“ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು. ಈ ನಿಟ್ಟಿನಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾನುವಾರ ಸೂಚನೆ ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಬಣದ ಹೆಸರಿನಲ್ಲಿ ಸಭೆಗಳನ್ನು ಆಯೋಜಿಸುವುದನ್ನು ಒಪ್ಪಲಾಗದು. ಈ ನಿಟ್ಟಿನಲ್ಲಿ ಸಭೆ, ಸಮಾವೇಶಗಳನ್ನು ಮಾಡಲು ಯಾರೇ ಹೊರಟಿದ್ದರೂ ಕೂಡಲೇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ವಿನಂತಿಸುವೆ.
ಭಾರತೀಯ ಜನತಾ ಪಾರ್ಟಿ ಕೂಡು ಕುಟುಂಬವಿದ್ದಂತೆ, ಪಕ್ಷದ ಚೌಕಟ್ಟಿನಲ್ಲೇ ಪ್ರತಿಯೊಂದು ಸಭೆ, ಕಾರ್ಯಕ್ರಮಗಳು ನಡೆಯಬೇಕೇ ಹೊರತು ಪಕ್ಷದ ನಿಯಮ, ಧ್ಯೇಯಗಳನ್ನು ಬದಿಗೆ ಸರಿಸಿ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಸಂಘಟನೆಯ ಆಶಯಕ್ಕೆ ಪೂರಕವಾಗಿಲ್ಲದಿರುವುದನ್ನು ವಿನಮ್ರತೆಯಿಂದ ಸಹೃದಯರಲ್ಲಿ ತಿಳಿಸಬಯಸುತ್ತೇನೆಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತುಂಬುವ ಕಾರ್ಯಕ್ರಮದಡಿಯಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಎಲ್ಲ ಹಿರಿಯರೊಂದಿಗೆ ಅತೀ ಶೀಘ್ರದಲ್ಲೇ ಸಭೆ ಕರೆಯಲಿದ್ದೇನೆಂದು ತಿಳಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಠಕ್ಕರ್ ನೀಡಲು ದಾವಣಗೆರೆಯಲ್ಲಿ ವಿಜಯೇಂದ್ರ ಬಣದ ನಾಯಕರು ಇಂದು ಸಭೆ ನಡೆಸಿದ್ದಾರೆ. ದಾವಣಗೆರೆ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿಂದು ಮಧ್ಯಾಹ್ನ 12ಕ್ಕೆ ಸಭೆ ನಡೆದಿದ್ದು,
ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹರತಾಳು ಹಾಲಪ್ಪ, ಸೋಮಶೇಖರ ರೆಡ್ಡಿ, ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸೇರಿ 40ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದಾರು ಎಂದು ತಿಳಿದುಬಂದಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣಗಳ ನಡುವಿನ ಮುನಿಸು ಹೈಕಮಾಂಡ್ ಮಧ್ಯ ಪ್ರವೇಶದಿಂದ ಶಮನವಾಗಿದೆ ಎನ್ನುವಾಗಲೇ ದಾವಣಗೆರೆಯಲ್ಲಿ ಸೇರಿರುವ ಈ ಸಭೆ ಕುತೂಹಲ ಕೆರಳಿಸಿದೆ.