ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆಗೆ ಕಡಿವಾಣ ಹಾಕಲು ಮುಂದಿನ ತಿಂಗಳು ಹೊಸ ಕಾನೂನು ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ
. ಪ್ರಶ್ನೋತ್ತರ ವೇಳೆಯಲ್ಲಿ ಜಗದೇವ್ ಗುತ್ತೇದಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಒಪ್ಪಿಕೊಂಡರು.
2021-22 ರಲ್ಲಿ ಶೇ. 35 ರಷ್ಟಿದ್ದ ಸಿಸೇರಿಯನ್ ಹೆರಿಗೆ 2022-23ರಲ್ಲಿ ಶೇ.38ಕ್ಕೆ ಹೆಚ್ಚಾಗಿದೆ. ಪ್ರಸ್ತುತ ರಾಜ್ಯದಲ್ಲಿ ಇದು ಶೇ. 46 ರಷ್ಟಿದ್ದು,
ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಿಸೇರಿಯನ್ ಹೆರಿಗೆ ಸುಲಭವಾಗಿದ್ದು, ಹೆಚ್ಚಿನ ಆದಾಯ ತರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 61 ರಷ್ಟು ಈ ಹೆರಿಗೆಯನ್ನೆ ಮಾಡಲಾಗುತ್ತದೆ.
ತಾಯಿ ಹಾಗೂ ಮಗುವಿನ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಇದನ್ನು ರದ್ದು ಮಾಡುವುದು ಅಗತ್ಯವಾಗಿದೆ.
ಸಹಜ ಹೆರಿಗೆಗೆ ಬಾಣಂತಿಯರು ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧರಿರಬೇಕಾದ ಅಗತ್ಯವಿದೆ
. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ.80-90 ರಷ್ಟು ಸಿಸೇರಿಯನ್ ಹೆರಿಗೆ ಮಾಡುತ್ತಿದ್ದು, ಮುಂದಿನ ತಿಂಗಳು ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು 2023-24ರಿಂದ ರಾಜ್ಯದಲ್ಲಿ 8 ಭ್ರೂಣ ಹತ್ಯೆ ಪ್ರಕರಣ ವರದಿಯಾಗಿದ್ದು, 46 ಜನರನ್ನು ಬಂಧಿಸಲಾಗಿದೆ.
ರಾಜ್ಯದಲ್ಲಿನ ಆಸ್ಪತ್ರೆಗಳು ಹಾಗೂ ಸ್ಕಾನಿಂಗ್ ಸೆಂಟರ್ ಗಳನ್ನು ತಪಾಸಣೆ ತೀವ್ರಗೊಳಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ತೊಡಗಿರುವವರು ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಗೆ ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ ( PCPNDT ) ಕಾಯ್ದೆಯಡಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
PCPNDT ಕಾಯ್ದೆ ಉಲ್ಲಂಘನೆಯಜಿ ರಾಜ್ಯದಲ್ಲಿ ಸ್ಕಾನಿಂಗ್ ಸೆಂಟರ್, ಮಾಲೀಕರು ಅಥವಾ ಡಾಕ್ಟರ್ ವಿರುದ್ಧ 136 ಪ್ರಕರಣ ದಾಖಲಿಸಲಾಗಿದೆ.
76 ಜನರ ವಿರುದ್ಧ ದಂಡ ವಿಧಿಸಲಾಗಿದ್ದು, 65 ಕೇಸ್ ಗಳ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಬಾಕಿಯಿದೆ ಎಂದು ಸಚಿವರು ಹೇಳಿದರು