ಸೈಟ್ ಕ್ಲೀನಿಂಗ್ ಡ್ರೈವ್: 2 ತಿಂಗಳಲ್ಲಿ 709 ಖಾಲಿ ನಿವೇಶನಗಳ ಸ್ವಚ್ಛತೆ, 372 ಮಾಲೀಕರಿಗೆ ಪಾಲಿಕೆಯಿಂದ ನೋಟಿಸ್..!
ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆರಂಭಿಸಿರುವ ‘ತ್ಯಾಜ್ಯ ಮುಕ್ತ’ ಅಭಿಯಾನದಡಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಳೆದ ಎರಡು ತ...

ಬೆಂಗಳೂರು: ನಗರದ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಮ್ಮಿಕೊಂಡಿರುವ ‘ತ್ಯಾಜ್ಯ ಮುಕ್ತ’ ಅಭಿಯಾನದ ಭಾಗವಾಗಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಕಳೆದ ಎರಡು ತಿಂಗಳಲ್ಲಿ ಗುರುತಿಸಲಾಗಿದ್ದ 1,242 ಖಾಲಿ ನಿವೇಶನಗಳ ಪೈಕಿ 709 ನಿವೇಶನಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದೆ.
ವಸತಿ ಪ್ರದೇಶಗಳಲ್ಲಿರುವ ಖಾಲಿ ನಿವೇಶನಗಳು ಕಸದ ರಾಶಿಯಾಗುವುದನ್ನು ಮತ್ತು ಸೊಳ್ಳೆಗಳ ತಾಣಗಳಾಗುವುದನ್ನು ತಪ್ಪಿಸುವುದು ಪಾಲಿಕೆಯ ಮುಖ್ಯ ಆದ್ಯತೆಯಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ. ಆಯಾ ನಿವೇಶನಗಳ ಮಾಲೀಕರು ತಮ್ಮ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ವಿಫಲರಾಗುವ ನಿವೇಶನಗಳ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುತ್ತಿದೆ. 533 ಖಾಲಿ ನಿವೇಶನಗಳ ಮಾಲೀಕರ ವಿರುದ್ಧ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಈವರೆಗೆ 372 ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಖಾಲಿ ನಿವೇಶನಗಳಿಗೆ ತ್ಯಾಜ್ಯ ಹಾಗೂ ಕಸ ಸುರಿಯುವುದನ್ನು ತಡೆಯಲು ಮಾಲೀಕರು ಸೂಕ್ತ ತಂತಿ ಬೇಲಿ ಹಾಕಬೇಕು ಮತ್ತು ಜಾಗವನ್ನು ಸ್ವಚ್ಛವಾಗಿಡಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡದೆ, ನಗರವನ್ನು ಸ್ವಚ್ಛವಾಗಿಡುವ ಪಾಲಿಕೆಯ ಪ್ರಯತ್ನಕ್ಕೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ವಿಭಾಗವಾರು ವಿವರ:
ದಕ್ಷಿಣ: 518 ನಿವೇಶನಗಳ ಪೈಕಿ ಮಾಲೀಕರೇ 305 ನಿವೇಶನಗಳನ್ನು ಹಾಗೂ ಪಾಲಿಕೆ 13 ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 200 ನಿವೇಶನಗಳನ್ನು ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ. 93 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಬೊಮ್ಮನಹಳ್ಳಿ: 498 ನಿವೇಶನಗಳ ಪೈಕಿ ಮಾಲೀಕರು 276 ನಿವೇಶನಗಳನ್ನು ಹಾಗೂ ಪಾಲಿಕೆ ಒಂದು ನಿವೇಶನವನ್ನು ಸ್ವಚ್ಛಗೊಳಿಸಿದೆ. 140 ನಿವೇಶನ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಬಿಟಿಎಂ: 111 ನಿವೇಶನಗಳ ಪೈಕಿ ಮಾಲೀಕರು 23 ಹಾಗೂ ಪಾಲಿಕೆ ಐದು ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 83 ನಿವೇಶನಗಳ ಪೈಕಿ 62 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಪದ್ಮನಾಭನಗರ: 62 ನಿವೇಶನಗಳ ಪೈಕಿ ಮಾಲೀಕರು 38 ಹಾಗೂ ಪಾಲಿಕೆ 18 ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಇನ್ನೂ ಆರು ನಿವೇಶನಗಳನ್ನು ಸ್ವಚ್ಛಗೊಳಿಸಬೇಕಿದೆ. 35 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಜಯನಗರ: 53 ನಿವೇಶನಗಳ ಪೈಕಿ ಮಾಲೀಕರು 26 ಹಾಗೂ ಪಾಲಿಕೆ ನಾಲ್ಕು ನಿವೇಶನಗಳನ್ನು ಸ್ವಚ್ಛಗೊಳಿಸಿದೆ. ಉಳಿದ 23 ನಿವೇಶನಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 42 ಮಾಲೀಕರಿಗೆ ನೋಟಿಸ್ ನೀಡಲಾಗಿದೆ.




