ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಸುದ್ದಿ

ಬಳ್ಳಾರಿಯಲ್ಲಿ ಮತದಾರರ ಪಟ್ಟಿ ಡಿಲೀಟ್‌ಗೆ ಸಂಚು: ಬಿಜೆಪಿ ಮುಖಂಡ ಹಾಗೂ ಪಾಲಿಕೆ ಅಧಿಕಾರಿಗಳ ಮೇಲೆ ಎಫ್‌ಐಆರ್!

ಬಳ್ಳಾರಿ: ನಗರದಲ್ಲಿ ಮತದಾರರ ಪಟ್ಟಿಯಿಂದ(Voters List) ಕಾಂಗ್ರೆಸ್(Congress) ಪರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲು ಷಡ್ಯಂತ್ರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ...

· ಬಳ್ಳಾರಿ
ಬಳ್ಳಾರಿಯಲ್ಲಿ ಮತಗಳ ಡಿಲೀಟ್‌ಗೆ ಯತ್ನ ಆರೋಪ: ಬಿಜೆಪಿ ಮುಖಂಡ, ಪಾಲಿಕೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್
ಹಂಚಿಕೊಳ್ಳಿ:

ಬಳ್ಳಾರಿ: ನಗರದ ಮತದಾರರ ಪಟ್ಟಿಯಿಂದ(Voters List) ಕಾಂಗ್ರೆಸ್(Congress) ಬೆಂಬಲಿಗರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲು ಸಂಚು ರೂಪಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ(Ballari) ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಬೂತ್ ಮಟ್ಟದ ಏಜೆಂಟ್ (BLA-1) ಮತ್ತು ಪಾಲಿಕೆ ಸಿಬ್ಬಂದಿ ಸೇರಿದಂತೆ ಹಲವರ ಮೇಲೆ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ.

ಕಾಂಗ್ರೆಸ್ BLA ಗೌತಮ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಬಿಜೆಪಿಯ(BJP) BLA-1 ಶ್ರೀನಿವಾಸ ಮೋತ್ಕರ್, ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ (AC) ನಂದೀಶ್, ಬಿಎಲ್‌ಒಗಳಾದ (BLO) ಸುಮಲತಾ ಮತ್ತು ಶರಣಬಸವ ಹಾಗೂ ಇತರರ ವಿರುದ್ಧ ಬಿಎನ್‌ಎಸ್ (BNS 2023) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ (U/S 363(2), 61(2), 217, 3(5)) ಪ್ರಕರಣ ದಾಖಲಿಸಲಾಗಿದೆ.

ಕಾಂಗ್ರೆಸ್ ಕಿಡಿ

ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯಗಳನ್ನು ಬಹಿರಂಗಪಡಿಸಿ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 7,561 ಮತದಾರರ ಹೆಸರುಗಳನ್ನು ಪರಿಶೀಲನೆ ನೆಪದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದು ಬಿಜೆಪಿಯ BLA-1 ಶ್ರೀನಿವಾಸ ಮೋತ್ಕರ್ ಅವರು ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಶೇ. 98ರಷ್ಟು ಮುಸ್ಲಿಂ ಸಮುದಾಯದವರು ಹಾಗೂ ಕಾಂಗ್ರೆಸ್ ಪರ ಒಲವುಳ್ಳವರ ಹೆಸರುಗಳಿವೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ತನ್ನ ಸ್ವಂತ ಸಹೋದರನ ಹೆಸರನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದ ಅವರು, ಇದರ ಹಿಂದೆ ಕೋಮು ಉದ್ದೇಶ ಮತ್ತು ಕಾಂಗ್ರೆಸ್ ಮತಗಳನ್ನು ಕಡಿಮೆ ಮಾಡುವ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.

ಈ ಸಂಚಿನಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ. ಮತದಾರರು ಈಗಾಗಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ, ಬಿಎಲ್‌ಒಗಳನ್ನು ಮನೆ ಮನೆಗೆ ಕಳುಹಿಸಿ ದಾಖಲೆಗಳನ್ನು ಕೇಳುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಅಲ್ಲಂ ಪ್ರಶಾಂತ್ ದೂರಿದರು. ಇದನ್ನೂ ಓದಿ: ಪರಿಷ್ಕರಣೆ ಬಳಿಕ 1 ತಿಂಗಳಲ್ಲಿ 1.37 ಲಕ್ಷ ಮತದಾರರ ಹೆಚ್ಚಳ – ರಾಜ್ಯದಲ್ಲಿ 84,900 ಫಾರ್ಮ್‌ 7 ಸಲ್ಲಿಕೆ

ಬಿಜೆಪಿ ನೀಡಿದ ಪಟ್ಟಿಯಲ್ಲಿ ಹೆಸರಿದ್ದ ಸ್ಥಳೀಯ ಮತದಾರರು ಪ್ರತಿಕ್ರಿಯಿಸಿ, ತಾವು 35 ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದು, ಹಳೆಯ ಮತದಾರರ ಗುರುತಿನ ಚೀಟಿ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಹೊಂದಿದ್ದೇವೆ. ಹೀಗಿದ್ದರೂ ಅಧಿಕಾರಿಗಳು ಮನೆಗೆ ಬಂದು ದಾಖಲೆಗಳನ್ನು ಕೇಳುತ್ತಿದ್ದಾರೆ. ನಮ್ಮ ಕುಟುಂಬಗಳ ಹೆಸರನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲು ಯತ್ನಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಠಾಣೆಗೆ ಶಾಸಕ ಭರತ್ ರೆಡ್ಡಿ ದೌಡು

ಕಾಂಗ್ರೆಸ್ ಮುಖಂಡರು ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದರು ಎಂಬ ಮಾತುಗಳು ಕೇಳಿಬಂದಿವೆ. ವಿಷಯ ತಿಳಿದ ಕೂಡಲೇ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಠಾಣೆಗೆ ಆಗಮಿಸಿ, ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು. ಶಾಸಕರು ಬಂದ ಬೆನ್ನಲ್ಲೇ ಹೆಚ್ಚುವರಿ ಎಸ್ಪಿ ಮತ್ತು ಡಿವೈಎಸ್ಪಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ತೀವ್ರ ಪ್ರತಿಭಟನೆಯ ನಂತರ ಪೊಲೀಸರು ತಡರಾತ್ರಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ: