ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ SIR ಪ್ರಕ್ರಿಯೆಗೆ ವೇಗ: ಹೆಚ್ಚುವರಿಯಾಗಿ 1,117 ಅಧಿಕಾರಿಗಳ ನೇಮಕ..!
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಆಯ್ದು ತೆಗೆದುಹಾಕಲಾಗುತ್ತಿದೆ ಎಂಬ ಆರೋಪಗಳು ಹಾಗೂ ರಾಜಕೀಯ ಪಕ್ಷಗಳಿಂದ ಪೊಲೀಸ್ ದೂರುಗಳು ಕೇಳಿಬರ...

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಮತ್ತು ವಿವಿಧ ರಾಜಕೀಯ ಪಕ್ಷಗಳಿಂದ ಪೊಲೀಸ್ ದೂರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಎಸ್‌ಐಆರ್ ಕಾರ್ಯವನ್ನು ವೇಗಗೊಳಿಸಲು ಹೆಚ್ಚುವರಿಯಾಗಿ 1,117 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಮತದಾರರ ಪಟ್ಟಿಯ ಎಸ್‌ಐಆರ್‌ಗೆ ಸಂಬಂಧಿಸಿದ ಆಕ್ಷೇಪಣೆಗಳು ಹಾಗೂ ಹಕ್ಕುಗಳ ಕುರಿತು ವಿಶೇಷ ಆಯುಕ್ತೆ (ಚುನಾವಣೆ) ಶಿಲ್ಪಾ ನಾಗ್ ಮಂಗಳವಾರ ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡರು.
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಜಿಬಿಎ ವ್ಯಾಪ್ತಿಯಲ್ಲಿ 814 ವಿಚಾರಣಾ ಕೇಂದ್ರಗಳನ್ನು ತೆರೆಯಲಾಗಿದೆ. 1,117 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳ ನೇಮಕದಿಂದಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಒಟ್ಟು ಅಧಿಕಾರಿಗಳ ಸಂಖ್ಯೆ 1,193ಕ್ಕೆ ಏರಿಕೆಯಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಸಿದ್ಧಪಡಿಸಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಮ್ಯಾಪ್ ಮಾಡಲಾಗಿಲ್ಲ’ ಅಥವಾ ‘ತಾರ್ಕಿಕ ವ್ಯತ್ಯಾಸ’ ಎಂದು ನಮೂದಿಸಿ ನೋಟಿಸ್ ನೀಡಿದ್ದಲ್ಲಿ, ಅಥವಾ ನಮೂನೆ-6 ಮತ್ತು ನಮೂನೆ-7ರ ದಾಖಲೆಗಳ ಪರಿಶೀಲನೆ ಅಗತ್ಯವಿದ್ದಲ್ಲಿ, ಮತದಾರರ ನೋಂದಣಿ ಅಧಿಕಾರಿಗಳು ಅಥವಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ನಿವಾಸಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪಡೆದು, ಪರಿಶೀಲಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ.
ಆದ್ದರಿಂದ ಇಂತಹ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕಿಲ್ಲ. ವಿಶೇಷ ಸಂದರ್ಭಗಳಲ್ಲಿ ಮತದಾರರ ನೋಂದಣಿ ಅಧಿಕಾರಿಗಳ ನಿರ್ಧಾರದಂತೆ ವಿಚಾರಣೆಯನ್ನು ಆನ್‌ಲೈನ್ ಮೂಲಕವೂ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಎಸ್‌ಐಆರ್ ದತ್ತಾಂಶದ ಪ್ರಕಾರ ಜಿಬಿಎ ವ್ಯಾಪ್ತಿಯಲ್ಲಿ 56 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಇವರಲ್ಲಿ 24 ಲಕ್ಷಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ. ಎಲ್ಲ ನೋಟಿಸ್‌ಗಳನ್ನು ಈಗಾಗಲೇ ತಲುಪಿಸಲಾಗಿದ್ದು, ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ 3,70,329 ನೋಟಿಸ್‌ಗಳ ವಿಚಾರಣೆ ಬಾಕಿ ಇದೆ. ನಿಗದಿತ ಅವಧಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ಸೂಕ್ಷ್ಮ ಯೋಜನೆ ರೂಪಿಸಲಾಗಿದೆ.
ಇಲ್ಲಿಯವರೆಗೆ ನಮೂನೆ-6, 7 ಮತ್ತು 8ಕ್ಕೆ ಸಂಬಂಧಿಸಿದ ಒಟ್ಟು 5,42,893 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 1,02,712 ಅರ್ಜಿಗಳನ್ನು ಅಂಗೀಕರಿಸಲಾಗಿದ್ದು, 3,89,698 ಅರ್ಜಿಗಳು ಬಾಕಿ ಇವೆ. ಬಾಕಿ ಇರುವ ಅರ್ಜಿಗಳನ್ನು ಚುನಾವಣಾ ಆಯೋಗದ ನಿಯಮಾವಳಿಗಳಂತೆ ಪರಿಶೀಲಿಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
18 ವರ್ಷ ತುಂಬಿರುವ ಹಾಗೂ ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಅರ್ಹರಾಗಿರುವವರಿಗೆ ನಮೂನೆ-6 ನೀಡಬೇಕು ಎಂದು ಚುನಾವಣಾ ಆಯೋಗ ನಿರ್ದೇಶಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಅರ್ಹ ವ್ಯಕ್ತಿಗಳಿಗೂ ಇದೇ ನಮೂನೆಯ ಮೂಲಕ ನೋಂದಣಿಗೆ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ.
ಎಸ್‌ಐಆರ್ ಪ್ರಕ್ರಿಯೆ ಮುಕ್ತಾಯವಾದ ನಂತರ ಅರ್ಹರೆಲ್ಲರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಅಭಿಯಾನಗಳು ಮತ್ತು ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಶಿಲ್ಪಾ ನಾಗ್ ತಿಳಿಸಿದರು.
ದಿನಾಂಕಗಳು...
ಆಗಸ್ಟ್ 24, 2026: ಕರಡು ಮತದಾರರ ಪಟ್ಟಿ ಪ್ರಕಟಣೆ
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ: ಹಕ್ಕುಗಳು ಮತ್ತು ಆಕ್ಷೇಪಣೆ ಸಲ್ಲಿಕೆ ಅವಧಿ
ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ: ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ
ಅಕ್ಟೋಬರ್ 27, 2026: ಅಂತಿಮ ಮತದಾರರ ಪಟ್ಟಿ ಪ್ರಕಟಣೆ




