ಮೂಡುಬಿದಿರೆ | ಕಂಬಳ ಓಟಗಾರರ 10 ದಿನಗಳ ತರಬೇತಿ ಶಿಬಿರ ಸಂಪನ್ನ!
ಮೂಡುಬಿದಿರೆ: ಕಂಬಳ ಸಂರಕ್ಷಣೆ ನಿರ್ವಹಣೆ ಮತ್ತು ತರಬೇತಿ ಅಕಾಡಮಿ ವತಿಯಿಂದ ಕಡಲಕೆರೆಯಲ್ಲಿ ನಡೆದ 7ನೇ ವರ್ಷದ 10 ದಿನಗಳ ಕಂಬಳದ ಓಟಗಾರರ ತರಬೇತಿ ಶಿಬಿರದಲ್ಲಿ 42 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಅಕಾಡೆಮ...

ಮೂಡುಬಿದಿರೆ: ಕಡಲಕೆರೆಯಲ್ಲಿ ಕಂಬಳ ಸಂರಕ್ಷಣೆ ನಿರ್ವಹಣೆ ಮತ್ತು ತರಬೇತಿ ಅಕಾಡಮಿ ವತಿಯಿಂದ ಆಯೋಜಿಸಲಾದ 7ನೇ ವರ್ಷದ 10 ದಿನಗಳ ಕಂಬಳದ ಓಟಗಾರರ ತರಬೇತಿ ಶಿಬಿರದಲ್ಲಿ 42 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ ಎಂದು ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಿಭಜಿತ ದ.ಕ. ಜಿಲ್ಲೆಯಿಂದ ತರಬೇತಿಗಾಗಿ ಒಟ್ಟು 123 ಮಂದಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ 72 ಮಂದಿಯನ್ನು ಹಾಗೂ ಅಂತಿಮ ಸುತ್ತಿನಲ್ಲಿ 42 ಮಂದಿಯನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಇವರಲ್ಲಿ ಪೈಂಟಿಂಗ್ ವೃತ್ತಿಯವರು, ಜೆಸಿಬಿ ಆಪರೇಟರ್‌ಗಳು, ಚಾಲಕರು ಮತ್ತು ವಿದ್ಯಾರ್ಥಿಗಳು ಇದ್ದಾರೆ, ಅಲ್ಲದೆ ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವೀಧರರೂ ಇದರಲ್ಲಿ ಸೇರಿದ್ದಾರೆ ಎಂದು ಅವರು ವಿವರಿಸಿದರು.
ಅಕ್ಟೋಬರ್ 8 ರಂದು ಸಮಾರೋಪ ಸಮಾರಂಭ ನಡೆಯಲಿದೆ. ತರಬೇತಿ ಶಿಬಿರದ ಭಾಗವಾಗಿ ಸಬ್ ಜ್ಯೂನಿಯರ್ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಕೋಟಿ ಚೆನ್ನಯ ಜೋಡುಕೆರೆ ಪ್ರಾಯೋಗಿಕ ಕಂಬಳ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಕಂಬಳ ಅಕಾಡೆಮಿಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಅವರು ನುಡಿದರು.
ಕಂಬಳ ಸಮಿತಿ ಪ್ರಮುಖರಾದ ಈದು ಜ್ವಾಲಾಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




