ಮುಖ್ಯ ವಿಷಯಕ್ಕೆ ಹೋಗಿ
The Karnataka Today
7 Oct
ಸುದ್ದಿ
ಸುದ್ದಿ

ಎರಡು ಪರೀಕ್ಷೆ, ಎತ್ತರ ಪ್ರದೇಶದ ತಂತ್ರಜ್ಞಾನದಲ್ಲಿ ಮಹತ್ವದ ಸಾಧನೆ: DRDO ಸಾಧಿಸಿದ್ದೇನು?

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಎತ್ತರ ಪ್ರದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡು ಮಹತ್ವದ ಸಾಧನೆಗಳನ್ನು ದಾಖಲಿಸಿದೆ. ಸಮುದ್ರ ಮಟ್ಟದಿಂದ 21 ಕಿ.ಮೀ. ಎತ್ತರದಲ್ಲಿ ಸ್ವದೇಶಿ ಕಣ್ಗಾವಲು...

ಎರಡು ಪರೀಕ್ಷೆ, ಎತ್ತರ ಪ್ರದೇಶದ ತಂತ್ರಜ್ಞಾನದಲ್ಲಿ ಮಹತ್ವದ ಸಾಧನೆ: DRDO ಸಾಧಿಸಿದ್ದೇನು?
ಹಂಚಿಕೊಳ್ಳಿ:

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಎತ್ತರದ ಪ್ರದೇಶಗಳ ತಂತ್ರಜ್ಞಾನದಲ್ಲಿ ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದೆ. ಸಮುದ್ರ ಮಟ್ಟದಿಂದ 21 ಕಿ.ಮೀ. ಎತ್ತರದಲ್ಲಿ ದೇಶೀಯ ಕಣ್ಗಾವಲು ವೇದಿಕೆಯನ್ನು ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ DRDO ಗಮನ ಸೆಳೆದಿದ್ದು, ಇದರ ಜೊತೆಗೆ ಲಡಾಖ್‌ನ ನಿಯೋಮಾದಲ್ಲಿ ಹೊಸ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಲೈವ್ ಜಂಪ್‌ನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈ ಎರಡು ವ್ಯವಸ್ಥೆಗಳನ್ನು ಆಗ್ರಾದ ಏರಿಯಲ್ ಡೆಲಿವರಿ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADRDE) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

ಹೈ-ಆಲ್ಟಿಟ್ಯೂಡ್ ಪ್ಲಾಟ್‌ಫಾರ್ಮ್ (HAPS) ಅನ್ನು ದೀರ್ಘಕಾಲದ ಸ್ಟ್ರಾಟೋಸ್ಫೆರಿಕ್ ವೈಮಾನಿಕ ಕಣ್ಗಾವಲು ವೇದಿಕೆಯಾಗಿ ರೂಪಿಸಲಾಗುತ್ತಿದ್ದು, ಅಡ್ವಾನ್ಸ್ಡ್ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ (AHAP) ಅನ್ನು ಎತ್ತರದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ಯಾರಾಟ್ರೂಪರ್‌ಗಳನ್ನು ಇಳಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ.

21 ಕಿ.ಮೀ. ಎತ್ತರ ತಲುಪಿದ HAPS

ಪರೀಕ್ಷಾರ್ಥ ಹಾರಾಟದ ಅವಧಿಯಲ್ಲಿ ಸ್ವದೇಶಿ HAPS ಸಮುದ್ರ ಮಟ್ಟದಿಂದ 21 ಕಿ.ಮೀ. ಎತ್ತರವನ್ನು ತಲುಪಿತು. ಬಳಿಕ 20 ಕಿ.ಮೀ. AMSL ಎತ್ತರದಲ್ಲಿ 30 ನಿಮಿಷಗಳಿಗೂ ಅಧಿಕ ಕಾಲ ಸ್ಥಿರವಾಗಿ ಉಳಿದು, ನಂತರ ಅದನ್ನು ನಿಯಂತ್ರಿತ ರೀತಿಯಲ್ಲಿ ಕೆಳಕ್ಕೆ ಇಳಿಸಲಾಯಿತು.

ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಮರಳಿ ಪಡೆಯಲಾಗಿದ್ದು, ಬಳಿಕ ಹಾರಾಟದ ಕಾರ್ಯಕ್ಷಮತೆಯ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಲಾಯಿತು. ಹಾರಾಟದ ಪೂರ್ತಿ ಅವಧಿಯಲ್ಲಿ ಗ್ರೌಂಡ್ ಕಂಟ್ರೋಲ್ ಸ್ಟೇಷನ್‌ಗೆ ನೈಜ-ಸಮಯದ ವಿಡಿಯೋ ಹಾಗೂ ಇತರ ವಾಹನ ನಿಯತಾಂಕಗಳು ನಿರಂತರವಾಗಿ ಲಭ್ಯವಿದ್ದವು.

ಈ ವೇದಿಕೆಯು ನಿರೀಕ್ಷಿತ ಹಾರಾಟದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ ಎಂದು ದತ್ತಾಂಶವು ದೃಢಪಡಿಸಿದೆ ಎಂದು DRDO ತಿಳಿಸಿದೆ. HAPS ನಲ್ಲಿ ಇನರ್ಷಿಯಲ್ ಮೆಷರ್‌ಮೆಂಟ್ ಯುನಿಟ್, GPS ರಿಸೀವರ್, ಆನ್‌ಬೋರ್ಡ್ ಕ್ಯಾಮೆರಾಗಳು ಹಾಗೂ ಎತ್ತರ ನಿಯಂತ್ರಣ ವ್ಯವಸ್ಥೆ ಸೇರಿದಂತೆ ವಿವಿಧ ಉಪಕರಣಗಳು ಮತ್ತು ನಿಯಂತ್ರಣ ಎಲೆಕ್ಟ್ರಾನಿಕ್ ಪ್ಯಾಕೇಜ್‌ಗಳನ್ನು ಅಳವಡಿಸಲಾಗಿತ್ತು.

