ತುಳುನಾಡಿನ ‘ಮಾರ್ನೆಮಿ’ ಸಂಭ್ರಮಕ್ಕೆ ‘ಪಿಲಿವೇಷ’ದ ಮೆರುಗು!
ಮಂಗಳೂರು: ತುಳುನಾಡಿನಲ್ಲಿ ‘ಮಾರ್ನೆಮಿ’ (ಮಹಾನವಮಿ) ಆರಂಭವಾಗುತ್ತಿದ್ದಂತೆಯೇ ಪಿಲಿ ವೇಷ (ಹುಲಿ ವೇಷ)ದ ಅಬ್ಬರವೂ ಶುರುವಾಗಲಿದೆ. ಹುಲಿವೇಷ ತುಳುನಾಡಿನ ಸಂಸ್ಕೃತಿಯ ಭಾಗ. ಮನರಂಜನೆ ಅಷ್ಟೇ ಅಲ್ಲ, ಹರಕೆ ಹೊತ್ತವರು ಸೇವೆಯ...

ಮಂಗಳೂರು: ತುಳುನಾಡಿನಲ್ಲಿ ‘ಮಾರ್ನೆಮಿ’ (ಮಹಾನವಮಿ) ಆರಂಭವಾಗುತ್ತಿದ್ದಂತೆಯೇ ಪಿಲಿ ವೇಷ (ಹುಲಿ ವೇಷ)ದ ಸದ್ದು ಗದ್ದಲವೂ ಆರಂಭವಾಗಲಿದೆ.
ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗ ಹುಲಿವೇಷ. ಇದು ಕೇವಲ ಮನರಂಜನೆಯ ಸಾಧನವಲ್ಲ, ಬದಲಾಗಿ ಹರಕೆ ಹೊತ್ತವರು ಸೇವೆಯ ರೂಪದಲ್ಲಿ ಹುಲಿವೇಷ ಧರಿಸಿ ತಮ್ಮ ಹರಕೆ ತೀರಿಸುವ ಭಕ್ತಿಪೂರ್ವಕ ಕಲೆಯಾಗಿದೆ.
ಕರಾವಳಿಯ ವಿಶಿಷ್ಟ ನೃತ್ಯ ಪ್ರಕಾರಗಳಲ್ಲಿ ಹುಲಿವೇಷಕ್ಕೆ ಪ್ರಮುಖ ಸ್ಥಾನವಿದೆ. ಹುಲಿಯು ದುರ್ಗಾ ದೇವಿಯ ವಾಹನವಾಗಿದೆ. ದೇವಿಯ ಅನುಗ್ರಹವನ್ನು ಪಡೆಯಲು ಮತ್ತು ದುಷ್ಟ ಶಕ್ತಿಗಳನ್ನು ದೂರವಿಡುವ ಸಂಕೇತವಾಗಿ ಈ ಹುಲಿವೇಷದ ಆಚರಣೆಯನ್ನು ನಡೆಸಲಾಗುತ್ತದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಲೇ ನವರಾತ್ರಿಯೊಂದಿಗೆ ಹುಲಿವೇಷವು ಬೆಸೆದುಕೊಂಡಿದೆ.
