CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ
ಇಂದು ಶನಿವಾರ ಮುಂಜಾನೆ ದೆಹಲಿಯ ಕನ್ನಾಟ್ ಪ್ಲೇಸ್ ಪ್ರದೇಶದ ಜನಪಥ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿ...

ಇಂದು ಶನಿವಾರ ಮುಂಜಾನೆ ದೆಹಲಿಯ ಕನ್ನಾಟ್ ಪ್ಲೇಸ್ ಪ್ರದೇಶದ ಜನಪಥ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ‘ಜಂತರ್ ಮಂತರ್ 2.0’ ಪ್ರತಿಭಟನೆಗೆ ಕರೆ ನೀಡಿತ್ತು.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ ಬಳಿಕ, ಸ್ಥಳ ಯಾವುದೇ ಆಗಿದ್ದರೂ ಪ್ರತಿಭಟನೆ ನಡೆಸಲು ಯತ್ನಿಸುವವರನ್ನು ವಶಕ್ಕೆ ಪಡೆಯುವಂತೆ ದೆಹಲಿ ಪೊಲೀಸರು ತಮ್ಮ ತಂಡಗಳಿಗೆ ಸೂಚಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ದೆಹಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳ 35,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಹೊಣೆಗಾರಿಕೆ ನಿಗದಿಪಡಿಸುವುದು ಹಾಗೂ ಚುನಾವಣಾ ಅಕ್ರಮಗಳ ಆರೋಪಗಳ ಕುರಿತು ಉತ್ತರದಾಯಿತ್ವಕ್ಕೆ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ, ದೊಡ್ಡ ಸಂಖ್ಯೆಯಲ್ಲಿ ಜನರನ್ನು ಒಗ್ಗೂಡಿಸಲು ಸಿಜೆಪಿ ಮುಂದಾಗಿದೆ.
ತೀವ್ರ ಪೊಲೀಸ್ ಭದ್ರತೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಾಡುತ್ತಿರುವ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರ ನಿರ್ಧಾರದ ಬೆನ್ನಲ್ಲೇ ಈ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ನೀಡದಿರುವುದು ಮತ್ತು ಹಿಂದಿನ ಪ್ರತಿಭಟನೆ ವೇಳೆ ಅಧಿಕಾರಿಗಳು ಹೊರಡಿಸಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿರುವ ಆರೋಪಗಳನ್ನು ಅನುಮತಿ ನಿರಾಕರಣೆಗೆ ಪೊಲೀಸರು ಕಾರಣವಾಗಿ ನೀಡಿದ್ದಾರೆ.
ಅನುಮತಿಯಿಲ್ಲದೆ ಪ್ರತಿಭಟನಾಕಾರರು ಜಂತರ್ ಮಂತರ್‌ನಲ್ಲಿ ಗುಂಪುಗೂಡುವುದನ್ನು ತಡೆಯಲು ಹಾಗೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ನಿಗಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ.
ಪರಿಸ್ಥಿತಿ ನಿರ್ವಹಣೆಗೆ ದೆಹಲಿ ಪೊಲೀಸರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 120ಕ್ಕೂ ಹೆಚ್ಚು ಕಂಪನಿಗಳು ನೆರವಾಗುವ ನಿರೀಕ್ಷೆಯಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭದ್ರತಾ ಸಿದ್ಧತೆ ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಪರಿಶೀಲಿಸಲು ನಗರದ ಹಲವು ಕಡೆ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಗಿದೆ.
