ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ಸಿಕ್ಕಿದೆ. ಜೊತೆಗೆ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (NTPC) ಸಂಭಾವ್ಯ ಸ್ಥಳಗಳಲ್ಲಿ ಪ್ರಾಥಮಿಕ ಅಧ್ಯಯನಗಳನ್ನು ನಡೆಸಲು ಅನುಮತಿ ಸಿಕ್ಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.
NTPC ಅಧ್ಯಯನ ಮಾಡಲು ಮೂರು ಸ್ಥಳಗಳನ್ನು ಗುರುತಿಸಿದ್ದು ಇದನ್ನು ಸಚಿವ ಸಂಪುಟ ಒಪ್ಪಲಿಲ್ಲ. ಸಂಭಾವ್ಯ ಕಾರ್ಯಸಾಧ್ಯ ಪರ್ಯಾಯಗಳಿಗಾಗಿ ಇಡೀ ರಾಜ್ಯವನ್ನು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲು ನಾವು ನಿರ್ಧರಿಸಿದ್ದೇವೆ. ನಂತರ ರಾಜ್ಯ ಸರ್ಕಾರವು ಪರಿಣಿತರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತದೆ ಎಂದು ಎಚ್ ಕೆ ಪಾಟೀಲ್ ಹೇಳಿದರು.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಾವು ಪರಮಾಣು ಯೋಜನೆ ಹೊಂದುವ ಅಗತ್ಯವಿದೆ ಎಂದು ಒಪ್ಪಿಕೊಂಡಿದ್ದೇವೆ. ಆದರೆ ಸ್ಥಳದ ವಿಷಯದಲ್ಲಿ, ಅವರು ಎಲ್ಲಾ ಸಂಭಾವ್ಯ ಪರ್ಯಾಯಗಳನ್ನು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಬೇಕು.
ನಂತರ ಪರಿಣಿತರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಪ್ರಸ್ತುತ NTPC ಗುರುತಿಸಿರುವ ಮೂರು ಸ್ಥಳಗಳು ವಿಜಯಪುರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿವೆ. ವಿವರವಾದ ಚರ್ಚೆಯ ನಂತರ ವಿವಿಧ ಕಾರಣಗಳಿಗಾಗಿ ಅವುಗಳನ್ನು ಪರಿಗಣಿಸಲಾಗಿಲ್ಲ ಎಂದು ಎಚ್ ಕೆ ಪಾಟೀಲ್ ಹೇಳಿದರು.
ಸಚಿವ ಸಂಪುಟ ತೆಗೆದುಕೊಂಡ ಪ್ರಮುಖ ತೀರ್ಮಾನಗಳು: * ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಪ್ರವಾಸಿ ಸರ್ಕ್ಯೂಟ್ ಅನ್ನು ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ ಮೂಲಕ ಅಂದಾಜು 2,166.22 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಪಾಟೀಲ್ ಹೇಳಿದರು.
ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿರುವ 126 ಕೆರೆಗಳನ್ನು ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ತುಂಬಿಸುವ ನೀರಾವರಿ ಯೋಜನೆಯ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕೆಲಸವನ್ನು 128.00 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.
ವಿಧಿವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯಗಳಿಗಾಗಿ 32 ಮೊಬೈಲ್ ವಿಧಿವಿಜ್ಞಾನ ವಾಹನಗಳನ್ನು (ಫ್ಯಾಬ್ರಿಕೇಶನ್ + ಎಸ್‌ಒಸಿ ಕಿಟ್‌ಗಳೊಂದಿಗೆ) 2,20,40 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಸಹ ಅನುಮೋದನೆ ನೀಡಲಾಗಿದೆ
ರಾಯಚೂರು ತಾಲ್ಲೂಕಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಒಟ್ಟು 24.50 ಕೋಟಿ ರೂ. ವೆಚ್ಚದಲ್ಲಿ ಹೊಸ ಜವಳಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಸಂಪುಟವು ಅನುಮೋದನೆ ನೀಡಿದೆ.
ಆಯುಷ್ ಇಲಾಖೆಯ ಆಯುರ್ವೇದ, ಸಿದ್ಧ ಮತ್ತು ಯುನಾನಿ (ಎಎಸ್‌ಯು) ಔಷಧ ಜಾರಿ ವಿಭಾಗ ಮತ್ತು ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ಯೊಂದಿಗೆ ವಿಲೀನಗೊಳಿಸಲು ಸಹ ಸಂಪುಟವು ನಿರ್ಧರಿಸಿದೆ
ಮೈಸೂರು ವಿಶ್ವವಿದ್ಯಾನಿಲಯದಲ್ಲಿ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ಪೀಠವನ್ನು ಸ್ಥಾಪಿಸಲು ಸಹ ಅನುಮೋದನೆ ನೀಡಲಾಯಿತು.