ಮುಖ್ಯ ವಿಷಯಕ್ಕೆ ಹೋಗಿ
The Karnataka Today
10 Oct
ಸುದ್ದಿ
ಭಾರತ

Delhi CJP Protest: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಸೇರಿ 150ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ

ನವದೆಹಲಿ: ಜಂತರ್ ಮಂತರ್‌ನಲ್ಲಿ ಇಂದು ಬೆಳಗ್ಗೆ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಮುನ್ನ, ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿಯನ್ನು ದೆಹಲಿ ಪೊಲೀಸರು ಗುರುಗ್ರಾಮದ ಸೆಕ್ಟರ್ 56ರಲ್ಲಿರ...

Delhi CJP Protest: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಸೇರಿ 150ಕ್ಕೂ ಹೆಚ್ಚು ಮಂದಿ ಪೊಲೀಸ್ ವಶ; Video
ಹಂಚಿಕೊಳ್ಳಿ:

ನವದೆಹಲಿ: ಜಂತರ್ ಮಂತರ್‌ನಲ್ಲಿ ಇಂದು ಬೆಳಗ್ಗೆ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಮುನ್ನ, ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿಯನ್ನು ದೆಹಲಿ ಪೊಲೀಸರು ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಠಿ ಮುಂದಾಗಿದ್ದರಿಂದ ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

ಮೂಲಗಳ ಪ್ರಕಾರ, ಇಂದು ಬೆಳಗ್ಗೆ ದೆಹಲಿ ಪೊಲೀಸರ ಸುಮಾರು 50 ಸಿಬ್ಬಂದಿಯ ತಂಡ ಗುರುಗ್ರಾಮದಲ್ಲಿರುವ ರಾಠಿ ಅವರ ಮನೆಗೆ ತೆರಳಿ ಅವರನ್ನು ವಶಕ್ಕೆ ಪಡೆದಿದೆ.

ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಜೆಪಿ, “ಧ್ರುವ್ ರಾಠಿಯನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದೆ.

ನಿನ್ನೆ ಸಂಜೆ ರಾಠಿ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊವೊಂದನ್ನು ಪ್ರಕಟಿಸಿ, ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಟೀಕಾಕಾರರೆಂದೇ ಗುರುತಿಸಿಕೊಂಡಿರುವ ರಾಠಿ, ಈ ವಾರದ ಆರಂಭದಲ್ಲಿ ಜರ್ಮನಿಯಿಂದ ಭಾರತಕ್ಕೆ ಆಗಮಿಸಿದ್ದರು. ಮೊನ್ನೆ 8ರಂದು ಬೆಂಗಳೂರಿನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿಯೂ ಅವರು ಪಾಲ್ಗೊಂಡಿದ್ದರು.

ರಾಠಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 1.92 ಕೋಟಿ, ಎಕ್ಸ್‌ನಲ್ಲಿ 33 ಲಕ್ಷ ಹಾಗೂ ಯೂಟ್ಯೂಬ್‌ನಲ್ಲಿ 3.3 ಕೋಟಿ ಚಂದಾದಾರರನ್ನು ಹೊಂದಿದ್ದಾರೆ.

ದೆಹಲಿಯಾದ್ಯಂತ ಭದ್ರತೆ ಬಿಗಿ

ಭದ್ರತಾ ಕಾರಣಗಳು ಮತ್ತು ಕಾರ್ಯವಿಧಾನಕ್ಕೆ ಸಂಬಂಧಿಸಿದ ಅಗತ್ಯತೆಗಳನ್ನು ಉಲ್ಲೇಖಿಸಿ, ಈ ವಾರದ ಆರಂಭದಲ್ಲಿ ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು.

ಪ್ರತಿಭಟನಾಕಾರರು ಪ್ರತಿಭಟನಾ ಸ್ಥಳವನ್ನು ತಲುಪುವುದನ್ನು ತಡೆಯಲು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯುವ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದಾರೆ. ಅಲ್ಲದೆ, ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ದೆಹಲಿಯ ಹೃದಯಭಾಗದಲ್ಲಿ ಇಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಮುನ್ನ, ರಾತ್ರೋರಾತ್ರಿ 400ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ನೂರಾರು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, ಹಲವು ಮೆಟ್ರೋ ನಿಲ್ದಾಣಗಳನ್ನೂ ಮುಚ್ಚಲಾಗಿದೆ.

ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಿಜೆಪಿ ತನ್ನ ಬೆಂಬಲಿಗರನ್ನು ಸಂಘಟಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರವು ಪೊಲೀಸ್ ಇಲಾಖೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ.

ಹಂಚಿಕೊಳ್ಳಿ: