ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? ಹೂತಿದ್ದ ಶವ ಹೊರತೆಗೆದ ಉರ್ವಾ ಠಾಣೆ ಪೊಲೀಸರು
ಮಂಗಳೂರಿನಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿಗಾಗಿ ಸ್ವಂತ ತಂದೆ ಆಲ್ಬರ್ಟ್ ರೇಗೋ ಹತ್ಯೆ ಮಾಡಿದ ಶಂಕೆ ವ್ಯಕ್ತವಾಗಿದೆ. ಮಗಳು ಮಾಯಾ ರೇಗೋ ಬಾಯ್‌ಫ್ರೆಂಡ್ ಜೊತೆ ಸೇರಿ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಮರಣೋತ್ತರ ಪರೀಕ...


ಮಂಗಳೂರು, ಅ.9: ಕೋಟಿ ಕೋಟಿ ಮೌಲ್ಯದ ಆಸ್ತಿಗಾಗಿ ಸ್ವಂತ ತಂದೆಯನ್ನೇ ಮಗಳು ಬಾಯ್‌ಫ್ರೆಂಡ್ ಜೊತೆ ಸೇರಿ ದಾರುಣವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಶವ ದಫನ ಮಾಡಿದ ಬರೋಬ್ಬರಿ ಎರಡು ತಿಂಗಳ ಬಳಿಕ ಸಮಾಧಿಯಿಂದ ಶವವನ್ನು ಹೊರತೆಗೆದು ಪೊಲೀಸರು ಎಫ್‌ಎಸ್‌ಎಲ್ (FSL) ತನಿಖೆಗೆ ಮುಂದಾಗಿರುವ ಬೆಚ್ಚಿಬೀಳಿಸುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಎಂಬವರೇ ನಿಗೂಢವಾಗಿ ಸಾವನ್ನಪ್ಪಿದ ವ್ಯಕ್ತಿ.
ಕಳೆದ ಜುಲೈ 19 ರಂದು ಆಲ್ಬರ್ಟ್ ರೇಗೋ ಅವರು ಸಾವನ್ನಪ್ಪಿದ್ದರು. ಆದರೆ, ಅವರ ಮಗಳು ಮಾಯಾ ರೇಗೋ, ತಂದೆ ಮೃತಪಟ್ಟರೂ ಸಹ ಅಕ್ಕಪಕ್ಕದ ಮನೆಯವರಿಗೆ ಅಥವಾ ದೂರದ ಸಂಬಂಧಿಕರಿಗಾಗಲಿ ಯಾವುದೇ ಮಾಹಿತಿ ನೀಡದೆ, ಮಂಗಳೂರಿನ ದೇರೆಬೈಲ್ ಚರ್ಚ್‌ನ ದಫನ ಭೂಮಿಯಲ್ಲಿ ಸದ್ದಿಲ್ಲದೆ ಶವವನ್ನು ಹೂತುಹಾಕಿದ್ದಳು. ತಂದೆಯೊಂದಿಗೆಯೇ ಜೀವನ ನಡೆಸುತ್ತಿದ್ದ ಮಾಯಾಳ ಈ ಸಂಶಯಾಸ್ಪದ ಹಾಗೂ ರಹಸ್ಯ ನಡವಳಿಕೆಯು ಆಲ್ಬರ್ಟ್ ಅವರ ಆಪ್ತ ಸ್ನೇಹಿತರಲ್ಲಿ ತೀವ್ರ ಅನುಮಾನ ಮೂಡಿಸಿತ್ತು.