HAPS ಒಂದು ಲೈಟರ್-ದ್ಯಾನ್-ಏರ್ ವ್ಯವಸ್ಥೆಯಾಗಿದ್ದು, ಸ್ಟ್ರಾಟೋಸ್ಫಿಯರ್‌ನಲ್ಲಿ ದೀರ್ಘಕಾಲದ ವೈಮಾನಿಕ ಕಣ್ಗಾವಲು ವೇದಿಕೆಯಾಗಿ ಕಾರ್ಯನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ನಿಯೋಮಾದಲ್ಲಿ ಹೊಸ ಪ್ಯಾರಾಚೂಟ್ ಪರೀಕ್ಷೆ

ಮತ್ತೊಂದು ಪ್ರಮುಖ ಬೆಳವಣಿಗೆಯ ಭಾಗವಾಗಿ, DRDO ಲಡಾಖ್‌ನ ನಿಯೋಮಾದ ಮುದ್ ಡ್ರಾಪ್ ಝೋನ್ನಲ್ಲಿ ಅಡ್ವಾನ್ಸ್ಡ್ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ (AHAP)ನ ಮೊದಲ ಲೈವ್ ಜಂಪ್ ನಡೆಸಿತು. ಇದು ಅತ್ಯಂತ ಎತ್ತರದ ಡ್ರಾಪ್ ಝೋನ್‌ಗಳಲ್ಲಿ ಒಂದಾಗಿದೆ.

16,000 ಅಡಿ AMSL ಎತ್ತರದಿಂದ ಜಂಪ್ ನಡೆಸಲಾಗಿದ್ದು, 15,500 ಅಡಿ ಎತ್ತರದಲ್ಲಿ ಪ್ಯಾರಾಚೂಟ್ ತೆರೆದುಕೊಳ್ಳುವಂತೆ ಮಾಡಲಾಯಿತು. ತದನಂತರ ಪ್ಯಾರಾಟ್ರೂಪರ್ 13,700 ಅಡಿ ಎತ್ತರದಲ್ಲಿರುವ ನಿಯೋಮಾದಲ್ಲಿ ಸುರಕ್ಷಿತವಾಗಿ ಇಳಿದರು.

ಅತೀ ಎತ್ತರದ ಪ್ರದೇಶಗಳಲ್ಲಿ AHAPನ ಪರಿಣಾಮಕಾರಿತ್ವ ಮತ್ತು ಕಾರ್ಯತಂತ್ರದ ಬಳಕೆಯ ಸಾಮರ್ಥ್ಯವನ್ನು ಈ ಜಂಪ್ ಸಾಬೀತುಪಡಿಸಿದೆ ಎಂದು DRDO ಹೇಳಿದೆ.

AHAP ಒಂದು ಸ್ಟ್ಯಾಟಿಕ್-ಲೈನ್ ಪ್ಯಾರಾಚೂಟ್ ವ್ಯವಸ್ಥೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಟ್ರೂಪರ್‌ಗಳನ್ನು ಕೆಳಗಿಳಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ವಿವಿಧ ರೀತಿಯ ಡಿಪ್ಲಾಯ್‌ಮೆಂಟ್ ವಿಧಾನಗಳನ್ನು ಹೊಂದಿದ್ದು, 18,000 ಅಡಿ ಎತ್ತರದವರೆಗೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಭಾರತೀಯ ರಕ್ಷಣಾ ಪಡೆಗಳ ಕಾರ್ಯತಂತ್ರದ ಅಗತ್ಯಗಳಿಗೆ ಅನುಗುಣವಾಗಿ ಸುರಕ್ಷಿತ ಇಳಿಯುವಿಕೆಯ ವೇಗವನ್ನು ಒದಗಿಸುವ ರೀತಿಯಲ್ಲಿ ಈ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಇಂತಹ ಎತ್ತರದ ಪ್ರದೇಶಗಳಲ್ಲಿ ಸ್ಟ್ಯಾಟಿಕ್-ಲೈನ್ ಪ್ಯಾರಾಚೂಟ್ ಜಂಪ್‌ಗಳು ಹೆಚ್ಚಿನ ಓಪನಿಂಗ್ ಶಾಕ್ ಮತ್ತು ವೇಗದ ಇಳಿಯುವಿಕೆಯ ಕಾರಣದಿಂದ ಅತ್ಯಂತ ಸಂಕೀರ್ಣ ಹಾಗೂ ಅಪಾಯಕಾರಿಯಾಗಿರುತ್ತವೆ.

AHAP ಅನ್ನು ಕಾನ್ಪುರದ ಆರ್ಡಿನೆನ್ಸ್ ಪ್ಯಾರಾಚೂಟ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ. ಇದನ್ನು DGAQA ಪರಿಶೀಲಿಸಿದ್ದು, ಕಾನ್ಪುರದ CEMILAC, RCMA ಪ್ರಮಾಣೀಕರಿಸಿದೆ.

ಹಂಚಿಕೊಳ್ಳಿ: