ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಕುವೈತ್‌ನಿಂದ ಬೆಂಗಳೂರಿಗೆ ಬಂದಿಳಿದ ಕೊಡಗಿನ ವ್ಯಕ್ತಿಗೆ ಹೃದಯಾಘಾತ – ವಿಮಾನ ನಿಲ್ದಾಣದಲ್ಲೇ ಸಾವು

ಮಡಿಕೇರಿ: ವರ್ಷಗಳ ಕಾಲ ಕುವೈತ್‌ನಲ್ಲಿ (Kuwait) ದುಡಿದು, ಕುಟುಂಬದೊಂದಿಗೆ ಸಮಯ ಕಳೆಯಲು ಸ್ವದೇಶಕ್ಕೆ ಮರಳಿದ್ದ ಸುಂಟಿಕೊಪ್ಪದ (Suntikoppa) ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ...

· ಕೊಡಗು
ಕುವೈತ್‌ನಿಂದ ಬೆಂಗಳೂರಿಗೆ ಬಂದಿಳಿದ ಕೊಡಗಿನ ವ್ಯಕ್ತಿಗೆ ಹೃದಯಾಘಾತ – ವಿಮಾನ ನಿಲ್ದಾಣದಲ್ಲೇ ಸಾವು
ಹಂಚಿಕೊಳ್ಳಿ:

ಮಡಿಕೇರಿ: ವರ್ಷಗಳ ಕಾಲ ಕುವೈತ್‌ನಲ್ಲಿ (Kuwait) ದುಡಿದು, ಕುಟುಂಬದೊಂದಿಗೆ ಸಮಯ ಕಳೆಯಲು ಸ್ವದೇಶಕ್ಕೆ ಮರಳಿದ್ದ ಸುಂಟಿಕೊಪ್ಪದ (Suntikoppa) ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ (Kempegowda Airport) ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಘಟನೆ ನಡೆದಿದೆ.

ಸುಂಟಿಕೊಪ್ಪ ಕೆಇಬಿ ಸಮೀಪದ ಮಾಸ್ಟರ್ ಬಡಾವಣೆ ನಿವಾಸಿ ಬಶೀರ್ ಮೃತ ದುರ್ದೈವಿ. ಹೌದು, ಬದುಕು ಕಟ್ಟಿಕೊಳ್ಳಲೆಂದು ತಾಯ್ನಾಡಿನಿಂದ ಸಾವಿರಾರು ಕಿಲೋಮೀಟರ್ ದೂರದ ಕುವೈತ್‌ಗೆ ತೆರಳಿದ್ದ ಬಶೀರ್, ಹಲವು ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದರು. ತಾವು ದುಡಿದ ಹಣವನ್ನು ಸುಂಟಿಕೊಪ್ಪದಲ್ಲಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಕಳುಹಿಸುತ್ತಿದ್ದರು. ಇದೇ ಹಣದಿಂದ ಕುಟುಂಬದ ಜೀವನ ಸಾಗುತ್ತಿತ್ತು. ವರ್ಷಗಳ ಬಳಿಕ ಸಿಕ್ಕ ರಜೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಬೇಕೆಂಬ ಆಸೆಯಿಂದ ಬಶೀರ್ ಕುವೈತ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು.

ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಶನಿವಾರ ರಾತ್ರಿ ಸುಮಾರು 3 ಗಂಟೆ ವೇಳೆಗೆ ಕುವೈತ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಶೀರ್ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತಕ್ಕೊಳಗಾಗಿ ವಿಮಾನ ನಿಲ್ದಾಣದಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದು, ಸದ್ಯ ಬಶೀರ್ ಅವರ ಮೃತದೇಹ ಬೆಂಗಳೂರಿನಲ್ಲಿದೆ. ಮೃತದೇಹವನ್ನು ಸುಂಟಿಕೊಪ್ಪಕ್ಕೆ ತಂದು ಕುಟುಂಬಸ್ಥರು ಹಾಗೂ ಬಂಧು-ಬಳಗದ ಅಂತಿಮ ದರ್ಶನದ ಬಳಿಕ ಇಂದು ಮಧ್ಯಾಹ್ನ 3 ಗಂಟೆಯ ನಂತರ 7ನೇ ಹೊಸಕೋಟೆಯ ಮುಸ್ಲಿಂ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

ಕುಟುಂಬದೊಂದಿಗೆ ಸಂತಸದ ಕ್ಷಣ ಕಳೆಯಲು ಸ್ವದೇಶಕ್ಕೆ ಮರಳಿದ್ದ ವ್ಯಕ್ತಿ, ವಿಮಾನ ನಿಲ್ದಾಣದಲ್ಲೇ ಹೃದಯಾಘಾತಕ್ಕೆ ಬಲಿಯಾಗಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ. 

ಹಂಚಿಕೊಳ್ಳಿ: