ಐದು ಪೊಲೀಸ್ ಕಮಿಷನರೇಟ್ ವಿಭಜನೆಗೆ ಸಚಿವ ಸಂಪುಟದ ಗ್ರೀನ್ ಸಿಗ್ನಲ್ – ಸಭೆಯ ಹೈಲೈಟ್ಸ್ ಏನು?
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾಗಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕ...

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ನಗರದ ಕಾನೂನು-ಸುವ್ಯವಸ್ಥೆ, ಅಪರಾಧ ತಡೆ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಭದ್ರತೆಯನ್ನು ಇನ್ನಷ್ಟು ದಕ್ಷವಾಗಿ ನಿರ್ವಹಿಸುವ ಸಲುವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ ಪುನರ್ ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನಲ್ಲಿ ಐದು ಪ್ರತ್ಯೇಕ ಕಮಿಷನರೇಟ್‌ಗಳನ್ನು ಸ್ಥಾಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವುದೇ ರಾಜಕೀಯ ಪಕ್ಷ ನಮ್ಮ ಭೇಟಿಗೆ ಮನವಿ ಮಾಡಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಮುಖ್ಯ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಡಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಸ್ವತಂತ್ರ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಿ ಮರುಸಂಘಟಿಸಲಾಗುವುದು ಎಂದು ಅವರು ವಿವರಿಸಿದರು.
1,022 ಹೊಸ ಹುದ್ದೆ ಸೃಷ್ಟಿ
ಹಾಲಿ ಇರುವ ಪೊಲೀಸ್ ಆಯುಕ್ತರ ಹುದ್ದೆಯನ್ನು `ಮುಖ್ಯ ಪೊಲೀಸ್ ಆಯುಕ್ತರು’ ಎಂದು ಮೇಲ್ದರ್ಜೆಗೇರಿಸಲಾಗುವುದು. ಜಂಟಿ ಅಥವಾ ಅಪರ ಪೊಲೀಸ್ ಆಯುಕ್ತರು(ಸಂಚಾರ) ಹುದ್ದೆಯನ್ನು `ಪೊಲೀಸ್ ಆಯುಕ್ತರು (ಸಂಚಾರ)’ ಎಂದು ಮರುನಾಮಕರಣ ಮಾಡಲಾಗುವುದು. ಈ ಯೋಜನೆಗೆ ಅವಶ್ಯವಿರುವ 1,022 ಹೊಸ ಹುದ್ದೆಗಳನ್ನು ಸೃಷ್ಟಿಸಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ನಿಗದಿಪಡಿಸಿದ ಘಟಕಗಳಲ್ಲಿ ಅಪರಾಧ ನಿರ್ವಹಣೆ, ಸಂಚಾರ ನಿಯಂತ್ರಣ ಹಾಗೂ ಸಾರ್ವಜನಿಕ ಸುರಕ್ಷತೆಗಾಗಿ ಒಟ್ಟು 6,550 ಹುದ್ದೆಗಳ ಅಗತ್ಯವಿದ್ದು, ಹೊಸ ಹುದ್ದೆಗಳ ಜೊತೆಗೆ ಈಗಿರುವ ಹುದ್ದೆಗಳನ್ನು ಮರುಹಂಚಿಕೆ ಮಾಡುವ ಮೂಲಕ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಸಂಚಾರ ನಿರ್ವಹಣೆಯನ್ನು ಸುಗಮಗೊಳಿಸಲು ಕೇಂದ್ರ ಸಂಚಾರ ವಿಭಾಗಕ್ಕೆ 2, ಪಶ್ಚಿಮ ಸಂಚಾರ ವಿಭಾಗಕ್ಕೆ 1, ಉತ್ತರ ಸಂಚಾರ ವಿಭಾಗಕ್ಕೆ 1 ಹಾಗೂ ಪಶ್ಚಿಮ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ 2ರಂತೆ ಒಟ್ಟು 6 ಹೊಸ ಎಸಿಪಿ (ACP) ಹುದ್ದೆಗಳನ್ನು ಸೃಷ್ಟಿಸಲಾಗುವುದು. ಪ್ರತಿ ಎಸಿಪಿ ಕಚೇರಿಗೆ 5 ಕಾರ್ಯಕಾರಿ ಹುದ್ದೆಗಳನ್ನು ಹೊಸದಾಗಿ ಮಂಜೂರು ಮಾಡಲಾಗುವುದು ಎಂದರು. ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಲು, ಈಗಿರುವ ಸಿಎಆರ್ ಘಟಕಗಳಿಂದಲೇ ಹುದ್ದೆಗಳನ್ನು ಮರುನಿಯೋಜಿಸಿ ಪೂರ್ವ ವಿಭಾಗಕ್ಕಾಗಿ ಪ್ರತ್ಯೇಕ ಸಿಎಆರ್ ಘಟಕವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ನ್ಯಾಯಾಂಗ ಡಿಜಿಟಲೀಕರಣಕ್ಕೆ ರೂ.704 ಕೋಟಿ
ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯ ಡಿಜಿಟಲೀಕರಣ ಹಾಗೂ ಡಿಜಿಟಲ್ ರೂಪಾಂತರವನ್ನು ಬಲಪಡಿಸುವ ನಿಟ್ಟಿನಲ್ಲಿ ರೂ.704 ಕೋಟಿ ವೆಚ್ಚದ ಯೋಜನೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದ (ಕೆಎಸ್‌ಡಿಸಿ) ಮೂಲಕ ನ್ಯಾಯಾಂಗಕ್ಕೆ ದತ್ತಾಂಶ ಕೇಂದ್ರ ಮತ್ತು ವಿಪತ್ತು ಮರುಸ್ಥಾಪನಾ ಕೇಂದ್ರವನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಡಿಜಿಟಲೀಕರಣ ಕಾಮಗಾರಿಗಳಿಗೆ ಸಂಪುಟ ಸಮ್ಮತಿಸಿದೆ.
