ಸಚಿನ ಹೆಸರು ಬಿಟ್ಟು ಮುಂದೆ ನಡೆದ ಸಾರಾ; ಯಶಸ್ವಿ ಉದ್ಯಮಿ ಹಾದಿಯಲ್ಲಿ ತೆಂಡಲ್ಕೂರ್ ಪುತ್ರಿ!
ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತಮ್ಮ ತಂದೆಯ ಖ್ಯಾತಿಯನ್ನು ಬಳಸಿಕೊಳ್ಳದೆ ಸ್ವಂತವಾಗಿ ಯಶಸ್ವಿ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ. ಅವರು ಪ್ರಮುಖ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದು, ಮುಂಬೈನಲ್ಲಿ ಪೈಲೇಟ್ಸ್ ಅ...

ಒಂದು ಕಾಲದಲ್ಲಿ ನಾನು ನಿನಗೆ ಮಾರ್ಗದರ್ಶನ ನೀಡುತ್ತಿದ್ದೆ. ಇದೀಗ, ನಿನ್ನ ದಾರಿಯನ್ನು ನೀನೇ ಕಂಡುಕೊಂಡಿರುವುದನ್ನು ನೋಡಿ ನನಗೆ ಅತೀವ ಸಂತೋಷವಾಗಿದೆ ಎಂದು ಸಚಿನ್ ತೆಂಡೂಲ್ಕರ್ ಸೋಮವಾರ ತಮ್ಮ ಮಗಳು ಸಾರಾ ಅವರ 29 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಎಕ್ಸ್ ನಲ್ಲಿ ಶುಭ ಹಾರೈಸಿದ್ದಾರೆ. ಸಚಿನ ಹೆಸರಿನ ಪ್ರಭಾವವನ್ನು ಬಳಸಿಕೊಳ್ಳುವ ಬದಲು, ಸಾರಾ ಅವರು ಹೇಗೆ ಹಂತ ಹಂತವಾಗಿ ಸ್ವಂತಿಕೆಯ ಗುರುತನ್ನು ಬೆಳೆಸಿಕೊಂಡಿದ್ದಾರೆ ಎಂಬುದನ್ನು ಅವರ ಈ ಪೋಸ್ಟ್ ಎತ್ತಿ ತೋರಿಸುವಂತಿತ್ತು.
ಉದ್ಯಮಿಯಾಗಿ ರೂಪಗೊಳ್ಳುತ್ತಿರುವ ಸಾರಾ!
ಸಾರಾ ಇನ್ಸ್ಟಾದಲ್ಲಿ 9.8 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದು, ಇದು ಪ್ರಮುಖ ಬ್ರ್ಯಾಂಡ್ ಪ್ರಚಾರ ಮತ್ತು ಸಹಯೋಗಗಳಿಗೆ ದಾರಿ ಮಾಡಿಕೊಟ್ಟಿದೆ. ಬಯೋಮೆಡಿಕಲ್ ವಿಜ್ಞಾನಿಯಾಗಿರುವ ಸಾರಾ ಒಬ್ಬ ಉದ್ಯಮಿಯೂ ಆಗಿದ್ದಾರೆ. ನಾನು ಸ್ವಂತವಾಗಿ ವ್ಯವಹಾರವನ್ನು ಆರಂಭಿಸಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದೇನೆ ಎಂದು ಸಾರಾ ಈ ವರ್ಷದ ಆರಂಭದಲ್ಲಿ ಎಂಟ್ರಪ್ರೆನ್ಯೂರ್ ಇಂಡಿಯಾಕ್ಕೆ ತಿಳಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿದ ಪ್ರಭಾವ!
ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶಿಸುವ ಮುನ್ನ, ಸಾರಾ ಅವರ ವಾಣಿಜ್ಯ ಮೌಲ್ಯವು ಹೆಚ್ಚಾಗಿ ಸಾಮಾಜಿಕ ಮಾಧ್ಯಮದ ಪ್ರಭಾವದಿಂದಲೇ ವೃದ್ಧಿಯಾಗಿತ್ತು. ಮೇ 2024 ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವಂತೆ, ಜನಪ್ರಿಯ ಕೊರಿಯನ್ ಬ್ಯುಟಿ ಬ್ರ್ಯಾಂಡ್ ಲನೀಜ್, ಅವರನ್ನು ಭಾರತದ ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿದೆ. PNG ಜ್ಯುವೆಲ್ಲರ್ಸ್‌ನ ಲೈಫ್‌ಸ್ಟೈಲ್ ಬ್ರ್ಯಾಂಡ್ ಆದ PNG ನಿಂದ ಲೈಫ್‌ಸ್ಟೈಲ್ ಕೂಡ ಡಿಸೆಂಬರ್ 2025 ರಲ್ಲಿ ಅವರನ್ನು ತನ್ನ ಬ್ರಾಂಡ್ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ಸೆಟಾಫಿಲ್, ಫರ್ನ್ಸ್ ಎನ್ ಪೆಟಲ್ಸ್, ILEM ಜಪಾನ್ ಸೇರಿದಂತೆ ಇತರೆ ಹಲವು ಬ್ರ್ಯಾಂಡ್‌ಗಳು ಅವರೊಂದಿಗೆ ಕೈಜೋಡಿಸಿದ್ದು, ಫ್ಯಾಷನ್, ಬ್ಯುಟಿ ಮತ್ತು ಲೈಪಸ್ಟೈಲ್ ಮಾರುಕಟ್ಟೆಯಲ್ಲಿ ಅವರಿಗಿರುವ ಬೇಡಿಕೆಯನ್ನು ಇದು ಸಾಬೀತುಪಡಿಸುತ್ತದೆ.
ವ್ಯಾಪಾರ ಮಾಲೀಕತ್ವ!
ಆಗಸ್ಟ್ 2025 ರಲ್ಲಿ, ಸಾರಾ ಮುಂಬೈನ ಅಂಧೇರಿಯಲ್ಲಿ ಪೈಲೇಟ್ಸ್ ಅಕಾಡೆಮಿಯನ್ನು ಆರಂಭಿಸಿದರು, ಇದು ಅವರ ಮೊದಲ ವಾಣಿಜ್ಯ ಉದ್ಯಮವಾಗಿದೆ. ಕಾಲೇಜು ಶಿಕ್ಷಣದ ನಂತರ 9ರಿಂದ5 ರವರೆಗಿನ ಕೆಲಸವನ್ನು ನಿರ್ವಹಿಸಿದೆ. ಆ ಅನುಭವವು ನನಗೆ ಕೆಲಸದ ರಚನೆ ಮತ್ತು ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು. ಹೀಗಾಗಿ ಉದ್ಯಮಶೀಲತೆಯೇ ನಾನು ಮುಂದುವರಿಸಲು ಬಯಸುವ ಕ್ಷೇತ್ರ ಎಂದು ನನಗೆ ಅರಿವಾಯಿತು ಎಂದು ಎಂಟ್ರಪ್ರೆನ್ಯೂರ್ ಇಂಡಿಯಾಗೆ ಅವರು ವಿವರಿಸಿದ್ದಾರೆ. ಸಾರಾ ಅವರ ಈ ಪಯಣ ಕ್ರಿಕೆಟ್ ದೇವರು ಸಚಿನ ಹೆಸರಿನ ಗಡಿಗಳನ್ನು ಮೀರಿ ಸದ್ದು ಮಾಡುತ್ತಿದೆ.




