“: 90 ಡಿಗ್ರಿ ತಿರುವು ಸಹಿತ ಅಪಾಯಕಾರಿ ಮೇಲ್ಸೇತುವೆ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶ ಸರ್ಕಾರ 7 ಎಂಜಿನಿಯರ್ ಗಳನ್ನು ಅಮಾನತು ಮಾಡಿದೆ. ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆ ವಿವಾದಕ್ಕೆ ಕಾರಣವಾಗಿದೆ.
ಸದ್ಯ ಈ ಮೇಲ್ಸೇತುವೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರ ಇಂಜಿನಿಯರ್ ಯಾರು? ಎಂದು ಜನ ಕಿಡಿಕಾರುತ್ತಿದ್ದಾರೆ.
ಏಲ್ಲಿದೆ ಈ ವಿವಾದಿತ ಸೇತುವೆ? ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನ ಐಶ್‌ಬಾಗ್ ರೈಲ್ವೆ ಕ್ರಾಸಿಂಗ್‌ನಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ.
ಮಾರ್ಚ್ 2023ರಲ್ಲಿ ಸೇತುವೆ ನಿರ್ಮಾಣ ಪ್ರಾರಂಭವಾಗಿತ್ತು. ಈ ಸೇತುವೆಯಿಂದ ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಮತ್ತು ಟ್ರಾಫಿಕ್ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು.
ಈ ಸೇತುವೆ ರೈಲ್ವೆ ಮೇಲ್ಸೇತುವೆಯು ಮಹಾಮಾಯಿ ಕಾ ಬಾಗ್, ಪುಷ್ಪಾ ನಗರ, ರೈಲ್ವೆ ನಿಲ್ದಾಣ ಪ್ರದೇಶ ಮತ್ತು ನ್ಯೂ ಭೋಪಾಲ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಸೇತುವೆಯಿಂದ ಪ್ರತಿದಿನ ಸುಮಾರು ಮೂರು ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದರು. ‘
ವಿವಾದ ಏಕೆ? ಸೇತುವೆಯ ವಿನ್ಯಾಸದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸೇತುವೆಯ ನಿರ್ಮಾಣದಲ್ಲಿ ವಿನ್ಯಾಸ ದೋಷವಿದ್ದು, 90 ಡಿಗ್ರಿ ತಿರುವು ಇರುವುದು ವಾಹನ ಚಾಲಕರಿಗೆ ಅಸುರಕ್ಷಿತವಾಗಿರಲಿದೆ ಎಂಬುದು ತಜ್ಞರ ವಾದ.
ಅಂದಹಾಗೆ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 648 ಮೀಟರ್ ಉದ್ದ ಮತ್ತು 8.5 ಮೀಟರ್ ಅಗಲದ ಈ ಸೇತುವೆಯಲ್ಲಿ, ನೇರವಾಗಿ 90 ಡಿಗ್ರಿ ತಿರುವು ಹೊಂದಿದೆ.
ಇದು ವಾಹನ ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸೇತುವೆಯ ಒಂದು ತುದಿಯಲ್ಲಿರುವ 90 ಡಿಗ್ರಿ ತಿರುವು ಅಪಾಯಕಾರಿಯಾಗಿದೆ ಎಂದು ಜನರು ಹೇಳುತ್ತಿದ್ದಾರೆ.
ವ್ಯಾಪಕ ಆಕ್ರೋಶ ‘ಭೋಪಾಲ್‌ನ ಐಶ್‌ಬಾಗ್ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು PWD ಇಲಾಖೆ ಬರೋಬ್ಬರಿ 10 ವರ್ಷಗಳನ್ನು ತೆಗೆದುಕೊಂಡಿದೆ.
ಭ್ರಷ್ಟ ಸರ್ಕಾರಗಳ ಕೈಯಲ್ಲಿ ಅಧಿಕಾರವಿದ್ದಾಗ, ಪುಸ್ತಕಗಳಿಗೆ ಸೀಮಿತವಾದ ಅಸಮರ್ಥ ಇಂಜಿನಿಯರ್‌ಗಳ ಯೋಜನೆಗಳನ್ನು ರೂಪಿಸಿದಾಗ ಮತ್ತು ಮೆರಿಟ್ ಇಲ್ಲದೆ ಹಣ ಕೊಟ್ಟು ಪದವಿ ಪಡೆದುಕೊಂಡ ಇಂಜಿನಿಯರ್‌ಗಳಿಂದ ದುರಂತಗಳು ಸಾಧ್ಯ.
ಸೇತುವೆಯ 90 ಡಿಗ್ರಿ ತಿರುವು ಅಪಘಾತಗಳಿಗೆ ಆಹ್ವಾನ ನೀಡುತ್ತದೆ,ʼ ಎಂದು ಎಕ್ಸ್‌ನಲ್ಲಿ ಮನೀಶ್ ಚೌಧರಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತೆಯೇ ‘ಸೇತುವೆಗಾಗಿ 18 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಸೇತುವೆಯಲ್ಲಿ ಸಾವು 90 ಡಿಗ್ರಿ ಕೋನದಲ್ಲಿ ಬರುತ್ತದೆ. ಇದು ಮಧ್ಯಪ್ರದೇಶದ ರಾಜಧಾನಿಯಲ್ಲಿ ಉದ್ಭವಿಸಿರುವ ಅಭಿವೃದ್ಧಿಯ ಕೋನʼ ಎಂದು ಎಕ್ಸ್ ಬಳಕೆದಾರ ಮುಖೇಶ್ ಬರೆದುಕೊಂಡಿದ್ದಾರೆ.
ವಿವಾದದ ಬೆನ್ನಲ್ಲೇ ಎಂಜಿನಿಯರ್ ಗಳ ಅಮಾನತು ಇನ್ನು ಈ ಸೇತುವೆಯ ದೋಷಪೂರಿತ ವಿನ್ಯಾಸಕ್ಕಾಗಿ 7 ಎಂಜಿನಿಯರ್ ಗಳನ್ನು ಅಮಾನತುಗೊಳಿಸಲಾಗಿದೆ.
ಮುಖ್ಯ ಎಂಜಿನಿಯರ್‌ಗಳಾದ ಸಂಜಯ್ ಖಾಂಡೆ ಮತ್ತು ಜಿ ಪಿ ವರ್ಮಾ, ಉಸ್ತುವಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಜಾವೇದ್ ಶಕೀಲ್, ಉಸ್ತುವಾರಿ ಉಪವಿಭಾಗಾಧಿಕಾರಿ ರವಿ ಶುಕ್ಲಾ, ಉಪ ಎಂಜಿನಿಯರ್ ಉಮಾಶಂಕರ್ ಮಿಶ್ರಾ,
ಸಹಾಯಕ ಎಂಜಿನಿಯರ್ ಶಾನುಲ್ ಸಕ್ಸೇನಾ, ಉಸ್ತುವಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಶಬಾನಾ ರಜ್ಜಕ್ ಮತ್ತು ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಂ ಪಿ ಸಿಂಗ್ ಎಂಬುವವರನ್ನು ಮಧ್ಯ ಪ್ರದೇಶ ಸರ್ಕಾರ ಅಮಾನತು ಮಾಡಿದೆ ಎಂದು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ಮಾಂಡ್ಲೋಯಿ ತಿಳಿಸಿದ್ದಾರೆ
. ಸಿಎಂ ಮೋಹನ್ ಯಾದವ್ ಟ್ವೀಟ್ “ಐಶ್‌ಬಾಗ್ ಆರ್‌ಒಬಿ ನಿರ್ಮಾಣದಲ್ಲಿ ಗಂಭೀರ ನಿರ್ಲಕ್ಷ್ಯ ಕಂಡುಬಂದಿದೆ ಎಂದು ನಾನು ಗಮನಕ್ಕೆ ತಂದು ತನಿಖೆಗೆ ಆದೇಶಿಸಿದೆ. ವಿಚಾರಣಾ ವರದಿಯ ಆಧಾರದ ಮೇಲೆ, ಎಂಟು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ” ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದರು
. ಇಬ್ಬರು ಮುಖ್ಯ ಎಂಜಿನಿಯರ್‌ಗಳು ಸೇರಿದಂತೆ ಏಳು ಎಂಜಿನಿಯರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಮತ್ತು ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದರು