಕ್ತ ಸಂವಾದಗಳು ಮಾನಸಿಕ ಅನಾರೋಗ್ಯಕ್ಕೆ ಸಂಬಂಧಿಸಿದ ಕಳಂಕ ಹಾಗೂ ತಾರತಮ್ಯವನ್ನು ತಗ್ಗಿಸಲು ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರದ ‘ಮಾನಸಧಾರ’ ಯೋಜನೆಯ ಅಡಿಯಲ್ಲಿ ಆಸ್ಪತ್ರೆಯ ‘ಬಂಧು’ ಡೇ-ಕೇರ್ ಸೆಂಟರ್‌ಗೆ ಬರುವ ಚೇತರಿಕೆಯ ಹಂತದಲ್ಲಿರುವವರಿಗೆ ಜೀವನ ಕೌಶಲ್ಯಗಳನ್ನು ವೃದ್ಧಿಸಲು ಬೇಕಾದ ಸೌಕರ್ಯ ಹಾಗೂ ಸಲಕರಣೆಗಳನ್ನು ನೀಡಲಾಗುತ್ತಿದೆ. ಇದು ಅವರು ಸಮಾಜದ ಮುಖ್ಯವಾಹಿನಿಗೆ ಮರಳಿ ಬರಲು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.

‘ಅಭಯ’, ‘ಪರಿವರ್ತನ’, ‘ಬಂಧು’ ಡೇ-ಕೇರ್ ಸೆಂಟರ್ ಹಾಗೂ ‘ಹೊಂಬೆಳಕು’ ನಿವಾಸಿಗಳಿಗಾಗಿ ಆಟೋಟ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಅವರು ಸಿದ್ಧಪಡಿಸಿದ ಚಿತ್ರಕಲೆ ಮತ್ತು ಸೃಜನಾತ್ಮಕ ಕರಕುಶಲ ವಸ್ತುಗಳ ಪ್ರದರ್ಶನವನ್ನು ಅ.10 ರಂದು ಉದ್ಘಾಟಿಸಲಾಗುವುದು.

ಇದೇ ವೇಳೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಗುಣಮುಖರಾಗಿ ಉತ್ತಮ ಬದುಕು ಸಾಗಿಸುತ್ತಿರುವವರು ಹಾಗೂ ಅವರ ಆರೈಕೆದಾರರಿಗೆ ಸನ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಉದ್ಘಾಟಿಸಲಿದ್ದು, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಮಾನಂದ ಕೆ., ಜಾಗತಿಕ ಅಭಿಯಾನಗಳ (ಮಾನಸಿಕ ಆರೋಗ್ಯ) ಮುಖ್ಯ ಸಂಯೋಜಕ ರವಿರಾಜ ನಾಯಕ್, ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಾಯ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ಹೆರಾಲ್ಡ್ ಸೋನ್ಸ್ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಹೆಚ್. ಗಣೇಶ್ ಪೈ ಪಾಲ್ಗೊಳ್ಳಲಿದ್ದಾರೆ. ಡಾ. ಪಿ.ವಿ. ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಜಿಲ್ಲೆ 317Cಯ ನೂತನ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಡಾ.ಕೃಷ್ಣಮೂರ್ತಿ ಉಪಾಧ್ಯಾಯ, ಡಾ. ಹೆಚ್. ಗಣೇಶ್ ಪೈ, ಡಾ. ಶಕೀಲಾ ಹಾಗೂ ಡಾ. ರವಿರಾಜ್ ನಾಯಕ್ ಹಾಜರಿದ್ದರು.

ಹಂಚಿಕೊಳ್ಳಿ: