ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಜನನಿಬಿಡ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, 46 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಗಳು ಆತ್ಮಹತ್ಯಾ ಬಾಂಬ್ ದಾಳಿಯನ್ನು ಸೂಚಿಸುತ್ತಿದ್ದು, ಸ್ಫೋಟದಲ್ಲಿ 21 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕ್ವೆಟ್ಟಾ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಮುಹಮ್ಮದ್ ಬಲೂಚ್ ತಿಳಿಸಿದ್ದಾರೆ.
ಈ ಮಧ್ಯೆ ಬಲೂಚ್ ಲಿಬರೇಶನ್ ಆರ್ಮಿ ದಾಳಿಯ ಹೊಣೆ ಹೊತ್ತುಕೊಂಡಿದೆ. ಪ್ರಾಥಮಿಕ ವರದಿ ಪ್ರಕಾರ ರೈಲು ನಿಲ್ದಾಣದ ಬುಕ್ಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ. ತಕ್ಷಣವೇ ರಕ್ಷಣಾ ಮತ್ತು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದು, ಮೃತಪಟ್ಟವರು ಮತ್ತು ಗಾಯಾಳುಗಳನ್ನು ಕ್ವೆಟ್ಟಾದ ನಾಗರಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಗಾಯಾಳುಗಳನ್ನು ನಿಭಾಯಿಸಲು ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಯನ್ನು ಕರೆಸಲಾಯಿತು. ಇಲ್ಲಿಯವರೆಗೆ 46 ಗಾಯಾಳುಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಮೇಲ್ಛಾವಣಿಯನ್ನೂ ಹಾನಿಗೊಳಿಸಿದ್ದು, ಇದರ ಶಬ್ದ ನಗರದ ವಿವಿಧ ಕಡೆಗಳಲ್ಲಿಯೂ ಕೇಳಿಸಿದೆ. ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಈ ಘಟನೆಯನ್ನು ಖಂಡಿಸಿದ್ದು, ಇದು ಮುಗ್ಧ ನಾಗರಿಕರನ್ನು ಗುರಿಯಾಗಿಸುವ ಭಯಾನಕ ಕೃತ್ಯ ಎಂದು ಕರೆದಿದ್ದು, ತಕ್ಷಣವೇ ತನಿಖೆಗ ಆದೇಶಿಸಿದ್ದಾರೆ.
ಉಗ್ರರು ಹೆಚ್ಚಾಗಿ ನಾಗರಿಕರು, ಕಾರ್ಮಿಕರು, ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತಿದ್ದು, ದಾಳಿ ನಡೆಸಿದವರಿಗೆ ಕಠಿಣ ಶಿಕ್ಷೆ ನೀಡದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಜಾಫರ್ ಎಕ್ಸ್‌ಪ್ರೆಸ್ ಬೆಳಗ್ಗೆ 9 ಗಂಟೆಗೆ ಪೇಶಾವರಕ್ಕೆ ಹೊರಡಬೇಕಿತ್ತು. ಸ್ಫೋಟ ಸಂಭವಿಸಿದಾಗ ರೈಲು ಇನ್ನೂ ಪ್ಲಾಟ್‌ಫಾರ್ಮ್‌ಗೆ ಬಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಲ್ದಾಣದ ಸಾಮಾನ್ಯ ಜನಸಂದಣಿಯನ್ನು ಗಮನಿಸಿದರೆ, ಹೆಚ್ಚಿನ ಪ್ರಮಾಣದಲ್ಲಿ ಸಾವು-ನೋವು ಆಗಿರುವ ಅಪಾಯವಿದೆ ಎಂದು ವರದಿ ಹೇಳಿದೆ.
ಪಾಕಿಸ್ತಾನದ ಕ್ವೆಟ್ವಾ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಆತ್ಮಾಹುತಿ ದಾಳಿ ಶಂಕೆ 21 ಸಾವು 46 ಮಂದಿಗೆ ಗಾಯ
ಪಾಕಿಸ್ತಾನ: ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸ್ಫೋಟ, 21 ಜನರು ಸಾವು, 46 ಮಂದಿಗೆ ಗಾಯ; ಪ್ರಾಥಮಿಕ ಮಾಹಿತಿಗಳು ಆತ್ಮಹತ್ಯಾ ಬಾಂಬ್ ದಾಳಿಯನ್ನು ಸೂಚಿಸುತ್ತಿದ್ದು, ಸ್ಫೋಟದಲ್ಲಿ 21 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.