“ಕಳೆದ 24 ಗಂಟೆಗಳಲ್ಲಿ, ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಪಂಜಾಬ್ ನ ಅಮೃತಸರ ಜಿಲ್ಲೆಯಲ್ಲಿ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಆರು ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಭಾರತ-ಪಾಕ್ ಗಡಿಯುದ್ದಕ್ಕೂ ಡ್ರಗ್ಸ್ ಕಳ್ಳಸಾಗಣೆ ಕಾರ್ಯಾಚರಣೆಗೆ ಈ ಡ್ರೋನ್‌ಗಳನ್ನು ಬಳಸಲಾಗುತ್ತಿತ್ತು ಎಂದು ವರದಿಯಾಗಿದೆ.
ಕಾರ್ಯಾಚರಣೆಯ ಸಮಯದಲ್ಲಿ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಬುಧವಾರ ರಾತ್ರಿ ಭಾರತ-ಪಾಕ್ ಗಡಿಯಲ್ಲಿರುವ ಅಮೃತಸರ ಜಿಲ್ಲೆಯ ಮೋಧೆ ಗ್ರಾಮದಲ್ಲಿ ತಾಂತ್ರಿಕ ಪ್ರತಿಕ್ರಮಗಳನ್ನು ಬಳಸಿಕೊಂಡು ಐದು ಡ್ರೋನ್‌ಗಳನ್ನು ಬಿಎಸ್ಎಫ್ ಹೊಡೆದುರುಳಿಸಿದೆ.
ಮೂರು ಪಿಸ್ತೂಲ್ ಗಳಿದ್ದ ನಾಲ್ಕು ಪ್ಯಾಕೆಟ್ಗಳು, ಹಲವು ಮ್ಯಾಗಜೀನ್ ಜೊತೆಗೆ 1.070 ಕೆ.ಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಅಟ್ಟಾರಿ ಗ್ರಾಮದ ಬಳಿ ಮತ್ತೊಂದು ಡ್ರೋನ್ ತಟಸ್ಥಗೊಳಿಸಲಾಗಿದ್ದು, ಎರಡು ಮ್ಯಾಗಜೀನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ತರಣ್ ತರಣ್ ಜಿಲ್ಲೆಯ ದಾಲ್ ಗ್ರಾಮದ ಭತ್ತದ ಗದ್ದೆಯಲ್ಲಿ ಪಿಸ್ತೂಲಿನ ಭಾಗಗಳು ಮತ್ತು ಮ್ಯಾಗಜೀನ್ ವಶಕ್ಕೆ ಪಡೆಯಲಾಗಿದೆ.