ಬಾಂಗ್ಲಾದೇಶದಲ್ಲಿ ಪದಚ್ಯುತಗೊಂಡು ಭಾರತದಲ್ಲಿ ಆಶ್ರಯ ಪಡೆದಿರುವ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ, ಬಾಂಗ್ಲಾದಲ್ಲಿ ಇಸ್ಕಾನ್ ಸಂತನನ್ನು ಬಂಧಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಪರ ರ‍್ಯಾಲಿ ನಡೆಸಿದ್ದ ಇಸ್ಕಾನ್‌ನ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿದ್ದು, ಈ ಬೆಳವಣಿಗೆ ಬಳಿಕ ಬಾಂಗ್ಲಾದಲ್ಲಿ ಪ್ರತಿಭಟನೆಗಳು ಮತ್ತಷ್ಟು ವ್ಯಾಪಕವಾಗಿ ನಡೆಯುತ್ತಿವೆ. ಇಸ್ಕಾನ್ ಸಂತನನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಹಿಂಸಾಚಾರ ನಡೆದಿದ್ದು, ವಕೀಲರೊಬ್ಬರನ್ನು ಹತ್ಯೆ ಮಾಡಲಾಗಿದೆ.
“ಸನಾತನ ಧಾರ್ಮಿಕ ಸಮುದಾಯದ ಉನ್ನತ ನಾಯಕನನ್ನು ಅನ್ಯಾಯವಾಗಿ ಬಂಧಿಸಲಾಗಿದೆ, ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಚಿತ್ತಗಾಂಗ್‌ನಲ್ಲಿ ದೇವಾಲಯವನ್ನು ಸುಡಲಾಗಿದೆ. ಹಿಂದೆ, ಅಹ್ಮದೀಯ ಸಮುದಾಯದ ಮಸೀದಿಗಳು, ದೇವಾಲಯಗಳು, ಚರ್ಚ್‌ಗಳು, ಮಠಗಳು ಮತ್ತು ಮನೆಗಳ ಮೇಲೆ ದಾಳಿ, ಧ್ವಂಸ ಮತ್ತು ಲೂಟಿ ಮಾಡಲಾಯಿತು ಮತ್ತು ಬೆಂಕಿ ಹಾಕಲಾಯಿತು ಎಂದು ಶೇಖ್ ಹಸೀನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಎಲ್ಲಾ ಸಮುದಾಯಗಳ ಜನರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಶೇಖ್ ಹಸೀನಾ ಹೇಳಿದ್ದಾರೆ. ಇಸ್ಕಾನ್ ನಿಷೇಧಿಸಲು ಬಾಂಗ್ಲಾದೇಶ ಹೈಕೋರ್ಟ್ ನಕಾರ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಆರ್ಥಿಕತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸುವ ಸಾಮರ್ಥ್ಯದ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿರುವ ಹಸೀನಾ, “ಪ್ರಸ್ತುತ ಅಧಿಕಾರ ಹಿಡಿದಿರುವವರು ಎಲ್ಲಾ ಕ್ಷೇತ್ರಗಳಲ್ಲಿ ವೈಫಲ್ಯವನ್ನು ತೋರಿಸುತ್ತಿದ್ದಾರೆ.
ದೈನಂದಿನ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ, ಜನರ ಜೀವನಕ್ಕೆ ಭದ್ರತೆಯನ್ನು ಒದಗಿಸಲು ವಿಫಲರಾಗಿದ್ದಾರೆ. ಸಾಮಾನ್ಯ ಜನರ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಡೆಯುತ್ತಿರುವ ಈ ಚಿತ್ರಹಿಂಸೆಗಳನ್ನು ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ. “ಚಿತ್ತಗಾಂಗ್‌ನಲ್ಲಿ ವಕೀಲರೊಬ್ಬರ ಹತ್ಯೆಯಾಗಿದೆ, ಈ ಹತ್ಯೆಯನ್ನು ತೀವ್ರವಾಗಿ ಪ್ರತಿಭಟಿಸಲಾಗಿದೆ
. ಈ ಹತ್ಯೆಯಲ್ಲಿ ಭಾಗಿಯಾದವರನ್ನು ಶೀಘ್ರವಾಗಿ ಪತ್ತೆಹಚ್ಚಿ ಶಿಕ್ಷಿಸಬೇಕು. ಈ ಘಟನೆಯ ಮೂಲಕ ಮಾನವ ಹಕ್ಕುಗಳನ್ನು ತೀವ್ರವಾಗಿ ಉಲ್ಲಂಘಿಸಲಾಗಿದೆ. ವಕೀಲರೊಬ್ಬರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸಲು ಹೋದರು ಮತ್ತು ಅವರನ್ನು ಸಾಯುವಂತೆ ಥಳಿಸಿರುವವರು ಯಾರೇ ಅಗಿದ್ದರೂ ಅವರು ಭಯೋತ್ಪಾದಕರಾಗಿದ್ದಾರೆ, ಅವರಿಗೆ ಶಿಕ್ಷೆಯಾಗಬೇಕು” ಎಂದು ಹಸೀನಾ ಹೇಳಿದ್ದಾರೆ.
“ಅಸಂವಿಧಾನಿಕವಾಗಿ ಅಧಿಕಾರವನ್ನು ವಶಪಡಿಸಿಕೊಂಡಿರುವ ಯೂನಸ್ ಸರ್ಕಾರ ಈ ಭಯೋತ್ಪಾದಕರನ್ನು ಶಿಕ್ಷಿಸಲು ವಿಫಲವಾದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ರೀತಿಯ ಭಯೋತ್ಪಾದನೆ ಮತ್ತು ಉಗ್ರಗಾಮಿತ್ವದ ವಿರುದ್ಧ ಒಗ್ಗಟ್ಟಾಗಿ ನಿಲ್ಲುವಂತೆ ನಾನು ದೇಶದ ಜನರಿಗೆ ಮನವಿ ಮಾಡುತ್ತೇನೆ” ಎಂದು ಹಸೀನಾ ಕರೆ ನೀಡಿದ್ದಾರೆ.
ಇಸ್ಕಾನ್‌ನ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಬಂಧನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ
ಬಾಂಗ್ಲಾದೇಶ : ಇಸ್ಕಾನ್ ಸನ್ಯಾಸಿ ಬಂಧನದ ವಿರುದ್ಧ ಧ್ವನಿ ಎತ್ತಿದ ಶೇಖ್ ಹಸೀನಾ ಬಾಂಗ್ಲಾದಲ್ಲಿ ಹಿಂದೂಗಳ ಪರ ರ‍್ಯಾಲಿ ನಡೆಸಿದ್ದ ಇಸ್ಕಾನ್‌ನ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿದ್ದು, ಈ ಬೆಳವಣಿಗೆ ಬಳಿಕ ಬಾಂಗ್ಲಾದಲ್ಲಿ ಪ್ರತಿಭಟನೆಗಳು ಮತ್ತಷ್ಟು ವ್ಯಾಪಕವಾಗಿ ನಡೆಯುತ್ತಿವೆ.