ಮುಖ್ಯ ವಿಷಯಕ್ಕೆ ಹೋಗಿ
The Karnataka Today
5 Oct
Latest
ಪ್ರಮುಖ

ಪೆಂಡಾಲ್ ಗಣಪತಿ ವಿಸರ್ಜನೆಗೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ನಡುವೆ ಅನುಮತಿ ನೀಡಿದ ಪೊಲೀಸ್ ವರಿಷ್ಟಧಿಕಾರಿಗೆ ನೋಟೀಸ್

ದೇವಿಗೆರೆ ಪೆಂಡಾಲ್ ಗಣಪತಿ ವಿಸರ್ಜನೆವಿಚಾರ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಜಟಾಪಟಿ

ಸಂಪಾದಕೀಯ ಡೆಸ್ಕ್· 1 ನಿಮಿಷ ಓದು
ಹಂಚಿಕೊಳ್ಳಿ:

ಪೆಂಡಾಲ್ ಗೌರಿ-ಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಭಾನ್ವಿತಾ ಅವರು ನಡುವೆ ತೀವ್ರ ಜಟಾಪಟಿ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು, ಎಸ್ಪಿಗೆ ನೋಟಿಸ್ ಜಾರಿ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಗಣೇಶ ವಿಸರ್ಜನೆಗೆ ನಿಷೇಧವಿದ್ದರೂ ವಿಸರ್ಜನೆಗೆ ಅವಕಾಶ ನೀಡಿದ ಹಾಗೂ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಲತಾಕುಮಾರಿ ಅವರು ಎಸ್ಪಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಅಕ್ಟೋಬರ್ 3 ರಂದು ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರು ಡೋಲು ಬಾರಿಸುವ ಮೂಲಕ ಗಣೇಶ ಮೆರವಣಿಗೆಗೆ ಚಾಲನೆ ನೀಡಿದ್ದರು. ಆದರೆ, ದೇವಿಗೆರೆಯಲ್ಲಿ ಮೂರ್ತಿ ವಿಸರ್ಜನೆಗೆ ನಿಷೇಧಾಜ್ಞೆ ಇದ್ದರೂ ಆದೇಶ ಪಾಲಿಸದೆ ಗಣಪತಿ ವಿಸರ್ಜನೆ ಮಾಡಲಾಗಿದೆ ಹಾಗೂ ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಎಸ್ಪಿ ಸುಭಾನ್ವಿತಾ ಅವರ ವಿರುದ್ಧ ಜಿಲ್ಲಾಧಿಕಾರಿ ಗರಂ ಆಗಿದ್ದಾರೆ.

ಎಸ್ಪಿಗೆ ಕಾರಣ ನೋಟಿಸ್

ನಿಮ್ಮ ಈ ಬೇಜವಾಬ್ದಾರಿತನವು ಸರ್ಕಾರಿ ನೌಕರರಿಗೆ ತರವಲ್ಲದ್ದಾಗಿದೆ. ವಹಿಸಿದ ಕಾರ್ಯ ನಿರ್ವಹಿಸದೇ ಉದ್ಧಟತನ ತೋರಿದ್ದೀರಿ. ನಿಮ್ಮ ವಿರುದ್ಧ ಶಿಸ್ತುಕ್ರಮಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಏಕೆ ಶಿಫಾರಸು ಮಾಡಬಾರದು? ಎಂದು ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದು, ಖುದ್ದು ಹಾಜರಾಗಿ ಲಿಖಿತ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಈಗಾಗಲೇ ನಾಲ್ಕು ಗಣೇಶ ಮೂರ್ತಿಗಳ ವಿಸರ್ಜನೆಗೆ ಇದೇ ದೇವಿಗೆರೆಯಲ್ಲಿ ಅವಕಾಶ ನೀಡಲಾಗಿತ್ತು. ಹೀಗಿದ್ದರೂ 70 ವರ್ಷಗಳ ಇತಿಹಾಸವಿರುವ ಪೆಂಡಾಲ್ ಗಣಪತಿಗೆ ವಿಸರ್ಜನೆಗೆ ನಿರ್ಬಂಧ ವಿಧಿಸಿರುವುದಕ್ಕೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ

ಹಂಚಿಕೊಳ್ಳಿ: