“ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನವು ಕಂದಕಕ್ಕೆ ಉರುಳಿ ಬಿದ್ದು ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಹುತಾತ್ಮರಾದ ಇಬ್ಬರು ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಅಂತಿಮ ನಮನ ಸಲ್ಲಿಸಿದರು.
ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿಗಳು ಪುಷ್ಪ ನಮನ ಸಲ್ಲಿಸಿ, ಅಂತಿಮ ಗೌರವ ಸಲ್ಲಿಸಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ.
ನಾಲ್ವರು ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ ಎಂದರು. ಇದೇ ವೇಳ ಸರಕಾರದಿಂದ ನಿಯಮಾನುಸಾರ ಹುತಾತ್ಮರ ಕುಟುಂಬಕ್ಕೆ ಸಲ್ಲಬೇಕಾದ ಸಕಲ ನೆರವನ್ನೂ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳಕರ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ಸೇನಾಧಿಕಾರಿಗಳು ಮತ್ತು ಮಾಜಿ ಸೈನಿಕರ ಸಂಘಟನೆಯವರು ಹಾಜರಿದ್ದರು. ಇದೀಗ ಯೋಧರ ಪಾರ್ಥಿವ ಶರೀರಗಳನ್ನು ಸ್ವಗ್ರಾಮಗಳಿಗೆ ರವಾನಿಸಲಾಗುತ್ತಿದ್ದು. ಬಳಿಕ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.