ಜಾಲಹಳ್ಳಿ ಕ್ರಾಸ್: ಕೆಳಸೇತುವೆ ನಿರ್ಮಾಣಕ್ಕೆ ಬಾಕಿ ಉಳಿದ 26 ಆಸ್ತಿಗಳ ಸ್ವಾಧೀನಕ್ಕೆ ಸೂಚನೆ
ಜಾಲಹಳ್ಳಿ ಕ್ರಾಸ್‌ನಲ್ಲಿ ಕೆಳಸೇತುವೆ ಕಾಮಗಾರಿಗಾಗಿ ಉಳಿದ ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ. ಸರ್ವೀಸ್ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ...

ಬೆಂಗಳೂರು: ಜಾಲಹಳ್ಳಿ ಕ್ರಾಸ್‌ನಲ್ಲಿ ಕೆಳಸೇತುವೆ ಕಾಮಗಾರಿಗಾಗಿ ಉಳಿದ 26 ಆಸ್ತಿಗಳ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪಶ್ಚಿಮ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
26 ಆಸ್ತಿಗಳ ಭೂಸ್ವಾಧೀನಕ್ಕೆ ಅಗತ್ಯ ಕ್ರಮ
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಕಾಮಗಾರಿಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಜಾಲಹಳ್ಳಿ ಕ್ರಾಸ್‌ನಲ್ಲಿ ಕೆಳಸೇತುವೆ ನಿರ್ಮಾಣಕ್ಕಾಗಿ ಒಟ್ಟು 48 ಆಸ್ತಿಗಳ ಪೈಕಿ ಈಗಾಗಲೇ 22 ಆಸ್ತಿಗಳನ್ನು ಭೂಸ್ವಾಧೀನಪಡಿಸಿಕೊಂಡು ಪಾಲಿಕೆಯ ವಶಕ್ಕೆ ಪಡೆಯಲಾಗಿದೆ. ಉಳಿದ 26 ಆಸ್ತಿಗಳ ಭೂಸ್ವಾಧೀನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಭೂಸ್ವಾಧೀನ ಪಡಿಸಿರುವ ಜಾಗದಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದ ಬಳಿಕ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಂಠೀರವ ಸ್ಟುಡಿಯೋ ಸಮೀಪದ ರಸ್ತೆಯಲ್ಲಿ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಶೀಲನೆ ವೇಳೆ ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ಕೆ.ವಿ., ಮುಖ್ಯ ಎಂಜಿನಿಯರ್ ಸ್ವಯಂಪ್ರಭಾ, ಸಂಜೀವ್ ರಾಜು ಇದ್ದರು.