ಹುಲಿ ವೇಷ ಧರಿಸುವವರಲ್ಲಿ ಹಲವು ವಿಧದ ಜನರಿದ್ದಾರೆ. ಇವರಲ್ಲಿ ಸೇವೆಯ ರೂಪದಲ್ಲಿ ಹುಲಿ ವೇಷ ಹಾಕುವವರ ಸಂಖ್ಯೆಯೇ ಅಧಿಕ. ಇನ್ನು ಕೆಲವರು ಜೀವನದ ಕಷ್ಟದ ಸಮಯದಲ್ಲಿ ದೇವರಿಗೆ ಹರಕೆ ಹೊತ್ತಿರುತ್ತಾರೆ. ಸಂಕಷ್ಟಗಳು ದೂರವಾಗುತ್ತಿದ್ದಂತೆಯೇ ಹುಲಿವೇಷ ಧರಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಅಲ್ಲದೆ, ಪರೋಪಕಾರದ ಉದ್ದೇಶಕ್ಕೂ ಈ ಕಲೆ ಬಳಕೆಯಾಗುತ್ತಿದೆ. ಕೆಲವರು ಹುಲಿವೇಷದ ಮೂಲಕ ಹಣ ಸಂಗ್ರಹಿಸಿ ಅದನ್ನು ಅಗತ್ಯವಿರುವವರಿಗೆ ನೀಡುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. ಕೇವಲ ಹಿಂದೂಗಳಷ್ಟೇ ಅಲ್ಲದೆ, ಅನ್ಯಧರ್ಮೀಯರು ಕೂಡ ಹುಲಿವೇಷ ಧರಿಸುತ್ತಾರೆ. ಇದು ಈ ಭಾಗದ ಸೌಹಾರ್ದ ಪರಂಪರೆಯ ಪ್ರತೀಕವಾಗಿಯೂ ಆಚರಿಸಲ್ಪಡುತ್ತಿದೆ.
ತಾಸೆ–ಡೋಲಿನ ವಾದನದ ಮಧ್ಯೆ ಹುಲಿ ಕುಣಿತ..
ಹುಲಿಗಳ ಹೆಜ್ಜೆಯನ್ನು ‘ಪೌಲ’ ಎಂದು ಕರೆಯಲಾಗುತ್ತದೆ. ಹುಲಿ ವೇಷಧಾರಿಗಳು ವ್ರತಾಚರಣೆಯನ್ನು ಪಾಲಿಸುತ್ತಾರೆ. ಈ ಸಮಯದಲ್ಲಿ ಮಾಂಸಹಾರ ಮತ್ತು ಮದ್ಯಪಾನವನ್ನು ವರ್ಜಿಸುತ್ತಾರೆ. ಹುಲಿವೇಷದ ಹಿಂದಿನ ದಿನ ಊದು ಪೂಜೆ ನಡೆಯುತ್ತದೆ. ಹುಲಿ ಮುಖವಾಡ, ಚಡ್ಡಿ, ಝಂಡೆ, ವಾದ್ಯಗಳಾದ ತಾಸೆ, ಡೋಲು, ಟ್ರಂಪೆಟ್ ಮತ್ತು ಬಣ್ಣ ಸೇರಿದಂತೆ ಹುಲಿವೇಷದ ಎಲ್ಲ ಪರಿಕರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಯ ನಂತರ ವೇಷಧಾರಿಗಳು ಒಂದರಿಂದ ಎರಡು ತಾಸು ನೃತ್ಯ ಮಾಡುತ್ತಾರೆ. ‘ರಂಗ್’ ಎಂಬ ಬಣ್ಣ ಹಚ್ಚುವ ಸಂಪ್ರದಾಯ ನಡೆಯುತ್ತದೆ. ಬಣ್ಣ ಹಚ್ಚುವ ಕಾರ್ಯ ಮುಗಿದ ಬಳಿಕ ಹುಲಿ ವೇಷಧಾರಿಗಳು ದೈವಸ್ಥಾನ ಮತ್ತು ದೇವಸ್ಥಾನಗಳಿಗೆ ತೆರಳಿ ನಮಸ್ಕರಿಸಿ ಕುಣಿತವನ್ನು ಆರಂಭಿಸುತ್ತಾರೆ. ಅಂದು ಸಂಜೆಯವರೆಗೆ ಈ ಕುಣಿತದ ಸೇವೆ ಮುಂದುವರಿಯುತ್ತದೆ.
