Lionel Messi: 21 ವರ್ಷಗಳ ನಂತರ ತವರಿನಲ್ಲಿ ಕಣ್ಣೀರಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ; ಹೇಗಿತ್ತು ಆ ಅಂತಿಮ ಪಂದ್ಯದ ದೃಶ್ಯ; Video
ಬ್ಯೂನಸ್ ಐರಿಸ್: ಅರ್ಜೆಂಟೀನಾ ತಂಡದೊಂದಿಗಿನ ತಮ್ಮ ಅಧಿಕೃತ ವಿದಾಯವನ್ನು ಲಿಯೋನೆಲ್ ಮೆಸ್ಸಿ ಸ್ಮರಣೀಯ ಪ್ರದರ್ಶನವನ್ನಾಗಿಸಿದ್ದಾರೆ. ನಿನ್ನೆ ಮಂಗಳವಾರ ಬ್ಯೂನಸ್ ಐರಿಸ್‌ನ ಸ್ಮಾರಕ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀ...

ಬ್ಯೂನಸ್ ಐರಿಸ್: ಅರ್ಜೆಂಟೀನಾ ತಂಡದ ಪರವಾಗಿ ಲಿಯೋನೆಲ್ ಮೆಸ್ಸಿ ತಮ್ಮ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನು ಅತ್ಯಂತ ಸ್ಮರಣೀಯವಾಗಿ ಆಡಿದ್ದಾರೆ. ಮಂಗಳವಾರ ಬ್ಯೂನಸ್ ಐರಿಸ್‌ನ ಸ್ಮಾರಕ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ನೇಹಪೂರ್ವಕ ಪಂದ್ಯದಲ್ಲಿ ಬೆನಿನ್ ವಿರುದ್ಧ ಅರ್ಜೆಂಟೀನಾ 3-0 ಅಂತರದಲ್ಲಿ ಜಯಭೇರಿ ಬಾರಿಸಿತು.
ಈ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ತಾವೇ ಒಂದು ಪೆನಾಲ್ಟಿ ಗೋಲು ಬಾರಿಸುವುದರ ಜೊತೆಗೆ, ತಂಡದ ಎರಡು ಗೋಲುಗಳಿಗೆ ನೆರವಾದರು. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಅರ್ಜೆಂಟೀನಾ ಫುಟ್‌ಬಾಲ್‌ನಲ್ಲಿ ಅಜೇಯ ಆಟಗಾರನಾಗಿ ಮೆರೆದ ಈ ದಿಗ್ಗಜನಿಗೆ, ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಭಾವುಕವಾಗಿ ಅಂತಿಮ ವಿದಾಯದ ಗೌರವ ಸಲ್ಲಿಸಿದರು.
ಒಟ್ಟು 85,000 ಮಂದಿ ಪ್ರೇಕ್ಷಕರ ಸಮ್ಮುಖದಲ್ಲಿ ಲಿಯೋನೆಲ್ ಮೆಸ್ಸಿ ತಮ್ಮ 21 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದರು. ತಮ್ಮ ಈ ಸುದೀರ್ಘ ಪಯಣದಲ್ಲಿ ಅವರು 126 ಗೋಲುಗಳನ್ನು ಸಿಡಿಸಿದ್ದು, ಅರ್ಜೆಂಟೀನಾ ಪರವಾಗಿ 2022ರ ವಿಶ್ವಕಪ್ ಗೆಲುವು ಮತ್ತು ಎರಡು ಕೋಪಾ ಅಮೆರಿಕಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ
ಗೆಲುವನ್ನು ಮುನ್ನಡೆಸಿದ ಮೆಸ್ಸಿ
ಪಂದ್ಯದ 48ನೇ ನಿಮಿಷದಲ್ಲಿ ಮೆಸ್ಸಿ ನೀಡಿದ ಕಾರ್ನರ್ ಕಿಕ್‌ನ ಲಾಭ ಪಡೆದ ಅರ್ಜೆಂಟೀನಾ ಡಿಫೆಂಡರ್ ನಿಕೊಲಾಸ್ ಒಟಮೆಂಡಿ ಚೆಂಡನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ನಂತರ 61ನೇ ನಿಮಿಷದಲ್ಲಿ, ಮೆಸ್ಸಿ ಯುವ ಆಟಗಾರ ನಿಕೊಲಾಸ್ ಪಾಝ್‌ಗೆ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟರು. ಪಾಝ್ ಎಡಗಾಲಿನಿಂದ ಅದ್ಭುತವಾಗಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿ ಮೆಸ್ಸಿಗೆ ಗೌರವ ಸೂಚಿಸಿದರು.
