“ಮುಖ್ಯಮಂತ್ರಿ ಬದಲಾವಣೆಯಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಈ ಬಗ್ಗೆ ಅನಗತ್ಯ ಸಮಸ್ಯೆಯನ್ನು ಸೃಷ್ಟಿಸಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದರು.
ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಮಾಧ್ಯಮಗಳ ಪ್ರಶ್ನೆಗೆ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದರು. ‘ನೋಡಿ, ಅದು ಹೈಕಮಾಂಡ್ ಕೈಯಲ್ಲಿದೆ.
ಹೈಕಮಾಂಡ್‌ನಲ್ಲಿ ಏನು ನಡೆಯುತ್ತಿದೆ ಎಂದು ಇಲ್ಲಿ ಯಾರೂ ಹೇಳಲು ಸಾಧ್ಯವಿಲ್ಲ. ಇದು ಹೈಕಮಾಂಡ್‌ಗೆ ಬಿಟ್ಟ ವಿಷಯ ಮತ್ತು ಮುಂದಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೈಕಮಾಂಡ್‌ಗೆ ಇದೆ.
ಆದರೆ, ಅನಗತ್ಯವಾಗಿ ಯಾರೊಬ್ಬರೂ ಸಮಸ್ಯೆ ಸೃಷ್ಟಿಸಬಾರದು’ ಎಂದು ಅವರು ತಿಳಿಸಿದರು. 2023ರಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಮಾತುಕತೆ ನಡೆದಿದ್ದು,
ಉಭಯ ನಾಯಕರು ತಲಾ 2.5 ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸುತ್ತಾರೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಆದರೆ, ಈ ಬಗ್ಗೆ ಪಕ್ಷ ಯಾವುದೇ ಸ್ಪಷ್ಟನೆ ನೀಡಿಲ್ಲ ಅಥವಾ ತಿರಸ್ಕರಿಸಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದಾರೆ.