ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಮೈಸೂರಿನಲ್ಲಿ ಸರ್ಕಾರದ ಸಾಧನಾ ಸಮಾವೇಶ ಮುಗಿಸಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅವರ ಬೆಂಗಾವಲು ಪೊಲೀಸ್ ವಾಹನ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಇಂದು ಮಧ್ಯಾಹ್ನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಟಿಎಂ ಹೊಸೂರು ಗೇಟ್ ಬಳಿ ಬೆಂಗಾವಲು ಪೊಲೀಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಬೆಂಗಾವಲು ವಾಹನದಲ್ಲಿದ್ದ ಬೆಂಗಳೂರಿನ ದಿನೇಶ್, ಮಹೇಶ್, ಜಯಲಿಂಗು ಮತ್ತು ಕಾರ್ತಿಕ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಶ್ರೀರಂಗಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಡಿಕೆ ಶಿವಕುಮಾರ್ ಅವರಿದ್ದ ಕಾರು ಹಿಂದೆ ಬರುತ್ತಿದ್ದ ಕಾರಣ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಘಟನೆಯಲ್ಲಿ ಬೆಂಗಾವಲು ಪೊಲೀಸ್ ವಾಹನ ಸಂಪೂರ್ಣ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.