ಹತ್ತು ನಿಮಿಷಗಳ ನಂತರ, ಲಿಯೋನೆಲ್ ಮೆಸ್ಸಿ ತಮ್ಮ ಎಡಗಾಲಿನಿಂದ ಪೆನಾಲ್ಟಿ ಕಿಕ್ ಹೊಡೆದು ಚೆಂಡನ್ನು ಗೋಲುಪೆಟ್ಟಿಗೆಯ ಮೇಲ್ಭಾಗದ ಮೂಲೆಗೆ ತಲುಪಿಸಿದರು. ಇದರೊಂದಿಗೆ, ಅರ್ಜೆಂಟೀನಾ ಪರ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರನಾಗಿ ತಮ್ಮ ದಾಖಲೆಯನ್ನು ಅವರು ಮತ್ತಷ್ಟು ವಿಸ್ತರಿಸಿದರು.
ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ಗೌರವ ಸಲ್ಲಿಸಲು “ಒಲೆ, ಒಲೆ, ಮೆಸ್ಸಿ” ಎಂದು ಘೋಷಣೆ ಕೂಗುತ್ತಿದ್ದರು.
'ಅರ್ಜೆಂಟೀನಾಕ್ಕೆ ಲಿಯೋನೆಲ್ ಮೆಸ್ಸಿ ಹೇಗೋ, ಭಾರತಕ್ಕೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಹಾಗೆ': ಮೊಹಮ್ಮದ್ ಕೈಫ್
ಉತ್ತರಾಧಿಕಾರಿಗೆ ದಾರಿ ಮಾಡಿಕೊಟ್ಟ ಮೆಸ್ಸಿ, ಸ್ಮರಣೀಯ ವಿದಾಯ
39ರ ಹರೆಯದಲ್ಲೂ ಅತ್ಯುತ್ತಮ ಫಾರ್ಮ್‌ನಲ್ಲಿರುವ ಲಿಯೋನೆಲ್ ಮೆಸ್ಸಿ, ಆಗಸ್ಟ್ 31ರಂದು ತಾವು ಅರ್ಜೆಂಟೀನಾ ತಂಡದೊಂದಿಗಿನ ಪಯಣವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದರು.
ಅರ್ಜೆಂಟೀನಾ ಪರ ತಮ್ಮ 208ನೇ ಹಾಗೂ ಕೊನೆಯ ಪಂದ್ಯವನ್ನು ಮೆಸ್ಸಿ ಅದ್ಧೂರಿ ಪಟಾಕಿಗಳ ಸದ್ದು ಮತ್ತು ಬೆಳಕಿನ ನಡುವೆ ಆಡಿದರು. ಈ ಪಂದ್ಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಅರ್ಜೆಂಟೀನಾ ಜೆರ್ಸಿಯನ್ನು ಅವರು ಧರಿಸಿದ್ದರು. ಈ ಜೆರ್ಸಿಯಲ್ಲಿ ಸಾಮಾನ್ಯಕ್ಕಿಂತ ಅಗಲವಾದ ಲಂಬ ಪಟ್ಟೆಗಳು, ದೊಡ್ಡ ಸೂರ್ಯನ ಚಿಹ್ನೆ ಮತ್ತು ಬೆನ್ನಿನ ಭಾಗದಲ್ಲಿ ಚಿನ್ನದ ಬಣ್ಣದ 10ನೇ ಸಂಖ್ಯೆ ಎದ್ದು ಕಾಣುತ್ತಿತ್ತು.
ಜೆರ್ಸಿಯ ಹಿಂಭಾಗದ ವಿನ್ಯಾಸದಲ್ಲಿ ಮೇಕೆಯ ಕೊಂಬುಗಳ ಚಿತ್ರವಿತ್ತು. ಇದು ‘GOAT’ ಪದಕ್ಕೆ ಸಂಕೇತವಾಗಿದ್ದು, ಮೇಕೆ ಹಾಗೂ ‘ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂಬ ಲಿಯೋನೆಲ್ ಮೆಸ್ಸಿಯ ಸ್ಥಾನಮಾನವನ್ನು ಬಿಂಬಿಸುತ್ತಿತ್ತು.
