ಮುಖ್ಯ ವಿಷಯಕ್ಕೆ ಹೋಗಿ
The Karnataka Today
7 Oct
Latest
ಸುದ್ದಿ

ಲಡಾಖ್: ಸ್ವದೇಶಿ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಲೈವ್ ಜಂಪ್ ಯಶಸ್ವಿಯಾಗಿ ಪೂರೈಸಿದ DRDO

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಅಡ್ವಾನ್ಸ್ಡ್ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ (AHAP)ನ ಮೊದಲ ಲೈವ್ ಜಂಪ್ ನ್ನು ಲಡಾಖ್‌ನ ನ್ಯೋಮಾ (Mu...

ಲಡಾಖ್‌: ಸ್ವದೇಶಿ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಲೈವ್ ಜಂಪ್ ನಡೆಸಿದ DRDO; Video
ಹಂಚಿಕೊಳ್ಳಿ:

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನದೇ ತಂತ್ರಜ್ಞಾನದಲ್ಲಿ ಸಿದ್ಧಪಡಿಸಿರುವ ಅಡ್ವಾನ್ಸ್ಡ್ ಹೈ-ಆಲ್ಟಿಟ್ಯೂಡ್ ಪ್ಯಾರಾಚೂಟ್ (AHAP)ನ ಪ್ರಥಮ ಲೈವ್ ಜಂಪ್ ಪರೀಕ್ಷೆಯನ್ನು ಲಡಾಖ್‌ನ ನ್ಯೋಮಾ (Mudh DZ) ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಅತ್ಯಂತ ಕಠಿಣ ಎತ್ತರದ ಪ್ರದೇಶಗಳಲ್ಲಿ ಈ ಪ್ಯಾರಾಚೂಟ್ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಲಾಗಿದೆ.

ಸಮುದ್ರಮಟ್ಟದಿಂದ 16,000 ಅಡಿ ಎತ್ತರದಿಂದ ಜಿಗಿತವನ್ನು ಕೈಗೊಳ್ಳಲಾಗಿದ್ದು, 15,500 ಅಡಿ ಎತ್ತರದಲ್ಲಿ ಪ್ಯಾರಾಚೂಟ್ ತೆರೆದುಕೊಳ್ಳುವಂತೆ ಮಾಡಲಾಯಿತು. ಬಳಿಕ 13,700 ಅಡಿ ಎತ್ತರದಲ್ಲಿರುವ ನ್ಯೋಮಾ (Mudh DZ) ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲಾಯಿತು ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಅತ್ಯಂತ ಎತ್ತರದ ಪ್ರದೇಶಗಳ ಕ್ಲಿಷ್ಟಕರ ವಾತಾವರಣದಲ್ಲೂ AHAP ವ್ಯವಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಮತ್ತು ಯುದ್ಧತಂತ್ರದ ಬಳಕೆಗೆ ಸೂಕ್ತವಾಗಿದೆ ಎಂಬುದನ್ನು ಈ ಯಶಸ್ವಿ ಜಂಪ್ ಸಾಬೀತುಪಡಿಸಿದೆ ಎಂದು ಸಚಿವಾಲಯ ತಿಳಿಸಿದೆ. ತೆಳುವಾದ ಗಾಳಿ ಹಾಗೂ ಸವಾಲಿನ ಭೂಪ್ರದೇಶವಿರುವ ಎತ್ತರದ ಸ್ಥಳಗಳಲ್ಲಿ ಪ್ಯಾರಾಚೂಟ್‌ನ ನಿಯೋಜನಾ ಕಾರ್ಯಕ್ಷಮತೆ, ರಚನಾತ್ಮಕ ಸ್ಥಿರತೆ ಹಾಗೂ ಕಾರ್ಯಾಚರಣೆಯ ಸಾಮರ್ಥ್ಯವನ್ನು ಈ ಪರೀಕ್ಷೆಯು ಖಚಿತಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೈನಿಕರನ್ನು ಸಾಮೂಹಿಕವಾಗಿ ಪ್ಯಾರಾಚೂಟ್ ಮೂಲಕ ಕೆಳಗಿಳಿಸಲು ಬಳಸುವ ಸ್ಟ್ಯಾಟಿಕ್-ಲೈನ್ ಪ್ಯಾರಾಚೂಟ್ ವ್ಯವಸ್ಥೆಯಾಗಿ AHAP ನ್ನು DRDOದ ಆಗ್ರಾದ ಏರಿಯಲ್ ಡೆಲಿವರಿ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADRDE) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

