ಜಿಯೋ ಐಪಿಒ: 1150 ರೂ. ನಿಂದ 1220 ರೂಪಾಯಿ ಪ್ರೈಸ್ ಬ್ಯಾಂಡ್ ನಿರೀಕ್ಷೆ; ಇಲ್ಲಿದೆ ಮಾಹಿತಿ
ಮುಕೇಶ್ ಅಂಬಾನಿ ಒಡೆತನದ ಜಿಯೋ ಫ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಶೀಘ್ರದಲ್ಲೇ ಭಾರತದ ಅತಿದೊಡ್ಡ ಐಪಿಒ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸುಮಾರು 37,700 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿರುವ ಈ ಐಪಿಒ ಅಕ್ಟೋಬರ್ ತಿಂ...

ಷೇರು ಮಾರುಕಟ್ಟೆಯಲ್ಲಿ ಐಪಿಒಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿದೆ. ಹೂಡಿಕೆದಾರರು ಸಣ್ಣವರು ಅಥವಾ ದೊಡ್ಡವರು ಎಂಬ ಭೇದವಿಲ್ಲದೆ ಶೇರ್‌ಗಳನ್ನು ಖರೀದಿಸಲು ಪೈಪೋಟಿ ನಡೆಸುತ್ತಿದ್ದಾರೆ. ಕಳೆದ 2-3 ತಿಂಗಳುಗಳಲ್ಲಿ ಬಂದ ಬಹುತೇಕ ಐಪಿಒಗಳು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದ್ದವು. ಆದರೆ, ಎಸ್‌ಬಿಐ ಫಂಡ್ಸ್ ಮ್ಯಾನೇಜ್‌ಮೆಂಟ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನಂತಹ ಮೆಗಾ ಐಪಿಒಗಳು ಹೂಡಿಕೆದಾರರಿಗೆ ನಿರಾಸೆ ಮೂಡಿಸಿದ್ದವು. ಇವುಗಳು ಅಲ್ಪ ಲಾಭದೊಂದಿಗೆ ಲಿಸ್ಟಿಂಗ್ ಕಂಡರೂ, ನಂತರ ಐಪಿಒ ಪ್ರೈಸ್‌ನಿಂದ ಗಣನೀಯವಾಗಿ ಕುಸಿತ ಕಂಡಿದ್ದವು. ಇದೀಗ ಹೂಡಿಕೆದಾರರು ಮತ್ತೊಂದು ಬೃಹತ್ ಐಪಿಒ ಕಡೆಗೆ ಗಮನ ಹರಿಸುತ್ತಿದ್ದಾರೆ. ಇದು ಸಾಮಾನ್ಯ ಕಂಪನಿಯಲ್ಲ; ಭಾರತೀಯ ಮಾರುಕಟ್ಟೆಯ ದೃಷ್ಟಿಯಿಂದ ಅತ್ಯಂತ ದೊಡ್ಡ ಸಂಸ್ಥೆಯಾದ ಮುಕೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಸಬ್ಸಿಡರಿ, ಅಂದರೆ ಜಿಯೋ ಫ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆಗಿದೆ. ಈ ಐಪಿಒಗೆ ಸಂಬಂಧಿಸಿದಂತೆ ಪ್ರಮುಖ ಅಪ್‌ಡೇಟ್ ಲಭ್ಯವಾಗಿದೆ. ಭಾರತದಲ್ಲಿ ಇದುವರೆಗೂ ನಡೆದ ಅತೀ ದೊಡ್ಡ ಐಪಿಒ ಇದಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದ್ದು, ಹೂಡಿಕೆದಾರರು ಕುತೂಹಲದಿಂದ ಕಾಯುತ್ತಿದ್ದಾರೆ.
ಭಾರತದ ಅತಿದೊಡ್ಡ ಐಪಿಒ ಬರಲಿದೆ!
ಹೊಸ ಶೇರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಸುಮಾರು 4 ಬಿಲಿಯನ್ ಡಾಲರ್ ವರೆಗೂ ಬಂಡವಾಳ ಸಂಗ್ರಹಿಸುವ ಗುರಿಯನ್ನು ಕಂಪನಿ ಹೊಂದಿದೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದು ಸುಮಾರು 37,700 ಕೋಟಿ ರೂಪಾಯಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಐಪಿಒ ಇದೇ ತಿಂಗಳು ಮಾರುಕಟ್ಟೆಗೆ ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೆಬಿ ಈಗಾಗಲೇ ಐಪಿಒಗೆ ಅನುಮತಿ ನೀಡಿದ್ದು, ಪ್ರೈಸ್ ಬ್ಯಾಂಡ್, ಸೈಜ್, ಲಾಟ್ ಸೈಜ್, ಇಶ್ಯು ಡೇಟ್ಸ್ ಹಾಗೂ ಲಿಸ್ಟಿಂಗ್ ಡೇಟ್ಸ್ ಒಳಗೊಂಡ 'ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್' (RHP) ಅನ್ನು ಅಕ್ಟೋಬರ್ 12ರ ನಂತರ ಸಲ್ಲಿಸುವ ಸಾಧ್ಯತೆಯಿದೆ ಎಂದು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಹೂಡಿಕೆದಾರರಿಗೆ ಕಾದಿದೆಯಾ ಅಚ್ಚರಿ?
