ಪ್ರಾಣಿ ಪ್ರೇಮಕ್ಕೆ ಹೊಸ ವ್ಯಾಖ್ಯಾನ ನೀಡಿದ ಅನಂತ್ ಅಂಬಾನಿ; ದೇಶಾದ್ಯಂತ 20 ಲಕ್ಷ ಪ್ರಾಣಿಗಳ ರಕ್ಷಣೆಗೆ ವಂತಾರಾ ಮಾಸ್ಟರ್ ಪ್ಲಾನ್!
ವಿಶ್ವ ಪ್ರಾಣಿ ದಿನದಂದು ಅನಂತ್ ಅಂಬಾನಿ ಅವರು ವಂತಾರಾದಲ್ಲಿ 'ಚಾಂಪಿಯನ್ಸ್ ಆಫ್ ಕೇರ್' ಎಂಬ ರಾಷ್ಟ್ರೀಯ ಪ್ರಾಣಿ ಕಲ್ಯಾಣ ಅಭಿಯಾನವನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ದೇಶಾದ್ಯಂತ ವರ್ಷಕ್ಕೆ 20 ಲಕ್ಷ ಬೀದಿ ಮತ್ತು ಸಮುದ...

ವಿಶ್ವ ಪ್ರಾಣಿ ದಿನದ ಅಂಗವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು, ಭಾರತದಲ್ಲಿ ಸಮುದಾಯ ಪ್ರಾಣಿಗಳ ಕಲ್ಯಾಣ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ 'ಚಾಂಪಿಯನ್ಸ್ ಆಫ್ ಕೇರ್' ಎಂಬ ಮಹತ್ವದ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಗುಜರಾತ್‌ನ ಜಾಮ್‌ನಗರದಲ್ಲಿರುವ ಪ್ರಖ್ಯಾತ 'ವಂತಾರಾ' ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿ ನಡೆದ ವಿಶೇಷ ಸಮಾವೇಶದಲ್ಲಿ ಈ ಐತಿಹಾಸಿಕ ಯೋಜನೆಗೆ ಚಾಲನೆ ನೀಡಲಾಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 50 ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳು ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಹಿರಿಯ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡು, ದೇಶಾದ್ಯಂತ ಪ್ರಾಣಿಗಳ ಆರೈಕೆಗಾಗಿ ಒಂದು ಜಂಟಿ ಕಾರ್ಯತಂತ್ರವನ್ನು ರೂಪಿಸಿದರು.
ವರ್ಷಕ್ಕೆ 20 ಲಕ್ಷ ಸಮುದಾಯ ಪ್ರಾಣಿಗಳಿಗೆ ಉಚಿತ ಆರೈಕೆ
ಈ ಹೊಸ ಯೋಜನೆಯು ಬೀದಿ ನಾಯಿಗಳು, ಬೆಕ್ಕುಗಳು, ಬೀದಿಪಾಲಾದ ಜಾನುವಾರುಗಳು, ಕುದುರೆಗಳು ಮತ್ತು ಕತ್ತೆಗಳಂತಹ ಕೆಲಸ ಮಾಡುವ ಪ್ರಾಣಿಗಳ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಉಚಿತ ಪಶುವೈದ್ಯಕೀಯ ಚಿಕಿತ್ಸೆ, ತುರ್ತು ರಕ್ಷಣಾ ಕಾರ್ಯಗಳು, ಅತ್ಯಾಧುನಿಕ ಆಶ್ರಯ ತಾಣಗಳು ಮತ್ತು ಜವಾಬ್ದಾರಿಯುತ ಸಂತಾನಶಕ್ತಿ ನಿಯಂತ್ರಣದ ಮೂಲಕ ಈ ಪ್ರಾಣಿಗಳಿಗೆ ಬೆಂಬಲ ನೀಡಲಾಗುವುದು. ಈ ರಾಷ್ಟ್ರವ್ಯಾಪಿ ಜಾಲದ ಮೂಲಕ ಪ್ರತಿ ವರ್ಷ ಸುಮಾರು 20 ಲಕ್ಷ (2 ಮಿಲಿಯನ್) ಸಮುದಾಯ ಪ್ರಾಣಿಗಳಿಗೆ ಆರೈಕೆ ಒದಗಿಸುವ ಗುರಿ ಹೊಂದಲಾಗಿದೆ.
ಪ್ರತಿಯೊಂದು ಜೀವವೂ ಅಮೂಲ್ಯ : ಅನಂತ್ ಅಂಬಾನಿ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಂತ್ ಅಂಬಾನಿ, ಪ್ರಾಣಿಗಳಿಗಾಗಿ ಸ್ವಯಂಪ್ರೇರಿತರಾಗಿ ದುಡಿಯುತ್ತಿರುವ ತಳಮಟ್ಟದ ಕಾರ್ಯಕರ್ತರನ್ನು ಶ್ಲಾಘಿಸಿದರು. ಸೀಮಿತ ಸೌಲಭ್ಯಗಳ ನಡುವೆಯೂ ಅಪಾರ ಕರುಣೆಯಿಂದ ಪ್ರತಿನಿತ್ಯ ಪ್ರಾಣಿಗಳನ್ನು ನೋಡಿಕೊಳ್ಳುತ್ತಿರುವ ಅನೇಕ ಜನರಿದ್ದಾರೆ. ದಯೆಗೆ ಯಾವುದೇ ಮಿತಿಗಳಿಲ್ಲ ಮತ್ತು ಪ್ರತಿಯೊಂದು ಜೀವಕ್ಕೂ ಗೌರವ ಹಾಗೂ ರಕ್ಷಣೆ ಸಿಗಬೇಕು ಎಂಬುದನ್ನು ಅವರ ಸೇವೆ ಎತ್ತಿ ತೋರಿಸುತ್ತದೆ. 'ಚಾಂಪಿಯನ್ಸ್ ಆಫ್ ಕೇರ್' ಮೂಲಕ ನಾವು ಅಂತಹ ಸೇವಾಕರ್ತರ ಬೆಂಬಲಕ್ಕೆ ನಿಂತು, ಪ್ರಾಣಿಗಳಿಗೆ ಉತ್ತಮ ಆರೈಕೆ ದೊರಕುವಂತೆ ಮಾಡುತ್ತೇವೆ. ನಮ್ಮ ಪಾಲಿಗೆ 'ಎವ್ರಿ ಲೈಫ್ ಮ್ಯಾಟರ್ಸ್' ಎಂಬುದು ಕೇವಲ ಮಾತಲ್ಲ, ಅದೊಂದು ಬದ್ಧತೆ ಎಂದು ಅವರು ತಿಳಿಸಿದರು.
ಒಪ್ಪಂದಕ್ಕೆ ಸಹಿ ಮತ್ತು ವಂತಾರಾ ತಾಂತ್ರಿಕ ಪ್ರವಾಸ
ಸಭೆಯಲ್ಲಿ ಭಾಗವಹಿಸಿದ್ದ AWBI ನಿಕಟಪೂರ್ವ ಅಧ್ಯಕ್ಷ ಎಸ್.ಪಿ. ಗುಪ್ತಾ ಮಾತನಾಡಿ, ಪ್ರಾಣಿಗಳಿಗೆ ಇಷ್ಟೊಂದು ಸುಧಾರಿತ ವೈದ್ಯಕೀಯ ತಂತ್ರಜ್ಞಾನ ಮತ್ತು ವಿಶ್ವದರ್ಜೆಯ ಆರೈಕೆ ನೀಡುತ್ತಿರುವ ಇಂತಹ ಕೇಂದ್ರವನ್ನು ನಾನು ಪ್ರಪಂಚದ ಬೇರೆಲ್ಲೂ ನೋಡಿಲ್ಲ. ಅನಂತ್ ಅಂಬಾನಿಯವರ ಈ ವೈಯಕ್ತಿಕ ಕಾಳಜಿ ಅಭಿನಂದನೀಯ ಎಂದರು.
ವಂತಾರಾ ಮತ್ತು ಭಾಗವಹಿಸಿದ ಎಲ್ಲಾ 50 ಕ್ಕೂ ಹೆಚ್ಚು ಸಂಸ್ಥೆಗಳ ನಡುವೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ಇದು ಜ್ಞಾನ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ತಳಮಟ್ಟದ ಅಗತ್ಯಗಳಿಗೆ ತಕ್ಷಣ ಸ್ಪಂದಿಸುವ ಔಪಚಾರಿಕ ವ್ಯವಸ್ಥೆಯನ್ನು ಸೃಷ್ಟಿಸಿದೆ.
ವಂತಾರಾ ಪ್ರವಾಸ: ಕಾರ್ಯಕ್ರಮದ ಪ್ರತಿನಿಧಿಗಳು ರಕ್ಷಿಸಲ್ಪಟ್ಟ ಆನೆಗಳು, ವನ್ಯಮೃಗಗಳು, ಜೀಬ್ರಾ ಮತ್ತು ಹುಲ್ಲೆಗಳಿಗಾಗಿ ವಂತಾರಾದಲ್ಲಿ ನಿರ್ಮಿಸಲಾಗಿರುವ ವಿಶ್ವದರ್ಜೆಯ ನೈಸರ್ಗಿಕ ವಾಸಸ್ಥಾನ ಹಾಗೂ ಸೂಪರ್ ಸ್ಪೆಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆಯನ್ನು ವೀಕ್ಷಿಸಿದರು.
ಸುಸ್ಥಿರ ಮೂಲಸೌಕರ್ಯ
ಅಲ್ಪಾವಧಿಯ ಪರಿಹಾರಗಳ ಬದಲಾಗಿ, ಸ್ಥಳೀಯ ಆಶ್ರಯ ತಾಣಗಳಿಗೆ ದೀರ್ಘಕಾಲದ ಬಲ ತುಂಬಲು ವಂತಾರಾ ಯೋಜನೆ ರೂಪಿಸಿದೆ:
ಸಲಕರಣೆ ಪೂರೈಕೆ: ಮೊಬೈಲ್ ಪಶುವೈದ್ಯಕೀಯ ಆಂಬ್ಯುಲೆನ್ಸ್, ಆಟೋಮ್ಯಾಟಿಕ್ ರಕ್ಷಣಾ ಉಪಕರಣಗಳು ಮತ್ತು ರೋಗನಿರ್ಣಯ ಸಾಧನಗಳನ್ನು ಒದಗಿಸಲಾಗುತ್ತದೆ.
ಹಸಿರು ಇಂಧನ ಮತ್ತು ನೈರ್ಮಲ್ಯ: ಪ್ರಾಣಿ ಆಶ್ರಯ ತಾಣಗಳನ್ನು ಸ್ವಾವಲಂಬಿಯಾಗಿಸಲು ಸೋಲಾರ್ ಪವರ್ ಸಿಸ್ಟಮ್, ಮಳೆನೀರು ಕೊಯ್ಲು ಹಾಗೂ ಸುಧಾರಿತ ಒಳಚರಂಡಿ ವ್ಯವಸ್ಥೆಗಳನ್ನು ನಿರ್ಮಿಸಲಾಗುವುದು.
ಸಾಂಕ್ರಾಮಿಕ ತಡೆ: ರೋಗನಿರೋಧಕ ಕ್ವಾರಂಟೈನ್ ವಿಭಾಗಗಳು ಹಾಗೂ ಯುವಜನರಲ್ಲಿ ಪ್ರಾಣಿ ದಯೆ ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಈ ಅಭಿಯಾನದಡಿ ನಡೆಸಲಾಗುತ್ತದೆ.