ದೆಹಲಿ ಜಿಲ್ಲೆಯನ್ನು 20 ವಲಯಗಳಾಗಿ ವಿಂಗಡಿಸಲಾಗಿದ್ದು, ಜಂಟಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ವಿವಿಧ ಘಟಕಗಳ ಮುಖ್ಯಸ್ಥರಾಗಿರುವ ವಿಶೇಷ ಪೊಲೀಸ್ ಆಯುಕ್ತರೂ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಇಂದು ಪ್ರತಿಭಟನೆಗೆ ಅನುಮತಿ ಕೋರಿ ಮೊನ್ನೆ ಅಕ್ಟೋಬರ್ 7ರಂದು ಅರ್ಜಿ ಸಲ್ಲಿಸಲಾಗಿತ್ತು. ಪ್ರಸ್ತಾವಿತ ಪ್ರತಿಭಟನೆಗೆ ಕೇವಲ ಮೂರು ದಿನಗಳ ಮೊದಲು ಅರ್ಜಿ ಸಲ್ಲಿಸಲಾಗಿದ್ದು, ನಿಗದಿತ ನಿಯಮಗಳ ಪ್ರಕಾರ ಕನಿಷ್ಠ 10 ದಿನಗಳ ಮುಂಗಡ ನೋಟಿಸ್ ನೀಡಬೇಕಿತ್ತು ಎಂದು ಜಂಟಿ ಪೊಲೀಸ್ ಆಯುಕ್ತೆ ನೂಪುರ್ ಪ್ರಸಾದ್ ತಿಳಿಸಿದ್ದಾರೆ.
ಹಿಂದಿನ ಪ್ರತಿಭಟನೆ ಸಂದರ್ಭದಲ್ಲಿ ಅಧಿಕಾರಿಗಳು ಹೊರಡಿಸಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿರುವ ಆರೋಪಗಳನ್ನೂ ಪೊಲೀಸರು ಉಲ್ಲೇಖಿಸಿದ್ದಾರೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ ನಿನ್ನೆ ರಾತ್ರಿಯಿಂದಲೇ ದೆಹಲಿ ಮೆಟ್ರೋದ 45 ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ರಾಜೀವ್ ಚೌಕ್, ಕೇಂದ್ರ ಸಚಿವಾಲಯ, ನವದೆಹಲಿ, ಪಟೇಲ್ ಚೌಕ್, ಮಂಡಿ ಹೌಸ್, ಜನಪಥ್, ಸುಪ್ರೀಂ ಕೋರ್ಟ್, ಐಟಿಒ ಮತ್ತು ಕಾಶ್ಮೀರಿ ಗೇಟ್ ಸೇರಿದಂತೆ ದಕ್ಷಿಣ ಹಾಗೂ ಈಶಾನ್ಯ ದೆಹಲಿಯ ಹಲವು ನಿಲ್ದಾಣಗಳು ನಿರ್ಬಂಧಕ್ಕೆ ಒಳಪಟ್ಟಿವೆ.
ದೆಹಲಿ ಮೆಟ್ರೋ ರೈಲು ನಿಗಮದ (DMRC) ಪ್ರಕಾರ, ಮುಂದಿನ ಸೂಚನೆ ಹೊರಬೀಳುವವರೆಗೆ ಇಂದು ಕೂಡ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ. ದೆಹಲಿ ಮೆಟ್ರೋ ನಿಲ್ದಾಣವನ್ನು ಹೊರತುಪಡಿಸಿ, ನಿರ್ಬಂಧ ವಿಧಿಸಿರುವ ಇತರ ನಿಲ್ದಾಣಗಳಲ್ಲಿ ಮೆಟ್ರೋ ಬದಲಾವಣೆ (Interchange) ಸೌಲಭ್ಯ ಮುಂದುವರಿಯಲಿದೆ. ದೆಹಲಿ ನಿಲ್ದಾಣದಲ್ಲಿ ಮಾತ್ರ ಈ ಸೌಲಭ್ಯಕ್ಕೂ ನಿರ್ಬಂಧ ಅನ್ವಯಿಸಲಿದೆ.
ರೈಲು ಪ್ರಯಾಣಿಕರೂ ತೊಂದರೆ ಎದುರಿಸುವ ಸಾಧ್ಯತೆಯಿದೆ. ನಸುಕಿನ ಜಾವ 4ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಅಥವಾ ಅಲ್ಲಿಂದ ನಿರ್ಗಮಿಸಬೇಕಿದ್ದ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.
ರೈಲು ಟಿಕೆಟ್ ಹೊಂದಿರುವ ಪ್ರಯಾಣಿಕರು ಪ್ರಯಾಣಿಸುವುದನ್ನು ತಡೆಯುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ದೆಹಲಿ ಗಡಿಗಳಲ್ಲಿಯೂ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ನಗರ ಪ್ರವೇಶಿಸುವ ವಾಹನಗಳ ಮೇಲೆ ಹೆಚ್ಚುವರಿ ನಿಗಾ ಮತ್ತು ತಪಾಸಣೆ ನಡೆಸಲಾಗುತ್ತಿದೆ. ಹೊಟೇಲ್, ಅತಿಥಿಗೃಹಗಳು, ಲಾಡ್ಜ್ ಹಾಗೂ ಧರ್ಮಶಾಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಬಸ್ ಟರ್ಮಿನಲ್‌ಗಳು ಮತ್ತು ಇತರ ಸಾರಿಗೆ ಕೇಂದ್ರಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಸ್ತಾವಿತ ಪ್ರತಿಭಟನೆಗೆ ಜನರನ್ನು ಸಂಘಟಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಪ್ರಯತ್ನಗಳ ಮೇಲೂ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದ ಆನ್‌ಲೈನ್ ಪೋಸ್ಟ್‌ಗಳು ಮತ್ತು ಸಂದೇಶಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, 200ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳ ಚಟುವಟಿಕೆಗಳನ್ನೂ ಪರಿಶೀಲಿಸುತ್ತಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಇಂದು ದೆಹಲಿಯಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲಾಗುವುದು. ಶಾಂತಿ ಕಾಪಾಡುವಂತೆ ಮತ್ತು ಅಧಿಕಾರಿಗಳಿಗೆ ಸಹಕರಿಸುವಂತೆ ಧಾರ್ಮಿಕ ಸ್ಥಳಗಳ ಮೂಲಕವೂ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.
ಪ್ರತಿಭಟನೆ ಏಕೆ?
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ನಡೆದಿದೆ ಹಾಗೂ ಮತದಾರರ ನೋಂದಣಿಗೆ ಬಳಸುವ ಫಾರ್ಮ್-6ಗೆ ಸಂಬಂಧಿಸಿದಂತೆ ಬದಲಾವಣೆಗಳಾಗಿವೆ ಎಂಬ ಆರೋಪಗಳೇ ಈ ಪ್ರತಿಭಟನೆಯ ಪ್ರಮುಖ ವಿಷಯವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವ್ಯಾಪಕ ರಾಜಕೀಯ ವಿವಾದದ ಭಾಗವಾಗಿ ಈ ಆರೋಪಗಳು ಮುನ್ನೆಲೆಗೆ ಬಂದಿವೆ.
ನಗರದ ಪ್ರಮುಖ ಸಾರಿಗೆ ಕೇಂದ್ರಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿರ್ಬಂಧಗಳು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರು ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಜನರ ಚಲನವಲನದ ಮೇಲೆ ನಿಗಾ ಇರಿಸಲು, ಸಂಚಾರಕ್ಕೆ ಅಡ್ಡಿಯಾಗುವುದನ್ನು ತಡೆಯಲು ಹಾಗೂ ಬ್ಯಾರಿಕೇಡ್‌ಗಳನ್ನು ದಾಟಲು ನಡೆಸುವ ಪ್ರಯತ್ನಗಳಿಗೆ ಪ್ರತಿಕ್ರಿಯಿಸಲು ಇಂದು ಭದ್ರತಾ ಸಿಬ್ಬಂದಿ ನಿಯೋಜನೆಯಲ್ಲಿ ಇರಲಿದ್ದಾರೆ.