ಇಶ್ಯು ಶೇರ್ ಪ್ರೈಸ್ ಬ್ಯಾಂಡ್ ಸುಮಾರು 1150 ರೂ. ನಿಂದ 1220 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚಿನ NSE IPO ಪ್ರೈಸ್ ಬ್ಯಾಂಡ್ 1700-1785 ರೂಪಾಯಿ ಇದ್ದು, ಅದಕ್ಕೆ ಹೋಲಿಸಿದರೆ ಇದು ಕಡಿಮೆ ಇರುವುದು ಸಕಾರಾತ್ಮಕ ಅಂಶವಾಗಿದೆ. ಫ್ರೆಶ್ ಇಶ್ಯು ಅಡಿಯಲ್ಲಿ ಸುಮಾರು 270 ಮಿಲಿಯನ್ ಶೇರ್‌ಗಳನ್ನು ಬಿಡುಗಡೆ ಮಾಡಬಹುದು ಎಂಬ ಮಾಹಿತಿ ಇದೆ. ಮೂಲಗಳ ಪ್ರಕಾರ, ದಸರಾ ಹಬ್ಬದ ಸಮಯಕ್ಕೆ ಸರಿಯಾಗಿ ಅಂದರೆ ಅಕ್ಟೋಬರ್ 21ರಂದು ಸಬ್‌ಸ್ಕ್ರೀಪ್ಷನ್ ಆರಂಭವಾಗಿ, ಅಕ್ಟೋಬರ್ 23ರಂದು ಕೊನೆಗೊಳ್ಳುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಅಕ್ಟೋಬರ್ 19ರಂದು ಯಾಂಕರ್ ಇನ್ವೆಸ್ಟರ್‌ಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ. ಅಕ್ಟೋಬರ್ 26ರಂದು ಅಲಾಟ್‌ಮೆಂಟ್ ಮತ್ತು ಅಕ್ಟೋಬರ್ 28ರಂದು ಲಿಸ್ಟಿಂಗ್ ಇರಬಹುದು ಎಂದು ಊಹಿಸಲಾಗಿದೆ. ಅಕ್ಟೋಬರ್ 30ರ ಒಳಗಾಗಿ ಲಿಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಂಪನಿ ಸಜ್ಜಾಗಿದೆ ಎನ್ನಲಾಗಿದೆ.
ಜಿಯೋ ಐಪಿಓ ಜಿಎಂಪಿ ಎಷ್ಟಿರಲಿದೆ?
ಅನ್ ಅಫಿಶಿಯಲ್ ಗ್ರೇ ಮಾರ್ಕೆಟ್‌ನಲ್ಲಿ ಅಕ್ಟೋಬರ್ 6ರ ಬೆಳಗ್ಗಿನ ಮಾಹಿತಿ ಪ್ರಕಾರ, ಒಂದು ಈಕ್ವಿಟಿ ಶೇರ್ ಪ್ರೀಮಿಯಂ 160 ರೂಪಾಯಿ ಇರಬಹುದು. ಜಿಯೋ ಈ ವರ್ಷದ ಜೂನ್‌ನಲ್ಲಿ ಐಪಿಒಗಾಗಿ ದಾಖಲೆಗಳನ್ನು ಸಲ್ಲಿಸಿತ್ತು. ಸೆಬಿ ಆಗಸ್ಟ್ 28ರಂದು ಇದಕ್ಕೆ ಅನುಮೋದನೆ ನೀಡಿತ್ತು. ಸುಮಾರು 37 ಸಾವಿರದ 700 ಕೋಟಿ ರೂಪಾಯಿ ಸಂಗ್ರಹವಾದರೆ, ಇದು ಭಾರತದ ಅತಿದೊಡ್ಡ ಐಪಿಒ ಆಗಿ ದಾಖಲಾಗಲಿದೆ.
2024ರಲ್ಲಿ ಹುಂಡೈ ಮೋಟಾರ್ ಇಂಡಿಯಾ ಐಪಿಒ ಬಂದಿತ್ತು, ಆಗ ಅದು 27,859 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಇತ್ತೀಚೆಗೆ ಬಂದ ಎನ್‌ಇಎಸ್ ಸುಮಾರು 22,562 ಕೋಟಿ ರೂಪಾಯಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಎಲ್‌ಐಸಿ ಮತ್ತು ಪೇಟಿಎಂ ಇವೆ. ಇವುಗಳ ನಡುವೆ ಜಿಯೋ ಹೇಗೆ ಪ್ರದರ್ಶನ ನೀಡಲಿದೆ ಎಂದು ಹೂಡಿಕೆದಾರರು ಕಾತುರದಿಂದ ಎದುರು ನೋಡುತ್ತಿದ್ದಾರೆ.
Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಕೇವಲ ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಈ ಕುರಿತ ಅಧಿಕೃತ ಮಾಹಿತಿಗಾಗಿ ಜಿಯೋ ಪ್ಲಾಟ್ ಫಾರ್ಮ್‌ಗಳಿಂದ ಅಧಿಕೃತ ಪ್ರಕಟಣೆ ಹೊರಬರಬೇಕಿದೆ. ಆದರಿಂದ ಇದ ಕೇವಲ ಮಾಹಿತಿ ಆಗಿದ್ದು, ಹೂಡಿಕೆ ಮಾಡುವವರಿಗೆ ಯಾವುದ ಸಲಹೆಯನ್ನು ನೀಡುವುದಿಲ್ಲ.




