ರೈಲಿನಲ್ಲಿ ಯುವತಿ ಸಾವು: 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ' ಎಂದಿದ್ದ ನೃತ್ಯಗಾರ್ತಿ ಶವವಾಗಿ ಪತ್ತೆ
ವಿಶಾಖಪಟ್ಟಣ: ನೃತ್ಯ ತಂಡದೊಂದಿಗೆ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಅಸ್ಸಾಂನ ಕಾಮರೂಪ್ ಜಿಲ್ಲೆಯ 20 ವರ್ಷದ ಡ್ಯಾನ್ಸರ್, ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ರೈಲು ಹಳಿಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ...

ವಿಶಾಖಪಟ್ಟಣ: ಅಸ್ಸಾಂನ ಕಾಮರೂಪ್ ಜಿಲ್ಲೆಯ 20 ವರ್ಷದ ನೃತ್ಯಗಾರ್ತಿಯೊಬ್ಬರು, ತಮ್ಮ ನೃತ್ಯ ತಂಡದೊಂದಿಗೆ ವಿಶಾಖಪಟ್ಟಣಕ್ಕೆ ಪ್ರಯಾಣ ಬೆಳೆಸಿದ್ದ ವೇಳೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ರೈಲ್ವೆ ಹಳಿಯ ಅಕ್ಕಪಕ್ಕದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.
'ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್' ರೈಲಿನಲ್ಲಿ ತವರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಯುವತಿ ಕಾಣೆಯಾಗಿದ್ದರು. ಯುವತಿಯ ಮರಣದ ಕುರಿತು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಮೃತಪಟ್ಟ ಯುವತಿಯು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಗುವಾಹಟಿಯ 'ಬಿ. ಬೊರುವಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಇವರ ಕುಟುಂಬ ಕಾಮರೂಪ್ ಜಿಲ್ಲೆಗೆ ಸೇರಿದೆ.
ಪೊಲೀಸರ ಮಾಹಿತಿ ಪ್ರಕಾರ, ಯುವತಿ ನೃತ್ಯ ತಂಡವೊಂದರ ಜೊತೆಗೂಡಿ ವಿಶಾಖಪಟ್ಟಣಕ್ಕೆ ನೃತ್ಯ ಪ್ರದರ್ಶನ ನೀಡಲು ಹೋಗಿದ್ದರು. ಆದರೆ ಅಕ್ಟೋಬರ್ 10 ರಂದು ಗುವಾಹಟಿಯಲ್ಲಿ ಬ್ಯಾಂಕ್ ಪರೀಕ್ಷೆ ಇದ್ದ ಕಾರಣಕ್ಕೆ ಅವರು ಮನೆಗೆ ಮರಳಲು ನಿರ್ಧರಿಸಿದ್ದರು.
"ಅಕ್ಟೋಬರ್ 5 ರ ಸಂಜೆ, ಅವರು 'ಸಿಲ್ಚಾರ್ ಎಕ್ಸ್‌ಪ್ರೆಸ್'ಗಾಗಿ ಆನ್‌ಲೈನ್‌ನಲ್ಲಿ 'ತತ್ಕಾಲ್' ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿದ್ದರು. ಆದರೆ ಕಾಯ್ದಿರಿಸುವಿಕೆ(reservation) ಖಚಿತವಾಗಿರಲಿಲ್ಲ" ಎಂದು ಪೊಲೀಸರು ಹೇಳಿದ್ದಾರೆ.
ನಂತರ ಅವರು ವಿಶಾಖಪಟ್ಟಣಂ ರೈಲು ನಿಲ್ದಾಣಕ್ಕೆ ತೆರಳಿ, ಅಸ್ಸಾಂಗೆ ತೆರಳುವ ವಿವೇಕ್ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 22503) ರೈಲನ್ನು ಏರಿದ್ದರು.