ಮೃತ ಆಲ್ಬರ್ಟ್ ರೇಗೋ ಅವರಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಇವರಲ್ಲಿ ಇಬ್ಬರು ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ. ಆಲ್ಬರ್ಟ್ ತಮ್ಮ ಮಕ್ಕಳಿಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮಾಡಿದ್ದರು. ಆದರೆ, ಮಗಳು ಮಾಯಾ ರೇಗೋ ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿಕೊಂಡು, ಸಾವಿಗೂ ಮುನ್ನ ತಂದೆಯಿಂದ ಒತ್ತಾಯಪೂರ್ವಕವಾಗಿ ಆಸ್ತಿಯ ವಿಲ್ ಬರೆಸಿಕೊಂಡಿದ್ದಳು ಎನ್ನಲಾಗಿದೆ. ತದನಂತರ ತಂದೆಯನ್ನು ಕೊಲೆ ಮಾಡಿ, ಪ್ರಕರಣವನ್ನು ಮುಚ್ಚಿಹಾಕಲು ಕೆಲವು ಪೊಲೀಸರ ಸಾಥ್ ಪಡೆದಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆಲ್ಬರ್ಟ್ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ ಅವರ ಆಪ್ತ ಸ್ನೇಹಿತರು ತಕ್ಷಣವೇ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮಾಯಾ ರೇಗೋ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರುತನಿಖೆ ಆರಂಭಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹೊರತರಲು, ತಹಸೀಲ್ದಾರ್ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ಸಮ್ಮುಖದಲ್ಲಿ ದೇರೆಬೈಲ್ ಚರ್ಚ್‌ನ ದಫನ ಭೂಮಿಯಿಂದ ಆಲ್ಬರ್ಟ್ ರೇಗೋ ಅವರ ಶವವನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಬಂದ ನಂತರವೇ ಸಾವಿನ ಅಸಲಿ ಕಾರಣ ಬಯಲಾಗಲಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
70-80 ಕೋಟಿ ಆಸ್ತಿಗಾಗಿ ತಂದೆಯನ್ನೇ ಕೊಂದಳು, ಪೊಲೀಸ್ ಅಧಿಕಾರಿ ಸಾಥ್: ಅಜೋಯ್
ಮೃತ ಆಲ್ಬರ್ಟ್ ರೇಗೋ ಅವರ ಆಪ್ತ ಸ್ನೇಹಿತ ಅಜೋಯ್ ಅವರು ಟಿವಿ9ಗೆ ನೀಡಿರುವ ಹೇಳಿಕೆ ಪ್ರಕಾರ, ಆಲ್ಬರ್ಟ್ ರೇಗೋ ಅವರಿಗೆ ಬರೋಬ್ಬರಿ 70 ರಿಂದ 80 ಕೋಟಿ ರೂ. ಮೌಲ್ಯದ ಆಸ್ತಿಯಿದ್ದು, ಅದನ್ನು ತನ್ನ ಹೆಸರಿಗೆ ಬರೆಸಿಕೊಂಡು ಮಗಳು ಮಾಯಾ ರೇಗೋ ಹತ್ಯೆ ಮಾಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಪೋಲಿಸ್ ಅಧಿಕಾರಿಯೊಬ್ಬರ ಹೆಸರು ಕೂಡ ಕೇಳಿಬಂದಿದ್ದು, ಕರಾವಳಿಯಲ್ಲಿ ಭಾರಿ ಸಂಚಲನ ಮೂಡಿಸಿದೆ. “ಆಲ್ಬರ್ಟ್ ರೇಗೋ ಅವರಿಗೆ ಸುಮಾರು 70 ರಿಂದ 80 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇತ್ತು. ಆ ಆಸ್ತಿಯ ಹೆಚ್ಚಿನ ಪಾಲನ್ನು ಬಲವಂತವಾಗಿ ತನ್ನ ಹೆಸರಿಗೆ ಮಾಡಿಸಿಕೊಂಡು, ಮಗಳು ಮಾಯಾ ರೇಗೋ ತಂದೆಯನ್ನು ಕೊಂದಿದ್ದಾಳೆ ಎಂದು ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಈ ಬಗ್ಗೆ ನಿಷ್ಪಕ್ಷಪಾತ ಹಾಗೂ ಸರಿಯಾದ ತನಿಖೆಯಾಗಬೇಕು” ಎಂದು ಅಜೋಯ್ ಆಗ್ರಹಿಸಿದ್ದಾರೆ.
ಖಾಕಿ ಸಾಥ್ – ಪೊಲೀಸ್ ಅಧಿಕಾರಿ ಭಾಗಿ?:
ಕೊಲೆ ಪ್ರಕರಣದಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯ ಹಸ್ತಕ್ಷೇಪವೂ ಇದೆ ಎಂದು ಸ್ನೇಹಿತ ಅಜೋಯ್ ಆರೋಪಿಸಿದ್ದಾರೆ. “ಪೊಲೀಸ್ ಒಬ್ಬರ ಜೊತೆ ಮಾಯಾ ರೇಗೋ ನಿಕಟ ಸಂಪರ್ಕ ಹೊಂದಿದ್ದಳು. ಆ ಪೊಲೀಸ್ ಸಿಬ್ಬಂದಿ ಕೂಡ ಈ ಕೊಲೆಯನ್ನು ಮುಚ್ಚಿಹಾಕಲು ಮತ್ತು ಹತ್ಯೆ ಮಾಡಲು ಸಹಾಯ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಆಲ್ಬರ್ಟ್ ರೇಗೋ ಮೃತಪಟ್ಟ ವೇಳೆ ಮನೆಗೆ ಅತ್ಯಂತ ಸಮೀಪದಲ್ಲೇ ಪ್ರಸಿದ್ಧ ಎ.ಜೆ. ಆಸ್ಪತ್ರೆ ಇತ್ತು. ಆದರೆ, ಅಲ್ಲಿಗೆ ಕರೆದೊಯ್ಯದೆ ದೂರದಲ್ಲಿರುವ ಬೋಂದೇಲ್‌ನ ಆಸ್ಪತ್ರೆಗೆ ಕರೆದೊಯ್ದು ಡೆತ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಇದು ಕೊಲೆಯ ಸಂಚಿಗೆ ಸಾಕ್ಷಿಯಾಗಿದೆ ಎಂದು ಅಜೋಯ್ ಶಂಕೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




