ಮುಖ್ಯ ವಿಷಯಕ್ಕೆ ಹೋಗಿ
The Karnataka Today
10 Oct
ಸುದ್ದಿ
ಸುದ್ದಿ

ತಟ್ಟೆ ಹಳ್ಳದ ನೀರು ಮನೆಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಾಣ; ಶಾಶ್ವತ ಪರಿಹಾರದ ಭರವಸೆ

ಭಾರೀ ಮಳೆಯಿಂದ ಹನೂರಿನ ತಟ್ಟೆ ಹಳ್ಳ ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿದರು. ಈ ವೇಳೆ ಅವೈಜ್ಞಾನಿಕ ಕಾಮಗಾರಿಯಿಂದಾದ ಹಾನಿಯನ್ನು ಪರಿಶೀಲಿಸಿದ ಅವರು, ಶಾಶ್ವತ ಪರ...

· ಚಾಮರಾಜನಗರ
ತಟ್ಟೆ ಹಳ್ಳದ ನೀರು ಮನೆಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಾಣ; ಶಾಶ್ವತ ಪರಿಹಾರದ ಭರವಸೆ
ಹಂಚಿಕೊಳ್ಳಿ:

ಚಾಮರಾಜನಗರ: ಭಾರೀ ಮಳೆಯಿಂದಾಗಿ ಹನೂರು ಪಟ್ಟಣದ ತಟ್ಟೆ ಹಳ್ಳ ತುಂಬಿ ಹರಿದ ಪರಿಣಾಮ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹನೂರು ಶಾಸಕ ಎಂ.ಆರ್.ಮಂಜುನಾಥ್, ಶಾಶ್ವತ ಪರಿಹಾರಕ್ಕಾಗಿ ಎರಡೂ ಕಡೆಗಳಲ್ಲಿ ವೈಜ್ಞಾನಿಕವಾಗಿ ಉತ್ತಮ ತಡೆಗೋಡೆ ನಿರ್ಮಿಸಿ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಸರ್ವೆ ನಡೆಸಲಾಗಿದೆ ಎಂದು ನಿವಾಸಿಗಳಿಗೆ ಭರವಸೆ ನೀಡಿದರು.

ಪಟ್ಟಣದ ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆ ಬದಿಯ ಪಡಚಿ ಕೌಡರ್ ಕಾಲೋನಿ, ದೇವಾಂಗ ಪೇಟೆ ಮತ್ತು ಬಳೆ ಪೇಟೆಗೆ ಭೇಟಿ ನೀಡಿ ನಿವಾಸಿಗಳ ಅಹವಾಲು ಸ್ವೀಕರಿಸಿದರು.

ಕಾಮಗಾರಿಯಿಂದಲೇ ಮನೆಗಳಿಗೆ ನೀರು

ಈ ಹಿಂದೆ ತಟ್ಟೆ ಹಳ್ಳದಲ್ಲಿ ಅವೈಜ್ಞಾನಿಕವಾಗಿ ಕಲ್ಲು ಕಟ್ಟಡ ನಿರ್ಮಿಸಿ, ಕೊಳಚೆ ನೀರು ಹರಿದು ಹೋಗಲು ಮಾಡಿರುವ ಕಾಮಗಾರಿಯಿಂದಲೇ ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ದೂರಿದರು.

ಹುಬ್ಬೆ ಹುಣಸೆ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ತಟ್ಟೆ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಪರಿಣಾಮ ಹಳ್ಳದ ಸಮೀಪದ ಪಡಚಿ ಗೌಡರ್ ಕಾಲೋನಿ, ದೇವಾಂಗ ಪೇಟೆಯ ಮುಖ್ಯರಸ್ತೆಯ ಹಲವಾರು ಮನೆಗಳಿಗೆ ಹಾಗೂ ಬಳೆಪೇಟೆಯ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ ಎಂದು ಶಾಸಕರು ಹೇಳಿದರು.

ಸೇತುವೆ ದುರಸ್ತಿ ಪರಿಶೀಲನೆ

ದೇವಾಂಗ ಪೇಟೆಗೆ ತೆರಳುವ ಮಾರ್ಗ ಮಧ್ಯೆ ಪೈಪ್ ಅಳವಡಿಸಿ ನಿರ್ಮಿಸಿದ್ದ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿದು ಸಿಮೆಂಟ್ ಪದರು ಕಿತ್ತುಹೋಗಿ ದೊಡ್ಡ ಗುಂಡಿಗಳು ಬಿದ್ದಿದ್ದವು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಶಾಸಕರ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ಸಿಮೆಂಟ್ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಹನೂರು ಪಟ್ಟಣದಿಂದ ಬೆಲದಕೆರೆ ತೋಟದ ಮನೆಗಳಿಗೆ ಹೋಗುವ ಮಾರ್ಗದ ಮಧ್ಯದ ಆನೆ ಹಳ್ಳದಲ್ಲಿ ತಾತ್ಕಾಲಿಕವಾಗಿ ಹಾಕಿದ್ದ ಮಣ್ಣು ಕೊಚ್ಚಿ ಹೋಗಿ ದೊಡ್ಡ ಕಂದಕ ನಿರ್ಮಾಣವಾಗಿದ್ದು, ತುರ್ತಾಗಿ ಪೈಪ್ ಅಳವಡಿಸಿ ಎರಡೂ ಬದಿಯಲ್ಲಿ ಕಲ್ಲು ಕಟ್ಟಡ ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜು ನಾಯ್ಡು, ನಟರಾಜು ಗೌಡ, ರಾಜೇಗೌಡ, ಮಹದೇವ್ ಸೇರಿದಂತೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

ಹಂಚಿಕೊಳ್ಳಿ: