ಮಂತ್ರಾಲಯ: ನಕಲಿ ವೆಬ್‌ಸೈಟ್ ಹಾವಳಿ, ಅಧಿಕೃತ ಸೈಟ್‌ನಲ್ಲಿ ಮಾತ್ರ ರೂಂ ಬುಕ್ ಮಾಡಿ!
ಮಂತ್ರಾಲಯಕ್ಕೆ ಆಗಮಿಸುವ ರಾಯರ ಭಕ್ತರು ಎಚ್ಚರವಹಿಸಬೇಕು. ಮಠದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ರೂಂ ಬುಕ್ ಮಾಡಿಕೊಳ್ಳಿ. ಈ ಕುರಿತು ಮಂತ್ರಾಲಯದ ಆಡಳಿತ ಮಂಡಳಿ ಮಹತ್ವದ ಸೂಚನೆ ನೀಡಿದೆ.

ರಾಯಚೂರು (ಅ.10) ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುವ ಅತ್ಯಂತ ಪ್ರಸಿದ್ಧ ಕ್ಷೇತ್ರ ಮಂತ್ರಾಲಯ ಆಡಳಿತ ಮಂಡಳಿ ಭಕ್ತರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಮಂತ್ರಾಲಯಕ್ಕೆ ಆಗಮಿಸುವ ರಾಯರ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಪ್ರಮುಖವಾಗಿ ಮಂತ್ರಲಾಯಕ್ಕೆ ಬರವು ಭಕ್ತರು ಮಂತ್ರಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ರೂಂ ಬುಕ್ ಮಾಡಿಕೊಳ್ಳಲು ಸೂಚಿಸಿದೆ. ಮಠದ ರೂಂಗಳು ಫುಲ್ ಆಗಿದ್ದರೆ ಎಲ್ಲಿಯೂ ಕೊಠಡಿಗಳು ಬುಕ್ ಆಗುವುದಿಲ್ಲ. ಈ ಕುರಿತು ಮೋಸ ಹೋಗಬೇಡಿ ಎಂದು ಎಚ್ಚರಿಕೆ ನೀಡಿದೆ.
ಮಠದ ಆಡಳಿತ ಮಂಡಳಿ ಈ ಎಚ್ಚರಿಕೆ ನೀಡಿದ್ದು ಯಾಕೆ
ಮಂತ್ರಾಲಯದ ಮಠದ ವೆಬ್‌ಸೈಟ್ ಮಾದರಿಯಲ್ಲಿ ಹಲವು ನಕಲಿ ವೆಬ್‌ಸೈಟ್ ಮಾಡಿ ಭಕ್ತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ನಕಲಿ ವೆಬ್‌ಸೈಟ್ ಮೂಲಕ ಭಕ್ತರಿಗೆ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ನಕಲಿ ವೆಬ್‌ಸೈಟ್‌ಗಳು ಕೊಠಡಿಗಳು ಖಾಲಿ ಇರುವುದಾಗಿ ತೋರಿಸುತ್ತದೆ. ಭಕ್ತರು ನಕಲಿ ಅರಿವಿಲ್ಲದೆ ಹಣ ಪಾವತಿ ಮಾಡಿ ಕೊಠಡಿ ಬುಕ್ ಮಾಡಿಕೊಳ್ಳುತ್ತಾರೆ. ಆದರೆ ಮಂತ್ರಾಲಯಕ್ಕೆ ಬಂದಾಗ ಕೊಠಡಿಯೂ ಇಲ್ಲ, ಇತ್ತ ಹಣವೂ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮಠದ ಆಡಳಿತ ಮಂಡಳಿ ಎಚ್ಚರಿಕ ನೀಡಿದೆ.
ಭಕ್ತರ ಗೋಳಾಟ ತಪ್ಪಿಸಲು ಶ್ರೀಮಠದಿಂದ ವಿಡಿಯೋ ಬಿಡುಗಡೆ ಮಾಡಲಾಗಿದೆ. ಶ್ರೀಮಠದ ಮೀಡಿಯಾ ಇನ್ ಚಾರ್ಜ್ ಶ್ರೀನಿಧಿ ವಿಡಿಯೋ ಬಿಡುಗಡೆ ಮಾಡಿ ಭಕ್ತರಿಗೆ ಮಾಹಿತಿ ನೀಡಿದ್ದಾರೆ. ಶ್ರೀಮಠದ ರೂಂಗಳು ಫುಲ್ ಆಗಿದ್ರೆ ಎಲ್ಲಿಯೂ ರೂಂಗಳು ಬುಕ್ ಆಗಲ್ಲ. ಶ್ರೀಮಠದ ವೈಬ್ ಸೈಟ್ ಮಾದರಿಯಲ್ಲಿ ಹತ್ತಾರು ನಕಲಿ ವೈಬ್ ಸೈಟ್ ಮಾಡಿದ ಖದೀಮರು ಜನರಿಗೆ ವಂಚನೆ ಮಾಡುತ್ತಿದ್ದಾರೆ. ಮಂತ್ರಾಲಯಕ್ಕೆ ಬಂದಾಗ ತಮ್ಮ ಹೆಸರಿನ ರೂಂ ಬುಕ್ ಆಗದೇ ಇದ್ದಾಗ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಶ್ರೀನಿಧಿ ಹೇಳಿದ್ದಾರೆ.
ಈ ವಂಚನೆ ಕುರಿತು ಶ್ರೀಮಠದ ಸಿಬ್ಬಂದಿ ಮುಂದೆ ಹಲವು ಭಕ್ತರು ನೋವು ತೋಡಿಕೊಂಡಿದ್ದಾರೆ. ನಕಲಿ ವೈಬ್ ಸೈಟ್ ತೋರಿಸಿ ರೂಂ ಬುಕ್ ಮಾಡಿದ್ದೇವೆ ಎಂದು ಭಕ್ತರು ಹೇಳಿದ್ದಾರೆ. ಮಂತ್ರಾಲಯ ಮಠಕ್ಕೆ ಒಂದೇ ವೈಬ್ ಸೈಟ್ ಇದೆ. ಮಂತ್ರಾಲಯದ ಅಧಿಕೃತ ವೆಬ್‌ಸೈಟ್ www.srsmatha.org ಬಳಸಿ ರೂಂ ಬುಕ್ ಮಾಡಿ, ಇತರ ಯಾವುದೇ ನಕಲಿ ವೆಬ್‌ಸೈಟ್ ಮೂಲಕ ಕೊಠಡಿ ಬುಕ್ ಮಾಡಿಕೊಳ್ಳಬೇಡಿ ಎಂದು ಮಾಹಿತಿ ನೀಡಲಾಗಿದೆ. ರೂಂ ಬುಕ್ ಹಾಗೂ ಮಠದ ಸೇವೆಗಳಿಗೆ ಒಂದೇ ವೆಬ್‌ಸೈಟ್ ಇದೆ. ಹೀಗಾಗಿ ಪ್ರತಿಯೊಬ್ಬ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.




