“ಜಾತಿ ಗಣತಿ ಸಮೀಕ್ಷೆ ವೇಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಿಳೆಯೊಬ್ಬರ ಮೇಲೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ವಲಯ ಆಯುಕ್ತರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ತಂಡವು ಜಾತಿ ಗಣತಿ ಸಮೀಕ್ಷೆಗಾಗಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಬಹುಮಹಡಿ ವಸತಿ ಸಂಕೀರ್ಣಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ನಿವಾಸಿಯಾಗಿರುವ ಮಹಿಳೆಯೊಬ್ಬರು ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಿದ್ದು, ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.
ಮಧ್ಯಾಹ್ನ 1.15 ರಿಂದ 1.45 ರ ನಡುವೆ ಈ ಘಟನೆ ನಡೆದಿದೆ. 6ನೇ ಸೆಕ್ಟರ್‌ನ ಎಚ್‌ಎಸ್‌ಆರ್ ಲೇಔಟ್‌ನ 9ನೇ ಮುಖ್ಯ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ 402 ರಲ್ಲಿ ವಾಸಿಸುವ ಕೆ. ಪವಿತ್ರಾ ವಿರುದ್ಧ ವಲಯ ಆಯುಕ್ತರು ಬುಧವಾರ ದೂರು ದಾಖಲಿಸಿದ್ದಾರೆ. ಮಹಿಳೆ ತುಂಬಾ ಆಕ್ರಮಣಕಾರಿ ಮತ್ತು ನಿಂದನೀಯಳಾಗಿದ್ದಳು.
ಆರಂಭದಲ್ಲಿ ಪೊಲೀಸ್ ದೂರು ದಾಖಲಿಸುವ ಮನಸ್ಸು ನಮಗಿರಲಿಲ್ಲ. ಆದರೆ ಆ ಮಹಿಳೆ ಕ್ಷಮೆಯಾಚಿಸಲಿಲ್ಲ. ಆಕೆ ಮೈಸೂರಿನವಳೆಂದು ಹೇಳಿಕೊಂಡಳು.
ಬಾಗಿಲು ತೆರೆದ ತಕ್ಷಣ, ಏರು ಧ್ವನಿಯನ್ನು ಎಚ್ಚರಿಕೆ ನೀಡಿದಳು. ಅವರಿಗೆ ಆಸಕ್ತಿ ಇರದಿದ್ದರೆ, ಮಾಹಿತಿ ನೀಡುವುದಿಲ್ಲ ಎಂದು ಹೇಳಿ ಬಾಗಿಲು ಹಾಕಿಕೊಳ್ಳಬಹುದಿತ್ತು.
ಬದಲಿಗೆ ಏರು ಧ್ವನಿಯಲ್ಲಿ ನಿಂದಿಸುತ್ತಲೇ ಇದ್ದರು. ಈ ಘಟನೆಯಿಂದಾಗಿ ಸ್ಥಳದಲ್ಲಿದ್ದ ಇತರರು ಕೂಡ ಮಾಹಿತಿ ನೀಡಲು ನಿರಾಕರಿಸಿದರು. ಸಂಕೀರ್ಣದಲ್ಲಿ ಸುಮಾರು 10 ಫ್ಲಾಟ್ ಗಳಿವೆ. ಅವರ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ನಾವು ಪೊಲೀಸರಿಗೆ ವರದಿ ಮಾಡಬೇಕಾಯಿತು ಎಂದು ತಂಡದ ಭಾಗವಾಗಿದ್ದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬುಧವಾರ ದೂರು ದಾಖಲಿಸಲಾಗಿದದ್ದು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ.
ಮಹಿಳೆಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಹಿಳೆ ವಿರುದ್ಧ ಬಿಎನ್’ಸಿ 132 (ಸಾರ್ವಜನಿಕ ಸೇವಕನನ್ನು ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಬಿಎನ್’ಸಿ 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.