ಸ್ವಯಂ ಸೇವಕರಿಗೆ `ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್’
ರಾಜ್ಯದಲ್ಲಿ ನೈಸರ್ಗಿಕ ವಿಕೋಪ ಹಾಗೂ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಪುರಸ್ಕೃತ `ಯುವ ಆಪದ್ ಮಿತ್ರ’ ಯೋಜನೆಯಡಿ ಆಯ್ಕೆಯಾದ ಸ್ವಯಂಸೇವಕರಿಗೆ ರಕ್ಷಣಾ ಸಾಮಗ್ರಿಗಳಿರುವ `ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್’ (Emergency Responder Kit) ಖರೀದಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಯೋಜನೆಯಡಿ ರಾಜ್ಯದ 11 ಜಿಲ್ಲೆಗಳಾದ ಬಾಗಲಕೋಟೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಂಗಳೂರು ನಗರ, ಕಲಬುರಗಿ, ಕೊಡಗು, ರಾಯಚೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸ್ಕೌಟ್ಸ್ ಮತ್ತು ಎನ್‌ಎಸ್‌ಎಸ್ ಹಾಗೂ `ಮೇರಾ ಯುವ ಭಾರತ್’ ಏಜೆನ್ಸಿಗಳ ಮೂಲಕ ಒಟ್ಟು 10,350 ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಪ್ರತಿ ಸ್ವಯಂಸೇವಕರಿಗೆ ತಲಾ 10,000 ರೂ. ಮೌಲ್ಯದ ರಕ್ಷಣಾ ಉಪಕರಣಗಳ `ಎಮರ್ಜೆನ್ಸಿ ರೆಸ್ಪಾಂಡರ್ ಕಿಟ್’ ನೀಡಲಾಗುವುದು. ಇದಕ್ಕೆ ಒಟ್ಟು 10.35 ಕೋಟಿ ರೂ. ವೆಚ್ಚವಾಗಲಿದೆ.
ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ-2022 ವಿಧೇಯಕ ಹಿಂಪಡೆಯಲು ನಿರ್ಧಾರ
`ದಿ ಕ್ರಿಮಿನಲ್ ಲಾ ಅಮೆಂಡ್ಮೆಂಟ್ ಆರ್ಡಿನೆನ್ಸ್, 1944 (ಕರ್ನಾಟಕ ತಿದ್ದುಪಡಿ) ವಿಧೇಯಕ, 2022′ ಅನ್ನು ವಾಪಸ್ ಪಡೆಯಲು ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕರ್ನಾಟಕ ವಿಧಾನಮಂಡಲದ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿದ್ದ ಈ ವಿಧೇಯಕವನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧೇಯಕವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿತ್ತು.
ಕೇಂದ್ರದ ಹೊಸ ಕಾನೂನಿನಲ್ಲಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023) ಈಗಾಗಲೇ ಈ ಎಲ್ಲ ವಿಸ್ತೃತ ಅವಕಾಶಗಳು ಇರುವುದರಿಂದ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳ ಅಂಕಿತಕ್ಕೆ ಬಾಕಿ ಇರುವ `ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕ, 2022′ ಅನ್ನು ಮುಂದುವರಿಸುವ ಅಗತ್ಯವಿಲ್ಲವೆಂದು ಪರಿಗಣಿಸಿ, ಅದನ್ನು ಅಧಿಕೃತವಾಗಿ ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ.
ಮಿಶ್ರತಳಿ ಹಸು-ಸುಧಾರಿತ ಎಮ್ಮೆ ಖರೀದಿಗೆ ಪ್ರೋತ್ಸಾಹಧನ
ಉತ್ತರ ಕರ್ನಾಟಕದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಹೈನುಗಾರಿಕೆಯನ್ನು ಉತ್ತೇಜಿಸಲು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ 9,600 ಅರ್ಹ ಮಹಿಳಾ ಫಲಾನುಭವಿಗಳಿಗೆ ಶೇ.25ರಷ್ಟು ಸಹಾಯಧನದಲ್ಲಿ ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆ ಖರೀದಿಸಲು ಪ್ರೋತ್ಸಾಹಧನ ನೀಡುವ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಯೋಜನೆಯ ಒಟ್ಟು ವೆಚ್ಚ 18.00 ಕೋಟಿ ರೂ.ಗಳಾಗಿದ್ದು, ಬೆಳಗಾವಿ ವಿಭಾಗದ 4,800 ಫಲಾನುಭವಿಗಳಿಗೆ 9.00 ಕೋಟಿ ರೂ. ಹಾಗೂ ಕಲಬುರಗಿ ವಿಭಾಗದ 4,800 ಫಲಾನುಭವಿಗಳಿಗೆ 9.00 ಕೋಟಿ ರೂ. ಅನುದಾನವನ್ನು ಸಮಾನವಾಗಿ ಹಂಚಲಾಗಿದೆ. ಪ್ರತಿ ಅರ್ಹ ಮಹಿಳಾ ಫಲಾನುಭವಿಗೆ ತಲಾ 18,750 ರೂ.ಗಳಂತೆ ಶೇ.25ರಷ್ಟು ಸರ್ಕಾರಿ ಸಹಾಯಧನ ದೊರೆಯಲಿದೆ.
ಇತರೆ ಪ್ರಮುಖ ತೀರ್ಮಾನಗಳು
– KIADB ವತಿಯಿಂದ ಸುವರ್ಣ ಕರ್ನಾಟಕ ಅಭಿವೃದ್ಧಿ ಕಾರಿಡಾರ್ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಪೈಕಿ ಶಿವಮೊಗ್ಗ ಜಿಲ್ಲೆ ಮತ್ತು ತಾಲ್ಲೂಕು, ಸಿದ್ಧಿಪುರ ಮತ್ತು ದೇವಕಾತಿಕೊಪ್ಪ ಗ್ರಾಮಗಳ 362.21 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಒಪ್ಪಿಗೆ.
– KIADB ವತಿಯಿಂದ ಹಾರೋಹಳ್ಳಿ 3ನೇ ಹಂತದ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಪೈಕಿ ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ತಾಲ್ಲೂಕು, ಹಾರೋಹಳ್ಳಿ ಹೋಬಳಿ, ಚೀಲೂರು ಗ್ರಾಮದ ಸರ್ವೆ 2.192/1, 192/2 5, 192/30 01-39 ಎಕರೆ-ಗುಂಟೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಒಪ್ಪಿಗೆ.
– ಅಫ್ಜಲಪುರ ತಾಲೂಕಿನಲ್ಲಿ 3791.33 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ.
– ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ e-PoS, ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಐರಿಸ್ ಸ್ಕ್ಯಾನರ್ ಯಂತ್ರಗಳನ್ನು ವಾರ್ಷಿಕ ಅಂದಾಜು ರೂ.44.37 ಕೋಟಿಗಳ ವೆಚ್ಚದಲ್ಲಿ ಬಾಡಿಗೆ ಆಧಾರದ ಮೇಲೆ ಅಳವಡಿಸಲು ಒಪ್ಪಿಗೆ. ಇದು ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನವಾಗಿದೆ.
– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 400 ಮೊಫಸಿಲ್ ಬಸ್ಸುಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 200 ಮೊಫಸಿಲ್ ಬಸ್ಸುಗಳು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 200 ಸಿಟಿ ಬಸ್ಸುಗಳು ಸೇರಿದಂತೆ ಒಟ್ಟು 800 ಹೊಸ ಬಿ.ಎಸ್-6 ಸಿಟಿ ಪೂರ್ಣ ನಿರ್ಮಿತ ಮೊಫಸಿಲ್/ಬಸ್ಸುಗಳನ್ನು ಒಟ್ಟು ರೂ. 304 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
– ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಬೆಂಗಳೂರಿನ 5 ನಗರಪಾಲಿಕೆಗಳ ಸೇವೆಗಳನ್ನು ತಲುಪಿಸಲು ಐದು ಸಂಯೋಜಿತ ಎಂಡ್-ಟು-ಎಂಡ್ ನಾಗರಿಕ ಸೌಲಭ್ಯ ಮತ್ತು ಸೇವಾ ವಿತರಣಾ ಕೇಂದ್ರಗಳನ್ನು ಗ್ಯಾರಂಟಿ ಸೇವಾ ಕೇಂದ್ರಗಳ (GBA-GSKs) ಹೆಸರಿನಲ್ಲಿ PPP DEOM ಆಧಾರದ ಮೇಲೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: ಜನವರಿ ಮೊದಲ ವಾರದಲ್ಲಿ ಜಿ.ಪಂಚಾಯತ್, ತಾ.ಪಂಚಾಯತ್ ಚುನಾವಣೆಗೆ ಸಿದ್ಧತೆ