ಯುವತಿಯ ತಾಯಿಯ ದೂರಿನನ್ವಯ, ಅಕ್ಟೋಬರ್ 5 ರ ರಾತ್ರಿ 11:50 ಕ್ಕೆ ಆಕೆ ರೈಲು ಹತ್ತಿದ್ದಳು. ರೈಲು ವಿಶಾಖಪಟ್ಟಣದಿಂದ ರಾತ್ರಿ 12:10 ಕ್ಕೆ ಪ್ರಯಾಣ ಆರಂಭಿಸಿತ್ತು. ಅಕ್ಟೋಬರ್ 7 ರಂದು ಬೆಳಿಗ್ಗೆ 9:05 ಕ್ಕೆ ಗುವಾಹಟಿಯನ್ನು ತಲುಪಬೇಕಿತ್ತು. ಪ್ರಯಾಣದ ಅವಧಿಯಲ್ಲಿ, ಬೋಗಿಯಲ್ಲಿ ಅತಿಯಾದ ಜನಸಂದಣಿ ಇರುವುದಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದಳು. ಜೊತೆಗೆ ತನ್ನ ಸುತ್ತಮುತ್ತ ಕೇವಲ ಪುರುಷ ಪ್ರಯಾಣಿಕರೇ ಇದ್ದಿದ್ದರಿಂದ ಆತಂಕಗೊಂಡಿದ್ದಾಗಿ ಹೇಳಿಕೊಂಡಿದ್ದಳು.
ಕುಟುಂಬಕ್ಕೆ ರವಾನಿಸಿದ ಅಂತಿಮ ಸಂದೇಶದಲ್ಲಿ, ತನ್ನ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರಿದ್ದ ಕಾರಣ ಭಯವಾಗುತ್ತಿದೆ ಎಂದು ಯುವತಿ ತಿಳಿಸಿದ್ದಾಳೆ. ಅಕ್ಟೋಬರ್ 6 ರಂದು ಮಧ್ಯಾಹ್ನ 1:30ರ ಸುಮಾರಿಗೆ ಕುಟುಂಬದವರು ಕೊನೆಯದಾಗಿ ಯುವತಿಯ ಜೊತೆ ಮಾತನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಂತಿಮ ಸಂಭಾಷಣೆ ಅಕ್ಟೋಬರ್ 6 ರಂದು ನಸುಕಿನ ಜಾವ 2:39 ಕ್ಕೆ ನಡೆದಿದೆ. ಆ ಬಳಿಕ ಆಕೆಯ ಫೋನ್ ಸಂಪರ್ಕಕ್ಕೆ ಸಿಗದೆ ಸ್ವಿಚ್ ಆಫ್ ಆಗಿತ್ತು.
ಈ ಕುರಿತು ಯುವತಿಯ ತಾಯಿ ಗುವಾಹಟಿಯಲ್ಲಿರುವ ರೈಲ್ವೆ ಪೊಲೀಸರಿಗೆ (GRP) ದೂರು ಸಲ್ಲಿಸಿದ್ದರು. ರೈಲ್ವೆ ಸಹಾಯವಾಣಿ ಸಂಖ್ಯೆ 139 ರ ಮೂಲಕವೂ ದೂರು ದಾಖಲಿಸಿದ್ದರು. ಯುವತಿಯನ್ನು ಪತ್ತೆಹಚ್ಚುವಂತೆ ಕೋರಿ ಸಂಬಂಧಿಕರು ರೈಲ್ವೆ ರಕ್ಷಣಾ ಪಡೆ (RPF) ಮತ್ತು ಅಸ್ಸಾಂ ಪೊಲೀಸರಿಗೂ ಮಾಹಿತಿ ನೀಡಿದ್ದರು. ರೈಲಿನ S2 ಬೋಗಿಯಲ್ಲಿ ಬ್ಯಾಗ್ ಪತ್ತೆಯಾದ ನಂತರ ರೈಲ್ವೆ ಪೊಲೀಸರು ಆ ಮಾರ್ಗದಲ್ಲಿ ಶೋಧ ಕಾರ್ಯ ಆರಂಭಿಸಿದ್ದರು. ಹುಡುಕಾಟದ ವೇಳೆ ಮಲಯಾಪುರಂ ಸಮೀಪದ ಅರಣ್ಯ ಪ್ರದೇಶದಲ್ಲಿ ಯುವತಿ ಮೃತದೇಹ ಸಿಕ್ಕಿದೆ.
ಯುವತಿಯ ಸಾವಿಗೆ ನಿಖರ ಕಾರಣವೇನೆಂಬುದು ಇದುವರೆಗೆ ತಿಳಿದುಬಂದಿಲ್ಲ. ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದರೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸಾವು ಸಂಭವಿಸಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಮರಣೋತ್ತರ ಪರೀಕ್ಷೆ ಮತ್ತು ಮುಂದಿನ ವಿಧಿವಿಜ್ಞಾನ ತನಿಖೆಯು ಸಾವಿನ ಕಾರಣವನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿದೆ.