ಈ ವ್ಯವಸ್ಥೆಯನ್ನು ಕಾನ್ಪುರದ ಆರ್ಡಿನೆನ್ಸ್ ಪ್ಯಾರಾಚೂಟ್ ಫ್ಯಾಕ್ಟರಿ (OPF)ನಲ್ಲಿ ನಿರ್ಮಿಸಲಾಗಿದ್ದು, ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶ್ಯುರನ್ಸ್ (DGAQA) ಇದರ ಪರಿಶೀಲನೆ ನಡೆಸಿದೆ. ಜತೆಗೆ ಕಾನ್ಪುರದ ಸೆಂಟರ್ ಫಾರ್ ಮಿಲಿಟರಿ ಏರ್‌ವರ್ತಿನೆಸ್ ಆ್ಯಂಡ್ ಸರ್ಟಿಫಿಕೇಶನ್ (CEMILAC), RCMA ಇದಕ್ಕೆ ಪ್ರಮಾಣೀಕರಣ ನೀಡಿದೆ.

AHAP ಹಲವು ಬಗೆಯ ನಿಯೋಜನಾ ವಿಧಾನಗಳನ್ನು ಒಳಗೊಂಡಿದ್ದು, 18,000 ಅಡಿ ಎತ್ತರದವರೆಗೆ ಕಾರ್ಯಾಚರಣೆ ನಡೆಸುವ ಕ್ಷಮತೆ ಹೊಂದಿದೆ. ಎತ್ತರದ ಪ್ರದೇಶಗಳಲ್ಲಿ ಭಾರತೀಯ ರಕ್ಷಣಾ ಪಡೆಗಳ ಯುದ್ಧತಂತ್ರದ ಅಗತ್ಯಗಳಿಗೆ ತಕ್ಕಂತೆ ಇಳಿಯುವ ವೇಗವನ್ನು ಈ ವ್ಯವಸ್ಥೆಯಲ್ಲಿ ಹೊಂದಿಸಲಾಗಿದೆ.

ಇಂತಹ ಎತ್ತರದ ಸ್ಥಳಗಳಲ್ಲಿ ಸ್ಟ್ಯಾಟಿಕ್-ಲೈನ್ ಪ್ಯಾರಾಚೂಟ್ ಜಂಪ್ ಮಾಡುವುದು ಬಹಳ ಸವಾಲಿನ ಕೆಲಸವಾಗಿದೆ. ಪ್ಯಾರಾಚೂಟ್ ತೆರೆಯುವಾಗ ಉಂಟಾಗುವ ತೀವ್ರವಾದ ಆಘಾತ ಹಾಗೂ ಇಳಿಯುವಿಕೆಯ ವೇಗ ಇದಕ್ಕೆ ಮುಖ್ಯ ಕಾರಣಗಳಾಗಿವೆ.

ಸ್ವದೇಶಿ ಪ್ಯಾರಾಚೂಟ್ ವ್ಯವಸ್ಥೆಯ ಮೊದಲ ಲೈವ್ ಜಂಪ್ ಯಶಸ್ವಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ ಡಿಒ, ರಕ್ಷಣಾ ಪಡೆಗಳು, ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (DPSUs) ಮತ್ತು ಕೈಗಾರಿಕಾ ವಲಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ‘ಆತ್ಮನಿರ್ಭರ ಭಾರತ’ದತ್ತ ಇಟ್ಟ ಮತ್ತೊಂದು ಮಹತ್ವದ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಕ್ಷಣಾ ಕಾರ್ಯದರ್ಶಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ DRDO ಅಧ್ಯಕ್ಷ ರಾಜೇಶ್ ಕುಮಾರ್ ಸಿಂಗ್ ಅವರು ಸಹ AHAP ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಿದ್ದ ತಂಡಗಳನ್ನು ಅಭಿನಂದಿಸಿದ್ದಾರೆ.

ಹಂಚಿಕೊಳ್ಳಿ: