ಏಯ್, ನಾನು PSI ಕಣೋ; ಚಿನ್ನ, ಹಣ ದೋಚಿ ಲವರ್‌ಗೆ ನೀಡ್ತಿದ್ದ ನಿವೇದಿತಾ ಗೌಡ ಅರೆಸ್ಟ್
ಚಿಕ್ಕಮಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ನಂಬಿಸಿ 25ಕ್ಕೂ ಹೆಚ್ಚು ಜನರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ನಿವೇದಿತಾ ಗೌಡಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ವಂಚಿಸಿದ ಹಣ ಮತ್ತು ಚ...

ಚಿಕ್ಕಮಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ನಂಬಿಸಿ 25ಕ್ಕೂ ಹೆಚ್ಚು ಜನರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ನಿವೇದಿತಾ ಗೌಡಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ವಂಚಿಸಿದ ಹಣ ಮತ್ತು ಚಿನ್ನವನ್ನು ತನ್ನ ಪ್ರಿಯಕರನಿಗೆ ನೀಡುತ್ತಿದ್ದಳು.
ಚಿಕ್ಕಮಗಳೂರಿನಲ್ಲಿ ತಾನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಎಂದು ನಂಬಿಸಿ ಕೋಟ್ಯಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ವಂಚಿಸುತ್ತಿದ್ದ ಖತರ್ನಾಕ್ ನಕಲಿ ಲೇಡಿ ಪಿಎಸ್‌ಐ ನಿವೇದಿತಾ ಗೌಡಳನ್ನು ಕೊನೆಗೂ ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ರಾಮನಗರ ಜಿಲ್ಲೆಯವಳಾದ ಈಕೆ ಚಿಕ್ಕಮಗಳೂರು ನಗರದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದು, ಕೆಫೆಗೆ ಬರುವ ಯುವಕರು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದಳು. ಗ್ರಾಹಕರನ್ನು ತಾನೋರ್ವ ಪೊಲೀಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ತನ್ನ ಮೋಸದ ಜಾಲ ಬೀಸುತ್ತಿದ್ದಳು ಎಂದು ತಿಳಿದು ಬಂದಿದೆ.
ತಾನು ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪಿಎಸ್‌ಐ, ಪ್ರಸ್ತುತ ರಜೆಯಲ್ಲಿದ್ದೇನೆ ಎಂದು ನಂಬಿಸಲು ಪೊಲೀಸರಂತೆಯೇ ಕಟ್ಟಿಂಗ್ ಮಾಡಿಸಿಕೊಂಡು ವೇಷ ಧರಿಸುತ್ತಿದ್ದಳು. ಪರಿಚಯವಾದವರ ಐಷಾರಾಮಿ ಕಾರುಗಳನ್ನು ಓಡಾಟಕ್ಕಾಗಿ ಪಡೆದು ಮತ್ತೊಬ್ಬರಿಗೆ ಮಾರಾಟ ಮಾಡುವುದು ಸೇರಿದಂತೆ ಹಲವು ಜಿಲ್ಲೆಗಳಲ್ಲಿ 25ಕ್ಕೂ ಅಧಿಕ ಜನರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ವಂಚನೆಗೊಳಗಾದ 20ಕ್ಕೂ ಹೆಚ್ಚು ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಬಸವನಹಳ್ಳಿ ಹಾಗೂ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಪೊಲೀಸರ ವಿಚಾರಣೆ ವೇಳೆ, ತಾನು ವಂಚಿಸಿದ ಹಣ ಮತ್ತು ಚಿನ್ನವನ್ನು ಪ್ರಿಯಕರ ದೇವುಗೆ ನೀಡಿರುವುದಾಗಿ ನಿವೇದಿತಾ ತಪ್ಪೊಪ್ಪಿಕೊಂಡಿದ್ದಾಳೆ.
ಇಷ್ಟು ಮಾತ್ರವಲ್ಲ ನಿವೇದಿತಾ ಗೌಡಳ ಮೊಬೈಲ್‌ನಲ್ಲಿ ಬೇರೆ ಬೇರೆ ಹೆಸರುಗಳಿರುವ ನಕಲಿ ಆಧಾರ್ ಕಾರ್ಡ್‌ಗಳು ಸಹ ಪತ್ತೆಯಾಗಿವೆ. ಪ್ರಸ್ತುತ ನಕಲಿ ಪಿಎಸ್‌ಐ ನಿವೇದಿತಾಳನ್ನು ಬಂಧಿಸಿರುವ ಪೊಲೀಸರು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರ ದೇವುಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.




