ಜೋಡಿ ಕೊಲೆ ಪ್ರಕರಣ: ಸಿರಿಬಾಗಿಲಿನ ಜಯೇಶ್‌ಗೆ 2 ವರ್ಷಗಳ ಕಾರಾಗೃಹ ಶಿಕ್ಷೆ!
ಪುತ್ತೂರು: ಜೋಡಿ ಕೊಲೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಕಟಕಟೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ ಪ್ರಕರಣದಲ್ಲಿ ರೌಡಿಶೀಟರ್ ಸಿರಿಬಾಗಿಲು ನಿವಾಸಿ ಜಯೇಶ್ (41) ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪುತ್ತೂ...

ಪುತ್ತೂರು: ಜೋಡಿ ಕೊಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಕಟಕಟೆಯಿಂದ ಹಾರಿ ಪರಾರಿಯಾಗಲು ಪ್ರಯತ್ನಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಸಿರಿಬಾಗಿಲು ನಿವಾಸಿ ರೌಡಿಶೀಟರ್ ಜಯೇಶ್ (41) ಎಂಬಾತನಿಗೆ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯವು ಸೋಮವಾರ 2 ವರ್ಷಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದೆ.
2008ರಲ್ಲಿ ಶಿರಾಡಿಯಲ್ಲಿ ನಡೆದ ತಾಯಿ ಮತ್ತು ಮಗುವಿನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಯೇಶ್‌ನ ವಿಚಾರಣೆಯು 2016ರ ಏಪ್ರಿಲ್ 5ರಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ಜಯೇಶ್ ಕಟಕಟೆಯಿಂದ ಜಿಗಿದು ಓಡಿಹೋಗಲು ಯತ್ನಿಸಿದ್ದನು. ನ್ಯಾಯಾಲಯದ ಹೊರಭಾಗದಲ್ಲಿ ಕಡಬದ ಪೊಲೀಸ್ ಸಿಬ್ಬಂದಿ ಮಹೇಶ್ ಹಾಗೂ ಪುತ್ತೂರಿನ ಓರ್ವ ವಕೀಲರು ಸೇರಿ ಸಾರ್ವಜನಿಕರು ಆತನನ್ನು ಹಿಡಿದು ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಅವರು ಶಿಕ್ಷೆಯನ್ನು ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.
ಪುತ್ತೂರು ನಗರ ಠಾಣೆಯ ಅಂದಿನ ಎಸ್.ಐ ಖಾದರ್ ಅವರು ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಮನೋಜ್ ಕುಮಾರ್ ಅವರು ವಾದವನ್ನು ಮಂಡಿಸಿದ್ದರು.
ಘಟನೆ ಹಿನ್ನೆಲೆ: ಕಡಬ ತಾಲ್ಲೂಕಿನ ಶಿರಾಡಿ ನಿವಾಸಿ ಜಯೇಶ್, 2008ರಲ್ಲಿ ತನ್ನ ದೊಡ್ಡಪ್ಪನ ಮಗನಾದ ಲೋಹಿತ್ ಅವರ ಪತ್ನಿ ಸೌಮ್ಯ ಮತ್ತು ಆಕೆಯ ಮೂರು ವರ್ಷದ ಮಗುವನ್ನು ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಿಕೊಂಡು ಕೇರಳದಲ್ಲಿ ಅಡಗಿಕೊಂಡಿದ್ದನು. ಕೇರಳದ ಅಲಪುರಂ ಜಿಲ್ಲೆಯಲ್ಲಿ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ ಆತ, 2012ರ ಅ. 10ರಂದು ತನ್ನ ಪತ್ನಿಯೊಂದಿಗೆ ಜಗಳವಾಡಿಕೊಂಡು ತೆಂಗಿನ ಮರವೇರಿ ಕುಳಿತಿದ್ದನು. ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಅಲ್ಲಿನ ಪೊಲೀಸರು ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ, ಆತ ಶಿರಾಡಿಯ ತಾಯಿ ಮತ್ತು ಮಗುವಿನ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಎಂಬುದು ಬೆಳಕಿಗೆ ಬಂದಿತ್ತು.
ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆ
ಶಿರಾಡಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಜಯೇಶ್, ಅಲ್ಲಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿದ್ದನು. ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಡದ ಸದಸ್ಯನೆಂದು ಪರಿಚಯಿಸಿಕೊಂಡು ₹100 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಹಣ ನೀಡದಿದ್ದರೆ ಬಾಂಬ್ ಸ್ಪೋಟದ ಮೂಲಕ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಪ್ರಕರಣದಲ್ಲಿಯೂ ನಾಗಪುರ ನ್ಯಾಯಾಲಯವು ಜಯೇಶ್‌ಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.