ಪಂದ್ಯ ಆರಂಭವಾದ 10 ನಿಮಿಷಗಳಲ್ಲಿ ರೆಫರಿ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅರ್ಜೆಂಟೀನಾ ನಾಯಕನಿಗೆ ಗೌರವ ಸಲ್ಲಿಸಿದರು. ಎದುರಾಳಿ ಮತ್ತು ಸ್ವಂತ ತಂಡದ ಆಟಗಾರರು ಮೆಸ್ಸಿಯ ಬಳಿ ಬಂದು ಅಭಿನಂದಿಸಿದರು. ಅಭಿಮಾನಿಗಳು ಎದ್ದು ನಿಂತು ಗೌರವ ಸೂಚಿಸಿದಾಗ, ಲಿಯೋನೆಲ್ ಮೆಸ್ಸಿ ಕೈಬೀಸುವ ಮೂಲಕ ಪ್ರತಿಕ್ರಿಯಿಸಿದರು.
ನೋವಿನಿಂದ ವಿಶ್ವಕಪ್ ವೈಭವದವರೆಗೆ ಮೆಸ್ಸಿ ಪಯಣ
ದಿಗ್ಗಜ ಡಿಯಾಗೊ ಮರಡೋನಾರ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡ ಲಿಯೋನೆಲ್ ಮೆಸ್ಸಿ 2005ರಲ್ಲಿ ಅರ್ಜೆಂಟೀನಾ ಹಿರಿಯರ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. 2022ರವರೆಗೆ ಅವರ ವೃತ್ತಿಜೀವನವು ನಿರಾಸೆ ಮತ್ತು ನೋವಿನ ಸೋಲುಗಳಿಂದ ತುಂಬಿತ್ತು. ಅಂತಿಮವಾಗಿ 2022ರಲ್ಲಿ ಅವರು ವಿಶ್ವಕಪ್ ಗೆದ್ದು ಸಂಭ್ರಮಿಸಿದರು. ಈ ಸಾಧನೆಯು ಫುಟ್‌ಬಾಲ್‌ನ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಅವರ ಸ್ಥಾನವನ್ನು ಭದ್ರಗೊಳಿಸಿತು ಮತ್ತು ಅರ್ಜೆಂಟೀನಾದ ರಾಷ್ಟ್ರೀಯ ಹೀರೋ ಆಗಿ ಅವರನ್ನು ಸ್ಥಾಪಿಸಿತು.
ತಮ್ಮ ಮಕ್ಕಳಾದ ಥಿಯಾಗೊ, ಮಾಟಿಯೊ ಮತ್ತು ಸಿರೊ ಅವರೊಂದಿಗೆ ಮೈದಾನಕ್ಕೆ ಬಂದಿದ್ದ ಲಿಯೋನೆಲ್ ಮೆಸ್ಸಿ, 1982ರ ಫಾಕ್‌ಲ್ಯಾಂಡ್ಸ್ ಯುದ್ಧದ ಹಿರಿಯ ಯೋಧರೊಬ್ಬರು ಹಾಡಿದ ಅರ್ಜೆಂಟೀನಾ ರಾಷ್ಟ್ರೀಯ ಗೀತೆಯ ವೇಳೆ ಭಾವುಕರಾದರು. ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರು ಮೆಸ್ಸಿಯ ಭುಜದ ಮೇಲೆ ಕೈಯಿಟ್ಟು ಸಾಂತ್ವನ ಹೇಳಿದರು.
ಅಭಿಮಾನಿಗಳ ಅಪಾರ ಪ್ರೀತಿ, ಭಾವುಕ ಗೌರವ
ರೆಬೆಕಾ ಏರಿಯಾಸ್ ಮತ್ತು ಡೇನಿಯಲ್ ಲೆಮಾ ಎಂಬ ಜೋಡಿ, ಮೆಸ್ಸಿಗಾಗಿ ವಿಶೇಷ ಟೋಪಿಯನ್ನು ಸಿದ್ಧಪಡಿಸಿ ಅದರಲ್ಲಿ “ಇದು ವಿದಾಯವಲ್ಲ, ಇದು ‘ಶಾಶ್ವತ ವಿದಾಯ’, ನಾಯಕ” ಎಂದು ಬರೆಸಿದ್ದರು. ಟೋಪಿಯ ಅಂಚಿನಲ್ಲಿ ಮೆಸ್ಸಿ ಭಾಗವಹಿಸಿದ್ದ ಆರು ವಿಶ್ವಕಪ್‌ಗಳಿಗೆ ಸಂಬಂಧಿಸಿದ ಚಿತ್ರಗಳಿದ್ದವು. ಈ ಜೋಡಿ ತಮ್ಮ ತವರು ಟುಕುಮಾನ್‌ನಿಂದ 1,000 ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ಪ್ರಯಾಣಿಸಿ ತಮ್ಮ ನೆಚ್ಚಿನ ಆಟಗಾರನ ಅಂತಿಮ ಪಂದ್ಯವನ್ನು ವೀಕ್ಷಿಸಲು ಬಂದಿದ್ದರು.
ಇದು ಅತ್ಯಂತ ಅಪರೂಪದ ಕ್ಷಣ. ಇಷ್ಟು ದೂರ ಪ್ರಯಾಣಿಸಿ ಇಲ್ಲಿಗೆ ಬಂದಿರುವುದು ಸಾರ್ಥಕವಾಯಿತು. ಇಂತಹ ಕ್ಷಣ ಮತ್ತೊಬ್ಬ ಆಟಗಾರನೊಂದಿಗೆ ಮರುಕಳಿಸುವುದು ಕಷ್ಟ ಎಂದು ಏರಿಯಾಸ್ ಅಭಿಪ್ರಾಯಪಟ್ಟರು.
ಕಳೆದ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ ಮತ್ತೊಂದು ಪ್ರಶಸ್ತಿಗೆ ಹತ್ತಿರವಾಗಿದ್ದರು, ಆದರೆ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ 1-0 ಗೋಲುಗಳಿಂದ ಸೋತು ಪ್ರಶಸ್ತಿಯಿಂದ ವಂಚಿತರಾದರು. ಆದರೂ, ಪಂದ್ಯಾವಳಿಯಲ್ಲಿ ಅವರ ಅದ್ಭುತ ಪ್ರದರ್ಶನಕ್ಕೆ ಈ ಸೋಲು ಯಾವುದೇ ಮಸಿ ಬಳಿಯಲಿಲ್ಲ. ಅವರು ಎಂಟು ಗೋಲುಗಳನ್ನು ಬಾರಿಸಿ ನಾಲ್ಕು ಗೋಲುಗಳಿಗೆ ನೆರವಾಗಿದ್ದರು.
ಮೆಸ್ಸಿಯ ಕೊಡುಗೆ ಎಷ್ಟು ಮಹತ್ವದ್ದೆಂದರೆ, ಅವರು ಮತ್ತೊಮ್ಮೆ ಬ್ಯಾಲನ್ ಡಿ'ಓರ್ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ. ತದನಂತರ ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿಗಳಾಗಿರುವ ಸ್ಪೇನ್‌ನ ಲಮಿನ್ ಯಮಾಲ್ ಮತ್ತು ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಅವರೊಂದಿಗೆ ಅವರು ಪೈಪೋಟಿ ನಡೆಸುತ್ತಿದ್ದಾರೆ. ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಎಂಟು ಬಾರಿ ಗೆದ್ದಿರುವ ಏಕೈಕ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ.
ಮೆಸ್ಸಿಗೆ ಗೌರವ ಡಾಕ್ಟರೇಟ್
ವಿದಾಯ ಪಂದ್ಯವನ್ನು ಆಡುವುದಕ್ಕೂ ಮುನ್ನ, ಲಿಯೋನೆಲ್ ಮೆಸ್ಸಿ ಸಾರ್ವಜನಿಕ ಸಂಸ್ಥೆಯಾದ ಬ್ಯೂನಸ್ ಐರಿಸ್ ವಿಶ್ವವಿದ್ಯಾಲಯದಿಂದ (UBA) ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು.
ಎಸೆಐಜಾ ಉಪನಗರದಲ್ಲಿರುವ ಅರ್ಜೆಂಟೀನಾ ರಾಷ್ಟ್ರೀಯ ತಂಡದ ತರಬೇತಿ ಕೇಂದ್ರದಲ್ಲಿ ವಿಶ್ವವಿದ್ಯಾಲಯವು ಈ ಗೌರವವನ್ನು ನೀಡಿತು. ರಾಷ್ಟ್ರೀಯ ತಂಡದ ಪರ ಅವರ ಸಾಧನೆ ಹಾಗೂ ಮೈದಾನದ ಒಳಗೆ ಮತ್ತು ಹೊರಗೆ ಅವರು ಬೀರಿದ ಪ್ರಭಾವವನ್ನು ಪರಿಗಣಿಸಿ, ಮೆಸ್ಸಿಗೆ ಪ್ರಮಾಣಪತ್ರ ಮತ್ತು ಪದಕ ನೀಡಿ ಸನ್ಮಾನಿಸಲಾಯಿತು.