ಹುಲಿವೇಷ ಧರಿಸಿ ದೇವಿಯ ಸಮ್ಮುಖದಲ್ಲಿ ಹರಕೆ ಮತ್ತು ಸೇವೆ ಸಲ್ಲಿಸುವುದು ಸಾಂಪ್ರದಾಯಿಕ ಆಚರಣೆಯಾಗಿದೆ. ಹುಲಿ ವೇಷಧಾರಿ ವ್ಯಕ್ತಿಯ ತಂದೆ–ತಾಯಿ, ಆಪ್ತ ಸಂಬಂಧಿಕರು, ಬಂಧುಗಳು ಹಾಗೂ ಸ್ನೇಹಿತರು ಹುಲಿ ವೇಷಧಾರಿಗೆ ನೋಟಿನ ಹಾರವನ್ನು ಹಾಕುತ್ತಾರೆ. ಹೀಗಾಗಿ ಈ ಅವಧಿಯಲ್ಲಿ ನೋಟಿನ ಹಾರದ ವ್ಯಾಪಾರವು ಭರದಿಂದ ಸಾಗುತ್ತದೆ.
ಹುಲಿವೇಷ ಎಂಬುದು ಒಂದು ಕಠಿಣ ಪ್ರಕ್ರಿಯೆಯಾಗಿದೆ. ಹುಲಿವೇಷ ಹಾಕುವವರ ಮೈಮೇಲಿನ ಕೂದಲುಗಳನ್ನು ತೆಗೆಯಲಾಗುತ್ತದೆ. ಅವರಿಗೆ ಬಣ್ಣ ಹಚ್ಚುವ ಕೆಲಸವು ಇಡೀ ರಾತ್ರಿ ನಡೆಯುತ್ತದೆ. ಬಣ್ಣ ಹಚ್ಚಿಸಿಕೊಳ್ಳಲು ಇಡೀ ರಾತ್ರಿ ಜಾಗರಣೆ ಮಾಡುವ ಅವರು, ಮರುದಿನ ಬೆಳಿಗ್ಗೆಯಿಂದ ರಾತ್ರಿ ವರೆಗೂ ಕುಣಿಯುತ್ತಾರೆ. ಆದರೂ, ಅವರಲ್ಲಿ ಉತ್ಸಾಹವು ಉಕ್ಕಿ ಹರಿಯುತ್ತಿರುತ್ತದೆ. ಇವೆಲ್ಲವೂ ದೇವಿಯ ಮಹಿಮೆ ಎಂದು ಅವರು ನಂಬುತ್ತಾರೆ.
ಹುಲಿವೇಷವು ಇದೀಗ ಸ್ಪರ್ಧೆಯ ಕಣವಾಗಿಯೂ ಬದಲಾಗಿದೆ. ಕಂಬಳ ಸ್ಪರ್ಧೆಯಂತೆಯೇ ಹುಲಿ ಕುಣಿತ ಸ್ಪರ್ಧೆಯೂ ಇಲ್ಲಿ ಜನಪ್ರಿಯವಾಗಿದೆ. ಸಾಂಪ್ರದಾಯಿಕವಾಗಿ ಹುಲಿವೇಷ ಪ್ರದರ್ಶಿಸುವ ಅನೇಕ ತಂಡಗಳಿವೆ. ಒಂದೊಂದು ತಂಡದಲ್ಲಿ 100ರ ವರೆಗೂ ಸದಸ್ಯರು ಇರುತ್ತಾರೆ. ಹುಲಿವೇಷ ತಂಡದಲ್ಲಿ ಅಪ್ಪೆ ಪಿಲಿ (ತಾಯಿ ಹುಲಿ), ಕಿನ್ನಿ ಪಿಲಿ (ಮರಿ), ಕಪ್ಪು ಪಿಲಿ, ಚಿಟ್ಟೆ ಪಿಲಿ ಅಥವಾ ಬಲಿಪೆ (ಚಿರತೆ, ಚೀತಾ) ಹೀಗೆ ವಿವಿಧ ರೀತಿಯ ವೇಷಧಾರಿಗಳು ಇರುತ್ತಾರೆ.
ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಹುಲಿಕುಣಿತ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ‘ಪಿಲಿನಲಿಕೆ’, ‘ಪಿಲಿಪರ್ಬ’ ಎಂದು ಕರೆಯಲ್ಪಡುವ ಈ ಸ್ಪರ್ಧೆಗಳಲ್ಲಿ ಹಲವು ತಂಡಗಳು ಭಾಗವಹಿಸುತ್ತವೆ. ವಿಜೇತ ತಂಡಗಳಿಗೆ ₹10 ಲಕ್ಷದ ವರೆಗೂ ಬಹುಮಾನವನ್ನು ನೀಡಲಾಗುತ್ತದೆ. ಸಾವಿರಾರು ಜನರು ಕುಳಿತು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ, ಊಟ–ತಿಂಡಿ, ಡಿಜಿಟಲ್ ಪರದೆಗಳು, ಥರ್ಡ್ ಅಂಪೈರ್ ವ್ಯವಸ್ಥೆ ಮತ್ತು ಸೆಲೆಬ್ರಿಟಿಗಳ ಪಾಲ್ಗೊಳ್ಳುವಿಕೆ ಹೀಗೆ ವರ್ಷದಿಂದ ವರ್ಷಕ್ಕೆ ಈ ಸ್ಪರ್ಧೆಗಳ ವೈಭವವು ಹೆಚ್ಚುತ್ತಲೇ ಇದೆ.
ತಾಸೆಯ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುವುದು, ಒಂಟಿ, ಇಬ್ಬರು, ಮೂವರು, ನಾಲ್ವರು, ಐವರು ಪೌಲ ಹಾಕುವುದು, ತಾಯಿ ಹುಲಿ ಮರಿಗಳನ್ನು ಮುದ್ದಿಸುವುದು, ಹುಲಿಗಳು ಕುಳಿತುಕೊಳ್ಳುವ ಶೈಲಿ, ಮೈಗೆ ಹಚ್ಚಿಕೊಳ್ಳುವ ಬಣ್ಣ, ಹಣವನ್ನು ಬಾಯಿಯಿಂದಲೇ ಎತ್ತುವುದು, 38 ಕೆ.ಜಿ.ಯ ಅಕ್ಕಿಯ ಮುಡಿಯನ್ನು ಹಲ್ಲಿನಲ್ಲಿ ಕಚ್ಚಿ ಎತ್ತಿ ಹಿಂದಕ್ಕೆ ಎಸೆಯುವುದು ಮುಂತಾದ ನಿಯಮಗಳು ಈ ಸ್ಪರ್ಧೆಯಲ್ಲಿ ನಿರ್ಣಾಯಕವಾಗಿರುತ್ತವೆ. ಸಂಪ್ರದಾಯವನ್ನು ಪಾಲಿಸಿರುವುದನ್ನು ಪರಿಗಣಿಸಿ ಅಂಕಗಳನ್ನು ನೀಡಲಾಗುತ್ತದೆ.
ಈ ಭಾಗದಲ್ಲಿ ನೂರಕ್ಕೂ ಹೆಚ್ಚು ಹುಲಿವೇಷ ತಂಡಗಳಿದ್ದು, ಗಣೇಶ ಚತುರ್ಥಿ ಮತ್ತು ದೊಡ್ಡ ಕಾರ್ಯಕ್ರಮಗಳ ಸಂದರ್ಭದಲ್ಲಿ ರಾಜ್ಯ, ಹೊರರಾಜ್ಯಗಳಷ್ಟೇ ಅಲ್ಲದೆ ವಿದೇಶಗಳಿಂದಲೂ ಈ ತಂಡಗಳಿಗೆ ಬೇಡಿಕೆ ಬರುತ್ತದೆ. ಅವರು ಅಲ್ಲಿಗೆ ತೆರಳಿ ಸೇವೆ ಸಲ್ಲಿಸುತ್ತಾರೆ. ಜಾತ್ರೆಗಳು ಮತ್ತು ಶೋಭಾಯಾತ್ರೆಗಳು ನಡೆದರೆ, ಅಲ್ಲಿ ಹುಲಿವೇಷ ಇರುವುದು ಖಚಿತ. ಅಷ್ಟರಮಟ್ಟಿಗೆ ಈ ಕಲೆ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಬನ್ನಿ, ಹುಲಿವೇಷಕ್ಕೆ ಜೈಕಾರ ಹಾಕೋಣ.




