ಜೋಗ ಜಲಪಾತದ ಬಳಿ ರೋಪ್ ವೇ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ.
ಕಳೆದ ತಿಂಗಳು ಯೋಜನೆಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ, ಆದರೆ ಕೇಂದ್ರ ಸರ್ಕಾರದ ಅನುಮೋದನೆ ಯೋಜನೆಗೆ ಅಗತ್ಯವಿದ್ದು, ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್ ಗಾಗಿ ರಾಜ್ಯ ಸರ್ಕಾರ ಕಾದು ಕುಳಿತಿದೆ.
ಪ್ರವಾಸೋದ್ಯಮ ಇಲಾಖೆ ಮತ್ತು ಜೋಗ ಅಭಿವೃದ್ಧಿ ಪ್ರಾಧಿಕಾರ (ಜೆಎಂಎ) ಜಲಪಾತದ ಬಳಿಯ ಬಂಗಲೆಗಳ ಕೆಡವಿ ಪಂಚತಾರಾ ಹೋಟೆಲ್ ನಿರ್ಮಿಸುತ್ತಿದ್ದು, 1 ಕಿ.ಮೀ ಉದ್ದದ ರೋಪ್ ವೇ ಕೂಡ ನಿರ್ಮಿಸಲು ಮುಂದಾಗಿದೆ.
ಇದಕ್ಕಾಗಿ ಅರಣ್ಯ ಇಲಾಖೆಯು 2.39 ಹೆಕ್ಟೇರ್ ಭೂಮಿ ಹಸ್ತಾಂತರಿಸಬೇಕಿದ್ದು, ಈ ಪೈಕಿ 1.89 ಹೆಕ್ಟೇರ್ ಭೂಮಿ ಸಾಗರ ವಿಭಾಗದಲ್ಲಿದೆ. ಅಂದುಕೊಂಡಂತೆ ಆದರೆ, ಕರ್ನಾಟಕದ ಮೊದಲ ರೋಪ್ ವೇ ಯೋಜನೆಯು 2025ರ ಜುಲೈ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಜೆಎಂಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ನಡುವೆ ಯೋಜನೆಗೆ ಕೆಲ ಅರಣ್ಯ ಅಧಿಕಾರಿಗಳು ಹಾಗೂ ತಜ್ಞರು ವಿರೋಧ ವ್ಯಕ್ತಪಡಿಸಿದ್ದು, ಯೋಜನೆಯು ಅಳಿವಿನಂಚಿನಲ್ಲಿರುವ ಸಿಂಹ ಬಾಲದ ಸಿಂಗಳಿಕಗಳ ಆವಾಸ್ಥಾನವನ್ನು ನಾಶಪಡಿಸುತ್ತದೆ ಎಂದು ಹೇಳಿದ್ದಾರೆ, ಒಂದೆಡೆ ಸಚಿವ ಈಶ್ವರ್ ಖಂಡ್ರೆ ಅವರು ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ವಾಪಸ್ ಪಡೆಯಲು ಹೋರಾಟ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಖಂಡ್ರೆ ಇಬ್ಬರೂ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಬಗ್ಗೆ ಮಾತನಾಡಿದ್ದಾರೆ, ಆದರೆ, ಪ್ರವಾಸೋದ್ಯಮ ಯೋಜನೆಗಳಿಗಾಗಿ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ.
ಇದು ಭವಿಷ್ಯದಲ್ಲಿ ಅರಣ್ಯ ಭೂಮಿ ಕಡಿಮೆಯಾಗಲು ಕಾರಣವಾಗುತ್ತದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ. ರೋಪ್ ವೇ ನಿರ್ಮಾಣಕ್ಕೆ ಉದ್ದೇಶಿರುವ ಭೂ ಪ್ರದೇಶವು ಅಭಯಾರಣ್ಯದಿಂದ 4.3ಕಿ.ಮೀ ದೂರದಲ್ಲಿದೆ ಯೋಜನೆಗಳನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 183 ಕೋಟಿ ರೂಪಾಯಿ ವೆಚ್ಚದಲ್ಲಿ ಜೋಗ್ ಫಾಲ್ಸ್ ಪ್ರದೇಶದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಪಿಪಿಪಿ ಮಾದರಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.
ಗುತ್ತಿಗೆದಾರರಿಗೆ 42 ವರ್ಷಗಳ ಗುತ್ತಿಗೆ ಅವಧಿಯನ್ನು ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ, ಪಿಪಿಪಿ ಅಡಿಯಲ್ಲಿ 116 ಕೋಟಿ ರೂಪಾಯಿ ವೆಚ್ಚದಲ್ಲಿ ಪಂಚತಾರಾ ಹೋಟೆಲ್ ಮತ್ತು ರೋಪ್‌ವೇ ನಿರ್ಮಾಣ ಮಾಡಲಾಗುತ್ತದೆ.
ಕೇಂದ್ರ ಸರ್ಕಾರ ಅನುಮತಿ ದೊರೆತ ನಂತರ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ಜೆಎಂಎ ಪ್ರವಾಸೋದ್ಯಮ ಹೆಚ್ಚುವರಿ ನಿರ್ದೇಶಕ ಧರ್ಮಪ್ಪ ಟಿ ಅವರು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಅರಣ್ಯ ಭೂಮಿಯನ್ನು ಇಲಾಖೆಗೆ ತಿಳಿಯದಂತೆ ಹಲವು ವರ್ಷಗಳಿಂದ ಬಳಸಿಕೊಳ್ಳಲಾಗಿದೆ. ಸರ್ಕಾರ ಸಮೀಕ್ಷೆ ನಡೆಸಿಲ್ಲ. ಸಮೀಕ್ಷೆ ನಡೆಸಿದಾಗ ಯೋಜನೆ ಕಾರ್ಯಗತಗೊಳಿಸಲು ಅರಣ್ಯ ಭೂಮಿಯನ್ನು ಬಳಸಿರುವುದು ದೃಢಪಟ್ಟಿದೆ.
ಹೀಗಾಗಿ ತೆರವಿಗೆ ಅರ್ಜಿ ಸಲ್ಲಿಸಲಾಗಿದೆ. ಯೋಜನೆಗೆ ಯಾವುದೇ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಯೋಜನೆ ಕಾರ್ಯಗತಗೊಳಿಸಲು ಒಂದೇ ಒಂದು ಮರವನ್ನೂ ಕಡಿಯುವುದಿಲ್ಲ. ಪಂಚತಾರಾ ಹೋಟೆಲ್ ನಿರ್ಮಿಸಲು ಈಗಿರುವ ಬಂಗಲೆಗಳನ್ನು ಕೆಡವಲಾಗುತ್ತಿದೆ.
ಜೋಗ್ ಫಾಲ್ಸ್ ಪ್ರದೇಶದಲ್ಲಿ ಈಗಿರುವ ಹೋಟೆಲ್‌ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ಫಾಲ್ಸ್ ಬಳಿಯಿರುವ ಬಂಗಲೆಗಳನ್ನು ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿದೆ.
ಈ ಬಂಗಲೆ ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ ಭೂಮಿಯಲ್ಲಿದೆ. ರೋಪ್‌ವೇ ಅಂತ್ಯಕ್ಕೆ ಕಂಬಗಳ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ಸಮೀಕ್ಷೆ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ ಕೆ ದೀಕ್ಷಿತ್ ಅವರು ಮಾತನಾಡಿ, ರಾಜ್ಯ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಯೋಜನೆಯನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿದೆ ಎಂದು ಹೇಳಿಲಾಗಿತ್ತು.