” ಭಾರತೀಯ ಸೇನಾಪಡೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಗುರುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಉಗ್ರರನ್ನು ಸದೆಬಡಿದಿದ್ದಾರೆ
ಜಿಲ್ಲೆಯ ಬೇಹಿಬಾಗ್ ಪ್ರದೇಶದಲ್ಲಿ ಉಗ್ರರ ಶಂಕಾಸ್ಪದ ಓಡಾಟಗಳ ಕುರಿತು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಳೆದ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದವು.
ಇಂದು ಬೆಳಿಗ್ಗೆಯೂ ಕಾರ್ಯಾಚರಣೆ ಮುಂದುವರೆದಿತ್ತು. ಉಗ್ರರು ಅಡಗಿ ಕುಳಿತಿದ್ದ ಸ್ಥಳದತ್ತ ಭದ್ರತಾ ಪಡೆಗಳು ತಲುಪುತ್ತಿದ್ದಂತೆಯೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು.
ಈ ವೇಳೆ ಕಾರ್ಯಾಚರಣೆಯನ್ನು ಎನ್ಕೌಂಟರ್ ಆಗಿ ಪರಿವರ್ತಿಸಿದ ಸೇನಾಪಡೆ ಸ್ಥಳವನ್ನು ಸುತ್ತುವರೆದು, ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡಿದರು. ಇದರಂತೆ ಐವರನ್ನು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಈ ನಡುವೆ ಕಾರ್ಯಾಚರಣೆ ವೇಳೆ ಇಬ್ಬರು ಯೋಧರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಹತ್ಯೆಯಾದ ಉಗ್ರರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ
. ಇನ್ನೂ ಕೆಲ ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.