ಬೆಳಗಾವಿ: ಬಿಜೆಪಿ ಎಂಎಲ್‌ಸಿ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ, ಪ್ರಕರಣ ದಾಖಲು ಡಿಸೆಂಬರ್ 19 ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಆಪ್ತ 10ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಿಟಿ ರವಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಹಲ್ಲೆಕೋರರು ಅವರನ್ನು ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು ಎಂದು ಆರೋಪಿಸಿ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
. ಆರೋಪಿಗಳ ವಿರುದ್ಧ BNS 189(2), 191(2), 190, 126(2), 352, ಮತ್ತು 351(2) ಸೇರಿದಂತೆ ಕಾನೂನಿನ ವಿವಿಧ ವಿಭಾಗಗಳ ಅಡಿಯಲ್ಲಿ ದೂರನ್ನು ದಾಖಲಿಸಲಾಗಿದೆ.
ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವರ ಆಕ್ಷೇಪಾರ್ಹ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆರಂಭಿಕವಾಗಿ ಸಿಟಿ ರವಿ ಅವರ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ಎಂಎಲ್‌ಸಿ ಡಿಎಸ್ ಅರುಣ್, ಪ್ರೊ. ಎಸ್‌ವಿ ಸಂಕನೂರ ಅವರು ಈ ಹಿಂದೆ ಗೃಹ ಇಲಾಖೆ ಕಾರ್ಯದರ್ಶಿಗೆ ದೂರು ನೀಡಿದ್ದರು.
ಅಂತಿಮವಾಗಿ ಕಿಶೋರ ಬಿಆರ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ತಮ್ಮ ಬಂಧನದ ಕುರಿತು ಮಾತನಾಡಿದ ಸಿಟಿ ರವಿ, ಈಗಲೂ ನನಗೆ ಜೀವ ಬೆದರಿಕೆಯಿದೆ. ನನಗೆ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಸರ್ಕಾರವೇ ಹೊಣೆಯಾಗಿರುತ್ತದೆ. ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಗುರುವಾರ ರಾತ್ರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.
ನನ್ನನ್ನು ಬಂಧಿಸಿದ ನಂತರ ಪೊಲೀಸರು ನಾಲ್ಕು ಜಿಲ್ಲೆಗಳಲ್ಲಿ ಓಡಾಡಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಸಾರ್ವಜನಿಕರ ಬೆಂಬಲ ತಮಗೆ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಭದ್ರತಾ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಭದ್ರತೆಯ ದೃಷ್ಟಿಯಿಂದ ಸಿಟಿ ರವಿ ಅವರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲಾಯಿತು ಎನ್ನುವ ಸರ್ಕಾರದ ಹೇಳಿಕೆಯನ್ನು ಟೀಕಿಸಿದ್ದಾರೆ.