ದಸರಾ, ದೀಪಾವಳಿಗೆ ಮಂಗಳೂರು–ಬೆಂಗಳೂರು ನಡುವೆ ವಿಶೇಷ ರೈಲು ಓಡುತ್ತಾ? ರೈಲ್ವೆ ಸಚಿವರಿಗೆ ಅರುಣ್ ಶ್ಯಾಮ್ ಮಾಡಿದ ಟ್ವೀಟ್‌ನಲ್ಲಿ ಏನಿದೆ?
ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರು-ಮಂಗಳೂರು ನಡುವೆ ಪ್ರಯಾಣಿಕರ ದಟ್ಟಣೆ ಹಿನ್ನೆಲೆ ವಿಶೇಷ ರೈಲು ಓಡಿಸಲು ಹಿರಿಯ ನ್ಯಾಯವಾದಿ ಅರುಣ್‌ಶ್ಯಾಮ್ ಒತ್ತಾಯ. ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಹೆಚ್ಚಿರುವ ಕಾ...

ಮಂಗಳೂರು (ಅ.9): ದಸರಾ ಹಾಗೂ ದೀಪಾವಳಿ ಹಬ್ಬದ ರಜಾ ಅವಧಿಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ವಿಶೇಷ ರೈಲುಗಳನ್ನು ಓಡಿಸುವಂತೆ ದ.ಕ. ಮೂಲದ ಬೆಂಗಳೂರಿನ ಹಿರಿಯ ನ್ಯಾಯವಾದಿ ಹಾಗೂ ಕರ್ಣಾಟಕ ಬ್ಯಾಂಕ್ ನಿರ್ದೇಶಕ ಅರುಣ್‌ಶ್ಯಾಮ್ ಒತ್ತಾಯಿಸಿದ್ದಾರೆ.ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಂಘಟನೆಯ ಮನವಿಯನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಗುರುವಾರ ತನ್ನ ‘ಎಕ್ಸ್’ ಖಾತೆ ಮೂಲಕ ಟ್ಯಾಗ್ ಮಾಡಿ ಅವರು ಮನವಿ ಮಾಡಿದ್ದಾರೆ.
ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು
ದಸರಾ ಸಂದರ್ಭದಲ್ಲಿ ಬೆಂಗಳೂರಿನಿಂದ ಕರಾವಳಿ ಕರ್ನಾಟಕದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಲಿದ್ದು, ಮಂಗಳೂರು ಮಾತ್ರವಲ್ಲದೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ತೆರಳುವ ಭಕ್ತರ ಸಂಖ್ಯೆಯೂ ಹೆಚ್ಚಾಗಲಿದೆ. ಹೀಗಾಗಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಸ್ಆರ್ ಬೆಂಗಳೂರು-ಕೋಝಿಕ್ಕೋಡ್ ಎಕ್ಸ್‌ಪ್ರೆಸ್‌ನಲ್ಲಿ ‘ರೆಗ್ರೆಟ್’
ಅ.16ರಂದು ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕೋಝಿಕ್ಕೋಡ್ ಎಕ್ಸ್‌ಪ್ರೆಸ್‌ನಲ್ಲಿ ‘ರೆಗ್ರೆಟ್’ ತೋರಿಸುತ್ತಿದ್ದು, 16585 ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್‌ನಲ್ಲಿ 150ಕ್ಕೂ ಅಧಿಕ ಪ್ರಯಾಣಿಕರ ವೇಟಿಂಗ್ ಲಿಸ್ಟ್ ಇದೆ. ಇದೇ ರೀತಿ ನ. 6ರಂದು ದೀಪಾವಳಿ ಅವಧಿಯಲ್ಲೂ ಎರಡೂ ರೈಲುಗಳಲ್ಲಿ 150ಕ್ಕೂ ಅಧಿಕ ವೇಟಿಂಗ್ ಲಿಸ್ಟ್ ಇರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕೆಎಸ್ಆರ್ ಬೆಂಗಳೂರು/ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ಗೆ ವಿಶೇಷ ರೈಲು
ಅ. 16ರಂದು ಕೆಎಸ್ಆರ್ ಬೆಂಗಳೂರು/ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ಗೆ ವಿಶೇಷ ರೈಲು ಓಡಿಸಬೇಕು ಎಂದು ಆಗ್ರಹಿಸಲಾಗಿದೆ. ದಸರಾ ರಜೆ ಮುಗಿದ ಬಳಿಕ ಪ್ರಯಾಣಿಕರ ವಾಪಸಾತಿಗಾಗಿ ಅ.20ರಂದು ಮಂಗಳೂರು ಸೆಂಟ್ರಲ್‌ನಿಂದ ಕೆಎಸ್ಆರ್ ಬೆಂಗಳೂರು/ಯಶವಂತಪುರಕ್ಕೆ ವಿಶೇಷ ರೈಲು ಓಡಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ದೀಪಾವಳಿ ಪ್ರಯುಕ್ತ ನ.6ರಂದು ಬೆಂಗಳೂರು/ಯಶವಂತಪುರದಿಂದ ಮಂಗಳೂರಿಗೆ ಹಾಗೂ ರಜೆ ಮುಗಿದ ಬಳಿಕ ನ.9ರಂದು ಮಂಗಳೂರಿನಿಂದ ಬೆಂಗಳೂರು/ಯಶವಂತಪುರಕ್ಕೆ ವಿಶೇಷ ರೈಲು ಸೇವೆ ಕಲ್ಪಿಸುವಂತೆ ಅರುಣ್‌ಶ್ಯಾಮ್ ಮನವಿಯಲ್ಲಿ ಆಗ್ರಹಿಸಿದ್ದಾರೆ.




